ರಣಮಳೆಗೆ ಉತ್ತರ ಭಾರತ ತತ್ತರ – ಹಿಮಾಚಲ ಪ್ರದೇಶದಲ್ಲಿ 88 ಜನರ ಸಾವು
ನವದೆಹಲಿ: ಹಿಮಾಚಲ ಪ್ರದೇಶ, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಮಳೆಯ ಅಬ್ಬರಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಮಳೆಯ ಅಬ್ಬರಕ್ಕೆ ಅಪಾರ ಪ್ರಮಾಣದ ಜೀವ, ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಿಯಾಸ್ ನದಿಯಿಂದ ಬುಧವಾರ 13 ಮೃತದೇಹ ಗಳನ್ನು ಹೊರಗೆ ತರಲಾಗಿದೆ. ಮಹಾಮಳೆಗೆ ಹಿಮಾಚಲ ಪ್ರದೇಶದಲ್ಲಿ ಬಲಿಯಾದವರ ಸಂಖ್ಯೆ 88 ಕ್ಕೆ ಏರಿಕೆಯಾಗಿದೆ ಎಂದು ಹಂಗಾಮಿ ಪೊಲೀಸ್ ಮಹಾನಿರ್ದೇಶಕ ಸತ್ವಂತ್ ಅತ್ವಾಲ್ ತ್ರಿವೇದಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಮರನಾಥ ಯಾತ್ರೆ ವೇಳೆ ಐವರು ಹೃದಯಾಘಾತದಿಂದ ಸಾವು – ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಬಿಯಾಸ್ ನದಿಯಿಂದ ಬುಧವಾರ 13 ಮೃತದೇಹ ಗಳನ್ನು ಹೊರಗೆ ತರಲಾಗಿದೆ. ಪತ್ತೆಯಾಗಿರುವ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಈವರೆಗೂ 88 ಜನರು ಮೃತಪಟ್ಟಿದ್ದು, 16 ಜನರು ನಾಪತ್ತೆಯಾಗಿದ್ದಾರೆ. 100 ಜನರು ಗಾಯಗೊಂಡಿದ್ದು, 492 ಜಾನುವಾರುಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಇನ್ನುವಿವಿಧ ಸ್ಥಳಗಳಲ್ಲಿ ಸಿಲುಕಿರುವ 1500 ಕ್ಕೂ ಹೆಚ್ಚು ಜನರು ಹಿಮಾಚಲ ಪ್ರದೇಶ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಕುಲು ಜಿಲ್ಲೆಯ ಕಸೋಲ್ ಪ್ರದೇಶದಿಂದ 2,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. 40 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ರಕ್ಷಿಸಲಾಗಿದೆ ಎಂದು ಸತ್ವಂತ್ ಅತ್ವಾಲ್ ತ್ರಿವೇದಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡಾ ಮಳೆಯ ಹೊಡೆತಕ್ಕೆ ಸಿಲುಕಿದ್ದು, ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರಿನ ಮಟ್ಟ ಸಾರ್ವಕಾಲಿಕ ದಾಖಲೆ ಮಟ್ಟ 207.55 ಮೀಟರ್ ತಲುಪಿದೆ. ಈ ಮೂಲಕ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ನೀರಿನ ಮಟ್ಟ ಹೆಚ್ಚಳದಿಂದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ತಕ್ಷಣವೇ ಸ್ಥಳಾಂತರಗೊಳ್ಳುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ನದಿ ಸಮೀಪದಲ್ಲಿ ವಾಸಿಸುತ್ತಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ.