ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ! – ಮಹತ್ವದ ನಿರ್ಧಾರ ತೆಗೆದುಕೊಂಡ ನಟಿ ನೋರಾ ಫತೇಹಿ

ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ! – ಮಹತ್ವದ ನಿರ್ಧಾರ ತೆಗೆದುಕೊಂಡ ನಟಿ ನೋರಾ ಫತೇಹಿ

ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ಕೆಡಿ: ದಿ ಡೆವಿಲ್ ಸಿನಿಮಾವು ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಗುರಿಯಾಗಿತ್ತು. ನೋರಾ ಫತೇಹಿ ಅಭಿನಯದ ಸರ್ಸೆ ಸೆರಗ (ಹಿಂದಿಯಲ್ಲಿ ‘ಸರ್ಕೆ ಚುನರಿ) ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ನೃತ್ಯದಿಂದಾಗಿ ಭಾರಿ ವಿವಾದ ಸೃಷ್ಟಿಯಾಗಿತ್ತು. ಈ ಬೆನ್ನಲ್ಲೇ  ಸಿನಿಮಾ ತಂಡದ ವಿರುದ್ದ ದೂರು ದಾಖಲಾಗಿತ್ತು. ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಕ್ಷಮೆ ಕೇಳಿದ್ದಾರೆ. ಅಷ್ಟೇ ಅಲ್ಲ ನೋರಾ ಫತೇಹಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ನಂಬರ್ 1 ಆಗುತ್ತಾ RCB? – ಮುಂಬೈನಿಂದ ಫ್ಲಾಪ್ ಸೂರ್ಯ OUT.. ವೈಭವ್ ಸೂರ್ಯವಂಶಿ ಬಾಲಕಾರ್ಮಿಕನಾ?

ಕೆಡಿ ಸಿನಿಮಾದ ಸರ್ಕೆ ಚುನರಿ ಹಿಂದಿ ಹಾಡಿನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಡಿನಲ್ಲಿ ಕುಣಿದಿದ್ದ ನಟಿ ನೋರಾ ಫತೇಹಿ, ನಿರ್ದೇಶಕ ಪ್ರೇಮ್ ಇನ್ನಿತರೆ ವ್ಯಕ್ತಿಗಳ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ದೂರು ದಾಖಲಿಸಿಕೊಂಡಿತ್ತು. ಪ್ರೇಮ್ ಸೇರಿದಂತೆ ಇನ್ನಿತರರು ಕ್ಷಮೆ ಕೇಳಿ ವಿವಾದಕ್ಕೆ ಅಂತ್ಯ ಹಾಡಿದ್ದರು. ಆದರೆ ನೋರಾ, ವಿಚಾರಣೆಯನ್ನು ಮುಂದೂಡುತ್ತಾ ಬಂದಿದ್ದರು. ಆದ್ರೀಗ ನೋರಾ  ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ. ನಟಿ ಲಿಖಿತ ಕ್ಷಮೆ ಕೇಳಿದ್ದಲ್ಲದೆ, ಒಂದು ಮಹತ್ವದ ನಿರ್ಧಾರವನ್ನು ಸಹ ಪ್ರಕಟಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನೋರಾ, ತಾವು ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿರುವುದಾಗಿ ತಿಳಿಸಿದರು. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಅನಿವಾರ್ಯವಾಗಿ ಅಂತಹ ಸಂದರ್ಭ ಎದುರಾಗಿತ್ತು. ಆದರೆ ಒಬ್ಬ ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ನಾನು ನಂಬುತ್ತೇನೆ, ಹಾಗಾಗಿ ಈಗ ಆಯೋಗದ ಮುಂದೆ ಕ್ಷಮೆ ಕೇಳಿದ್ದೇನೆ, ಎಲ್ಲವೂ ಲಿಖಿತ ರೂಪದಲ್ಲಿ ನಡೆಯಿತು, ಆಯೋಗದ ಸದಸ್ಯರು ಸಹ ಆತ್ಮೀಯವಾಗಿ ಸಹಕರಿಸಿದರು ಎಂದಿದ್ದಾರೆ.

ಇನ್ನು ಈ ವಿವಾದಕ್ಕೆ ಪ್ರಾಯಶ್ಚಿತ್ತವಾಗಿ ನೋರಾ ಫತೇಹಿ ಒಂದು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದರು, ತಾವು ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು. ಸಮಾಜಕ್ಕೆ ಏನನ್ನಾದರೂ ಮರಳಿ ನೀಡುವುದು ಮುಖ್ಯ ಎಂಬ ಉದ್ದೇಶದಿಂದ ಈ ಹೆಜ್ಜೆ ಇಟ್ಟಿರುವುದಾಗಿ ಅವರು ತಿಳಿಸಿದರು. ಇದೇ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಕೂಡ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದರು. ಸಂಜಯ್ ದತ್ ಅವರು 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ಭರವಸೆ ನೀಡಿದ್ದರು.

Shwetha M