ಚಳಿಯಿಂದಾಗಿ ಉತ್ತರ ಭಾರತಕ್ಕೆ ನಡುಕ – ಊಟಿಯಲ್ಲಿ ಶೂನ್ಯಕ್ಕೆ ಇಳಿದ ತಾಪಮಾನ!

ಚಳಿಯಿಂದಾಗಿ ಉತ್ತರ ಭಾರತಕ್ಕೆ ನಡುಕ – ಊಟಿಯಲ್ಲಿ ಶೂನ್ಯಕ್ಕೆ ಇಳಿದ ತಾಪಮಾನ!

ಹಿಂದೆಂದೂ ಕಂಡು ಕೇಳರಿಯದ ಚಳಿಗೆ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಕಳೆದೊಂದು ವಾರದಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಜನರು ಮನೆಯಿಂದಲೇ ಹೊರಬಾರದಂತಾಗಿದೆ. ಜಮ್ಮು ಕಾಶ್ಮೀರದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯವಾಗಿ ಕರೆಯಲ್ಪಡುವ ‘ಚಿಲ್ಲಾ ಇ ಕಲನ್‌’ (ತೀವ್ರ ಚಳಿ) ಆರಂಭವಾಗಿದೆ.

ಇದನ್ನೂ ಓದಿ: ಮಧ್ಯಗಾಜಾದಲ್ಲಿ ಇಸ್ರೇಲ್‌ ಸೇನೆಯಿಂದ ವೈಮಾನಿಕ ದಾಳಿ – 68 ಪ್ಯಾಲೆಸ್ಟೀನಿಯನ್ನರು ಸಾವು!

ಹೌದು, ಚಳಿಗಾಲದ ಆರಂಭದಲ್ಲೇ ದೇಶದೆಲ್ಲೆಡೆ ಮೈನಸ್‌ ಡ್ರಿಗ್ರಿ ತಾಪಮಾನ ದಾಖಲಾಗುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಮೈನಡುಗಿಸುವಷ್ಟು ಚಳಿಯ ತೀವ್ರತೆ ಇದೆ. ಜಗದ್ವಿಖ್ಯಾತ ಅಮರನಾಥ ಯಾತ್ರೆಯ ಆರಂಭ ಸ್ಥಾನ ಪಹಲ್ಗಾಂನಲ್ಲಿ ಅತಿ ಕನಿಷ್ಠ ಉಷ್ಣಾಂಶ ಮೈನಸ್‌ 3.9 ಡಿ.ಸೆ.ನಷ್ಟು ದಾಖಲಾಗಿದೆ. ಕೊರೆಯುತ್ತಿರುವ ಚಳಿಗಾಲಕ್ಕೆ ಶ್ರೀನಗರದ ಪ್ರಸಿದ್ಧ ದಾಲ್‌ ಸರೋವರ ಹೆಪ್ಪುಗಟ್ಟಿದೆ. ಉಳಿದಂತೆ ಗುಲ್ಮಾರ್ಗ್‌ನಲ್ಲಿ – 3.5 ಡಿ.ಸೆ., ಕುಪ್ವಾರ – 2.7 ಡಿ.ಸೆ., ಶ್ರೀನಗರ – 2.1 ಡಿ.ಸೆ., ಖಾಸಿಗುಂಡ್‌ – 2.0 ಡಿ.ಸೆ.ನಷ್ಟು ಉಷ್ಣಾಂಶ ದಾಖಲಾಗಿದೆ. ಇನ್ನು ರಾಜಸ್ಥಾನದ ವಾಯವ್ಯ ಹಾಗೂ ಪಶ್ಚಿಮ ಭಾಗದಲ್ಲಿ ಭಾರೀ ಚಳಿ ಕಾಣಿಸಿಕೊಂಡಿದೆ. ಭಾನುವಾರ ಅಲ್ವಾರ್‌ನಲ್ಲಿ 5.9 ಡಿ.ಸೆ., ಝುನ್‌ಝುನು 6.5 ಡಿ.ಸೆ., ಸಿರೋಗಿ 7.1 ಡಿ.ಸೆ., ಚುರುವಿನಲ್ಲಿ 7.3 ಡಿ.ಸೆ. ಉಷ್ಣಾಂಶ ದಾಖಲಾಗಿದೆ ಎಂದು ವರದಿಯಾಗಿದೆ

ಊಟಿಯಲ್ಲಿ ಶೂನ್ಯಕ್ಕೆ ಇಳಿದ ತಾಪಮಾನ!

ಸದಾ ಹಸಿರಿನಿಂದ ಕಂಗೊಳಿಸುವ ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಉದಕಮಂಡಲ (ಊಟಿ)ಯಲ್ಲೂ ತೀವ್ರ ಚಳಿ ದಾಖಲಾಗುತ್ತಿದೆ. ಅತ್ಯಂತ ಕನಿಷ್ಠ ಉಷ್ಣಾಂಶ ಮತ್ತು ಆಹ್ಲಾದಕರ ವಾತಾವರಣಕ್ಕೆ ಖ್ಯಾತಿ ಹೊಂದಿರುವ ಊಟಿ ನಗರದಲ್ಲಿ ಭಾನುವಾರ ಉಷ್ಣಾಂಶ 1 ಡಿಗ್ರಿ ಸೆಲ್ಷಿಯಸ್‌ಗೆ ಇಳಿದಿದ್ದರೆ, ಅಲ್ಲಿದ ಕೇವಲ 3 ಕಿ.ಮೀ ದೂರದ ತಲಕುಂಡ ಪ್ರದೇಶದಲ್ಲಿ ಉಷ್ಣಾಂಶ ಶೂನ್ಯಕ್ಕೆ ತಲುಪಿತ್ತು. ಹೀಗಾಗಿ ಇಡೀ ಪ್ರದೇಶ ತೆಳುವಾದ ಹಿಮದ ಹೊದಿಕೆ ಹೊದ್ದು ಪ್ರವಾಸಿಗರನ್ನು ಭಾರೀ ಪ್ರಮಾಣದಲ್ಲಿ ಆಕರ್ಷಿಸಿತು. ಈ ನಡುವೆ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಕುಸಿದ ಕಾರಣ ಕೆಲ ಪ್ರವಾಸಿಗರು ಬೆಳಗ್ಗೆ 8.30ರವರೆಗೂ ಹೋಟೆಲ್‌ನಿಂದ ಹೊರಗೆ ಬರಲಾಗದೇ ಪರದಾಡುವಂತೆಯೂ ಆಯಿತು. ಪ್ರತಿವರ್ಷ ಅಕ್ಟೋಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ನೀಲಗಿರಿ ತಪ್ಪಲಿನಲ್ಲಿ ಈ ರೀತಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುವುದು ಸಾಮಾನ್ಯ.

Shwetha M