31 ವರ್ಷ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ದಿಟ್ಟ ಮಹಿಳೆಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ – ನರ್ಗೆಸ್ ಮೊಹಮ್ಮದಿ ಬಗ್ಗೆ ಇಲ್ಲಿದೆ ಮಾಹಿತಿ

31 ವರ್ಷ ಶಿಕ್ಷೆಗೊಳಗಾಗಿ ಜೈಲಿನಲ್ಲಿರುವ ದಿಟ್ಟ ಮಹಿಳೆಗೆ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ – ನರ್ಗೆಸ್ ಮೊಹಮ್ಮದಿ ಬಗ್ಗೆ ಇಲ್ಲಿದೆ ಮಾಹಿತಿ

ಇರಾನ್‌ನ ನರ್ಗೆಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ದ ಇರಾನ್‌ನಲ್ಲಿ ಹೋರಾಟ ಮಾಡಿರುವ ದಿಟ್ಟ ಮಹಿಳೆ ನರ್ಗೆಸ್ ಗೆ ಪ್ರತಿಷ್ಠಿತ ನೋಬೆಲ್‌ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಮೊಹಮ್ಮದಿ ಇರಾನ್‌ನ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತರಲ್ಲೊಬ್ಬರು, ಅವರು ಮಹಿಳಾ ಹಕ್ಕುಗಳು ಮತ್ತು ಮರಣದಂಡನೆ ರದ್ದುಗೊಳಿಸುವಿಕೆಗಾಗಿ ದೇಶದದ್ಯಾಂತ ಹೋರಾಟ ನಡೆಸಿದ್ದಾರೆ. ಫ್ರಂಟ್ ಲೈನ್ ಡಿಫೆಂಡರ್ಸ್ ಹಕ್ಕುಗಳ ಸಂಘಟನೆಯ ಪ್ರಕಾರ, ನರ್ಗೆಸ್ ಮೊಹಮ್ಮದಿ ಅವರು ಪ್ರಸ್ತುತ ಟೆಹ್ರಾನ್‌ನ ಎವಿನ್ ಜೈಲಿನಲ್ಲಿದ್ದಾರೆ. ಇದೀಗ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ 19ನೇ ಮಹಿಳೆಯಾಗಿ ನರ್ಗಿಸ್ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತೂಕ ಹೆಚ್ಚಳಕ್ಕೆ ಫ್ಯಾನ್ಸ್ ಬೇಸರ – ಟ್ರೋಲ್‌ನಲ್ಲಿ ನಟಿಯನ್ನು ರೆಡಿ ಮಾಡಿದವರಿಗೂ ಬೈಗುಳ..!

ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಇರಾನ್‌ನಲ್ಲಿ ಹೋರಾಟ ಮಾಡಿ ಜೈಲು ಸೇರಿರುವ ನರ್ಗೆಸ್ ಅವರಿಗೆ ನಾರ್ವೆಯ ನೊಬೆಲ್‌ ಪ್ರಶಸ್ತಿ ಸಮಿತಿ 2023ರ ಶಾಂತಿ ಪ್ರಶಸ್ತಿಯನ್ನು ನೀಡಲು ಬಯಸಿದೆ. ನರ್ಗಿಸ್‌ ಅವರು ಇರಾನ್‌ನ ಮಹಿಳೆಯರ ಮೇಲಿನ ದೌರ್ಜನ್ಯ ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಿ ಮಾನವ ಹಕ್ಕುಗಳ ಮರುಸ್ಥಾಪನೆಗೆ ಉತ್ತೇಜನ ನೀಡಿದ್ದರು ಎಂದು ನಾರ್ವೆಯ ನೊಬೆಲ್ ಕಮಿಟಿ ಹೇಳಿದೆ.

ಈ ಪ್ರಶಸ್ತಿ ಮೊತ್ತವೂ 11 ಮಿಲಿಯನ್ ಸ್ವಿಡಿಶ್‌ ಕ್ರೌನ್‌ ಕರೆನ್ಸಿಯನ್ನು ಹೊಂದಿದೆ (ಅಂದಾಜು 1 ಮಿಲಿಯನ್ ಡಾಲರ್) ಈ ಪ್ರಶಸ್ತಿಯನ್ನು ಡಿಸೆಂಬರ್ 10 ರಂದು ಒಸ್ಲೋದಲ್ಲಿ ಪ್ರದಾನ ಮಾಡಲಾಗುತ್ತದೆ. ಅಂದೇ ನೊಬೆಲ್ ಪ್ರಶಸ್ತಿಯನ್ನು ಸ್ಥಾಪಿಸಿದ್ದ ಅಲ್ಫ್ರೆಡ್ ನೊಬೆಲ್ ಅವರ ಜನ್ಮದಿನವಾಗಿದೆ.  1895 ರಲ್ಲಿ ಅಲ್ಫ್ರೆಡ್ ನೊಬೆಲ್ ಅವರು ಈ ಪ್ರಶಸ್ತಿಯನ್ನು ಹುಟ್ಟು ಹಾಕಿದ್ದರು.

ನರ್ಗಿಸ್ ಮಹೊಮ್ಮದಿ ಅವರನ್ನು ಇದುವರೆಗೆ 13 ಬಾರಿ ಬಂಧಿಸಲಾಗಿದೆ. ಐದು ಪ್ರಕರಣಗಳಲ್ಲಿ ಅಪರಾಧಿ ಮಾಡಲಾಗಿದ್ದು, ಒಟ್ಟು 31 ವರ್ಷಗಳ ಕಾಲ ಜೈಲು ಶಿಕ್ಷೆ 154 ಛಡಿ ಏಟಿನ ಶಿಕ್ಷೆಯನ್ನು ವಿಧಿಸಲಾಗಿದೆ. ಆಕೆಯ ಕೆಚ್ಚೆದೆಯ ಹೋರಾಟದಿಂದ ಸ್ವತಃ ಅವರು ವೈಯಕ್ತಿಕವಾಗಿ ಸಾಕಷ್ಟು ಹಾನಿಗೊಳಗಾಗಿದ್ದಾರೆ ಎಂದು ನೊಬೆಲ್ ಸಂಸ್ಥೆ ವೆಬ್‌ಸೈಟ್‌ ಹೇಳಿದೆ.

Shwetha M