ರಷ್ಯಾ ಅಧ್ಯಕ್ಷರ ಭೇಟಿಗೆ ತೆರಳಿದ ಉತ್ತರ ಕೊರಿಯಾ ಸರ್ವಾಧಿಕಾರಿ – ಪುಟಿನ್, ಕಿಮ್ ಜಾಂಗ್ ಉನ್ ಭೇಟಿ ಸುತ್ತ ಜಗತ್ತಿನ ಚಿತ್ತ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಂಗಳವಾರ ತಮ್ಮ ಖಾಸಗಿ ರೈಲಿನ ಮುಖಾಂತರ ರಷ್ಯಾಗೆ (Russia) ತೆರಳಿದ್ದಾರೆ. ಕಿಮ್ ತನ್ನ ಖಾಸಗಿ ರೈಲಿನಲ್ಲಿ ಪ್ಯೋಂಗ್ಯಾಂಗ್‌ನಿಂದ ರಷ್ಯಾಗೆ ಪ್ರಯಾಣ ಬೆಳೆಸಿದ್ದಾರೆ. ಉನ್ನತ ಶಸ್ತ್ರಾಸ್ತ್ರ, ಮಿಲಿಟರಿ ಅಧಿಕಾರಿಗಳು ಹಾಗೂ ವಿದೇಶಾಂಗ ಸಚಿವರೊಂದಿಗೆ ಅವರು ರಷ್ಯಾ ತಲುಪಿದ್ದಾರೆ.
ಇದನ್ನೂ ಓದಿ : 14 ದಿನಗಳ ನ್ಯಾಯಾಂಗಬಂಧನ – ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಆಂಧ್ರಪ್ರದೇಶ ಬಂದ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಅಪರೂಪದ ಶೃಂಗಸಭೆಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ದೃಢಪಡಿಸಿವೆ. ಮಿಲಿಟರಿ ಸಿಬ್ಬಂದಿ ಸೇರಿದಂತೆ ಉನ್ನತ ಸರ್ಕಾರಿ ಅಧಿಕಾರಿಗಳು ಕೂಡ ತೆರಳಿದ್ದಾರೆ. ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ ಕಿಮ್ ಈ ವಾರದ ಕೊನೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಲಿದ್ದಾರೆ. ಪುಟಿನ್ ಅವರೊಂದಿಗೆ ಸಮಗ್ರ ಚರ್ಚೆಗಾಗಿ ಕಿಮ್ ರಷ್ಯಾಗೆ ಭೇಟಿ ನೀಡಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ, ಪ್ರದೇಶದ ಪರಿಸ್ಥಿತಿ ಮತ್ತು ಜಾಗತಿಕ ರಂಗದಲ್ಲಿ ಚರ್ಚಿಸಲಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಎರಡು ನಿಯೋಗಗಳ ನಡುವೆ ಮಾತುಕತೆ ನಡೆಯಲಿದ್ದು, ಅದರ ನಂತರ ಅಗತ್ಯವಿದ್ದರೆ ನಾಯಕರು ಸಂವಹನ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಕೊರಿಯಾದ ನಾಯಕ ವಿದೇಶ ಪ್ರಯಣ ಕೈಗೊಳ್ಳುವುದು ಅತ್ಯಂತ ವಿರಳ. ತನ್ನ 12 ವರ್ಷಗಳ ಅಧಿಕಾರದಲ್ಲಿ ಕಿಮ್ ಜಾಂಗ್ ಉನ್ ಕೇವಲ 7 ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲಿ 4 ಬಾರಿ ತನ್ನ ರಾಜಕೀಯ ಮಿತ್ರ ರಾಷ್ಟ್ರ ಚೀನಾಗೆ ಪ್ರವಾಸ ಕೈಗೊಂಡಿದ್ದಾರೆ. ಕಳೆದ 4 ವರ್ಷಗಳ ಬಳಿಕ ಕಿಮ್ ಜಾಂಗ್ ಉನ್‌ನ ಮೊದಲ ಪ್ರವಾಸ ಇದಾಗಿದೆ.