ಯಾವುದೇ ಕ್ಷಣದಲ್ಲಿ ಯುದ್ಧ.. ಸೇನಾ ಕಾಳಗಕ್ಕೆ ಸಿದ್ಧರಾಗಿರಿ.. – ಉತ್ತರ ಕೊರಿಯಾ ಸೇನೆಗೆ ಸರ್ವಾಧಿಕಾರಿ ಕಿಮ್ ಎಚ್ಚರಿಕೆ!

ಯಾವುದೇ ಕ್ಷಣದಲ್ಲಿ ಯುದ್ಧ.. ಸೇನಾ ಕಾಳಗಕ್ಕೆ ಸಿದ್ಧರಾಗಿರಿ.. – ಉತ್ತರ ಕೊರಿಯಾ ಸೇನೆಗೆ ಸರ್ವಾಧಿಕಾರಿ ಕಿಮ್ ಎಚ್ಚರಿಕೆ!

ಇಡೀ ಜಗತ್ತು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದೆ. ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ವಿಶ್ವದ ಜನರು 2024ನ್ನು ವೆಕ್‌ಕಮ್‌ ಮಾಡುತ್ತಿದ್ದಾರೆ. ಆದ್ರೆ ಹುಚ್ಚು ದೊರೆ ಎಂದೇ ಖ್ಯಾತಿ ಪಡೆದಿರುವ ಉತ್ತರ ಕೊರಿಯಾದ ಕಿಮ್‌ ಜಾಂಗ್‌ ಉನ್‌ ಮಾತ್ರ ಯುದ್ಧಕ್ಕೆ ತಯಾರಾಗಿ ಅಂತಾ ಕರೆಕೊಟ್ಟಿದ್ದಾರೆ.

ಹೌದು, ಇಡೀ ವಿಶ್ವದ ಜನರು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದರೆ, ಅತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ದಕ್ಷಿಣ ಕೊರಿಯಾ ಮೇಲೆ ಪರಮಾಣು ದಾಳಿಯ ಹೊಸ ಬೆದರಿಕೆವೊಡ್ಡಿದ್ದು, ಪರ್ಯಾಯ ದ್ವೀಪದಲ್ಲಿ ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಯುದ್ಧಕ್ಕೆ ಸನ್ನದ್ಧವಾಗಿರಲು ಮಿಲಿಟರಿ ಶಸ್ತ್ರಾಗಾರವನ್ನು ನಿರ್ಮಿಸುವಂತೆ ಆದೇಶಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಅಬ್ಬರ! – ಒಂದೇ ದಿನದಲ್ಲಿ 636 ಹೊಸ ಕೇಸ್‌, 3 ಮಂದಿ ಸಾವು

2024ಕ್ಕೆ ತನ್ನ ದೇಶದ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ನೀತಿ ನಿರ್ಧಾರಗಳನ್ನು ನಿಗದಿಪಡಿಸಿದ ಪಕ್ಷದ ಐದು ದಿನಗಳ ಸಭೆಗಳ ಅಂತ್ಯದಲ್ಲಿ ಸುದೀರ್ಘ ಭಾಷಣ ಮಾಡಿದ ಕಿಮ್, ಅಮೆರಿಕ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಮೆರಿಕವು ವಿವಿಧ ರೀತಿಯ ಮಿಲಿಟರಿ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಆರೋಪಿಸಿದ ಕಿಮ್, ಅಗಾಧ ಯುದ್ಧ ಪ್ರತಿಕ್ರಿಯೆ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ತನ್ನ ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದು, ನಮ್ಮ ಮೇಲೆ ಆಕ್ರಮಣ ಮಾಡಲು ಶತ್ರುಗಳು ಹವಣಿಸುತ್ತಿರುವ ಹಿನ್ನೆಲೆಯಲ್ಲಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ಯಾವುದೇ ಸಮಯದಲ್ಲಿ ಯುದ್ಧವು ಭುಗಿಲೇಳಬಹುದು ಎಂದು ಕಿಮ್ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ವರ್ಷದಲ್ಲಿ ಇನ್ನೂ ಮೂರು ಗೂಢಚಾರಿ ಉಪಗ್ರಹಗಳನ್ನು ಉಡಾವಣೆ ಮಾಡುವುದು, ಮಾನವರಹಿತ ಡ್ರೋನ್‌ಗಳನ್ನು ನಿರ್ಮಿಸುವುದು ಮತ್ತು ವಿದ್ಯುನ್ಮಾನ ಯುದ್ಧ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು, ಪರಮಾಣು ಮತ್ತು ಕ್ಷಿಪಣಿ ಪಡೆಗಳನ್ನು ಬಲಪಡಿಸುವುದು ಸೇರಿದಂತೆ ಹೆಚ್ಚಿನ ಮಿಲಿಟರಿ ಅಭಿವೃದ್ಧಿಯ ಯೋಜನೆಗಳನ್ನು ಸಭೆ ಘೋಷಿಸಿದೆ. ಉತ್ತರ ಕೊರಿಯಾ ಈ ವರ್ಷ ವಿಚಕ್ಷಣ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅತ್ಯಾಧುನಿಕ ಖಂಡಾಂತರ ಕ್ಷಿಪಣಿಯನ್ನೂ(ಐಸಿಬಿಎಂ) ಪರೀಕ್ಷೆ ನಡೆಸಿದೆ.

Shwetha M