ಒಂದಲ್ಲಾ.. ಎರಡಲ್ಲಾ.. ಮೂರು ಸೂಪರ್ ಓವರ್
ಇತಿಹಾಸ ಬರೆದ ನೆದರ್ಲೆಂಡ್ಸ್ ನೇಪಾಳ ತಂಡ

ಒಂದಲ್ಲಾ.. ಎರಡಲ್ಲಾ.. ಮೂರು ಸೂಪರ್ ಓವರ್ಇತಿಹಾಸ ಬರೆದ ನೆದರ್ಲೆಂಡ್ಸ್  ನೇಪಾಳ ತಂಡ

ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಂದೇ ಪಂದ್ಯದಲ್ಲಿ 3 ಸೂಪರ್ ಓವರ್ ನಡೆದಿದೆ.  ನೇಪಾಳ  ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದಲ್ಲಿ, ಒಂದಲ್ಲ ಮೂರು ಸೂಪರ್ ಓವರ್‌ಗಳನ್ನು ಬೌಲ್ ಮಾಡಬೇಕಾಯಿತು.  ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ ತಂಡವು 7 ವಿಕೆಟ್‌ ಗಳಿಗೆ 152 ರನ್ ಗಳಿಸಿತು. ಬಾಸ್ ಡಿ ಲೀಡೆ 35  ಮತ್ತು ವಿಕ್ರಮ್‌ ಜಿತ್ ಸಿಂಗ್  30  ಉತ್ತಮ ಇನ್ನಿಂಗ್ಸ್ ಆಡಿದರು. ನೆದರ್ಲೆಂಡ್ ಪಂದ್ಯವನ್ನು ಗೆಲ್ಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ನೇಪಾಳ ಗೆಲುವಿಗಾಗಿ ಹೋರಾಟ ನಡೆಸಿತು. ಕೊನೆಯ ಓವರ್‌ನಲ್ಲಿ, ನಂದನ್ ಯಾದವ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ ಸ್ಕೋರ್ ಅನ್ನು ಸಮಬಲಗೊಳಿಸಿದರು. ಇದರಿಂದಾಗಿ, ಪಂದ್ಯವು ಟೈ ಆಯ್ತು. ನಂತ್ರ ಶುರುವಾಗಿದ್ದೇ ಸೂಪರ್‌ ಓವರ್‌ಗಳ ಸುರಿಮಳೆ

ಮೊದಲ ಸೂಪರ್ ಓವರ್ ಟೈ

ಮೊದಲ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನೇಪಾಳ ತಂಡ 6 ಎಸೆತಗಳಲ್ಲಿ 19 ರನ್ ಕಲೆಹಾಕಿದ್ದರು. 20 ರನ್ ಗಳ ಗುರಿ ಪಡೆದ ನೆದರ್​ಲೆಂಡ್ಸ್ 6 ಎಸೆತಗಳಲ್ಲಿ 19 ರನ್ ಬಾರಿಸಿ ಸೂಪರ್ ಓವರ್ ಅನ್ನು ಟೈ ಮಾಡಿಕೊಂಡರು. ಹೀಗಾಗಿ ಫಲಿತಾಂಶ ನಿರ್ಣಾಯಕ್ಕಾಗಿ 2ನೇ ಸೂಪರ್ ಓವರ್ ಆಡಿಸಲಾಯಿತು.

2ನೇ ಸೂಪರ್‌ ಓವರ್‌ನಲ್ಲೂ ಹೋರಾಟ  

ಇನ್ನು ಎರಡನೇ ಸೂಪರ್‌ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್​ಲೆಂಡ್ಸ್ ತಂಡವು 6 ಎಸೆತಗಳಲ್ಲಿ 17 ರನ್ ಬಾರಿಸಿದರು. 18 ರನ್ ಗಳ ಗುರಿ ಪಡೆದ ನೇಪಾಳ ಬ್ಯಾಟರ್ ಗಳು 17 ರನ್ ಗಳಿಸುವ ಮೂಲಕ ಎರಡನೇ ಸೂಪರ್ ಓವರ್ ಅನ್ನು ಟೈ ಮಾಡಿಕೊಂಡರು.

3ನೇ ಸೂಪರ್‌ ಓವರ್‌ನಲ್ಲಿ 1 ರನ್‌ಗಳ ಜಯ 

ಇನ್ನು 3ನೇ ಸೂಪರ್ ಓವರ್ ತುಂಬಾ ಇಂಟ್ರೆಸ್ಟಿಂಗ್ ಆಗಿತ್ತು. ಮೂರನೇ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ಮೊದಲ ಎಸೆತದಲ್ಲೇ ರೋಹಿತ್ ಪೌಡೆಲ್ ವಿಕೆಟ್ ಕಳೆದುಕೊಂಡಿತು. ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. 4ನೇ ಎಸೆತದಲ್ಲಿ ರೋಹಿತ್ ಸಿಂಗ್ ಕೂಡ ಔಟಾದರು. ಇದರೊಂದಿಗೆ ನೇಪಾಳ ತಂಡವು ಯಾವುದೇ ರನ್ ಗಳಿಸದೇ ಶೂನ್ಯಕ್ಕೆ ಆಲೌಟ್ ಆಯ್ತು.  ಅತ್ತ 1 ರನ್ ಗಳ ಗುರಿ ಪಡೆದ ನೆದರ್​ಲೆಂಡ್ಸ್ ಪರ ಮೈಕೆಲ್ ಲೆವಿಟ್ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದರು. ಈ ಮೂಲಕ ನೆದರ್​ಲೆಂಡ್ಸ್ ತಂಡವು ಮೂರನೇ ಸೂಪರ್​ನಲ್ಲಿ ರೋಚಕ ಗೆಲುವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೂರು ಸೂಪರ್ ಓವರ್ ಆಡಿದ ಮೊದಲ ತಂಡಗಳೆಂಬ ವಿಶ್ವ ದಾಖಲೆ ನೆದರ್​ಲೆಂಡ್ಸ್-ನೇಪಾಳ ತಂಡಗಳ ಪಾಲಾಗಿದೆ. ಅಭಿಮಾನಿಗಳು ಕೂಡ ಸೂಪರ್‌ ಓವರ್‌ಗಳ ಪೈಪೋಟಿಯನ್ನ ಕಣ್ತುಂಬಿಕೊಂಡ್ರು.

Kishor KV

Leave a Reply

Your email address will not be published. Required fields are marked *