ರೋಹಿತ್ ಕ್ಯಾಪ್ಟನ್.. ಕೊಹ್ಲಿಗೆ ಕೊಕ್ – 6 ಭಾರತೀಯರಲ್ಲಿ ಕಿಂಗ್ ಗಿಲ್ಲ ಸ್ಥಾನ
ICC ಟೀಂನಿಂದ ವಿರಾಟ್ ಕೈ ಬಿಟ್ಟಿದ್ದೇಕೆ?

ರೋಹಿತ್ ಕ್ಯಾಪ್ಟನ್.. ಕೊಹ್ಲಿಗೆ ಕೊಕ್ – 6 ಭಾರತೀಯರಲ್ಲಿ ಕಿಂಗ್ ಗಿಲ್ಲ ಸ್ಥಾನICC ಟೀಂನಿಂದ ವಿರಾಟ್ ಕೈ ಬಿಟ್ಟಿದ್ದೇಕೆ?

2024ರ ಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಟೀಂ ಇಂಡಿಯಾ ಇತಿಹಾಸ ಬರೆದಿದೆ. 17 ವರ್ಷಗಳ ಬಳಿಕ ಮತ್ತೊಮ್ಮೆ ಚುಟುಕು ಸಮರದ ಸರದಾರನಾಗಿ ಮೆರೆದಿದೆ. 140 ಕೋಟಿ ಭಾರತೀಯರು ಈಗ್ಲೂ ಕೂಡ ಗೆಲುವಿನ ಗುಂಗನ್ನ ಫೀಲ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ನಮ್ಮ ಬ್ಲೂ ಬಾಯ್ಸ್​ದೇ ಹವಾ. ಟ್ರೋಫಿ ಎತ್ತಿ ಹಿಡಿಯೋದು, ರಾಹುಲ್ ದ್ರಾವಿಡ್​ರನ್ನ ಎತ್ತಿ ಕುಣಿಸೋದು, ಕಣ್ಣೀರು ಹೀಗೆ ಪ್ರತಿಯೊಂದು ಕ್ಷಣಗಳೂ ಜನರನ್ನ ಭಾವುಕರನ್ನಾಗಿಸುತ್ತಿವೆ. ಇದ್ರ ನಡುವೆಯೇ 2024ರ ಟಿ20 ವಿಶ್ವಕಪ್‌ಗೆ ಐಸಿಸಿ ತನ್ನ ಬೆಸ್ಟ್​ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದೆ. ವಿಶ್ವ ಚಾಂಪಿಯನ್ ಭಾರತದ ಆರು ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದರೆ, ವಿರಾಟ್ ಕೊಹ್ಲಿಯೇ ಹೊರಗುಳಿದಿದ್ದಾರೆ. ಫೈನಲ್ ಪಂದ್ಯದಲ್ಲಿ ಮ್ಯಾಚ್ ವಿನ್ನರ್ ಆಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರೂ ಕೊಹ್ಲಿಗೆ ತಂಡದಲ್ಲಿ ಯಾಕೆ ಚಾನ್ಸ್ ಸಿಕ್ಕಿಲ್ಲ?

ಇದನ್ನೂ ಓದಿ: ವಿಶ್ವಕಪ್ ಹಿಂದಿನ ಶಕ್ತಿಯೇ ಕನ್ನಡಿಗ – RO-KOಗೆ ಕುಮಟಾದ ರಘು ಹೀರೋ 

ಟಿ-20 ವಿಶ್ವಕಪ್ ಮಹಾಯುದ್ಧದ ಫೈನಲ್ ಫೈಟ್​ನಲ್ಲಿ ಟೀಂ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾವನ್ನ ಸೋಲಿಸುವ ಮೂಲಕ ಟ್ರೋಫಿಗೆ ಮುತ್ತಿಟ್ಟಿದೆ. ಈ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಕಿರೀಟಕ್ಕೆ ಮುತ್ತಿಟ್ಟಿದೆ. ಪಂದ್ಯದುದ್ದಕ್ಕೂ ಅಜೇಯವಾಗಿ ಮುನ್ನುಗ್ಗಿ ಚಾಂಪಿಯನ್ ಆಗುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಇದಕ್ಕೂ ಮುನ್ನ ಯಾವುದೇ ತಂಡ ಕೂಡ ಒಂದೂ ಪಂದ್ಯವನ್ನ ಸೋಲದೆ ಟಿ-20 ವಿಶ್ವಕಪ್ ಗೆದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಭಾರತ ಈ ಸಾಧನೆ ಮಾಡಿದ್ದು ಕ್ರಿಕೆಟ್ ಲೋಕದ ದಿಗ್ಗಜರೆಲ್ಲಾ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇದೀಗ ಐಸಿಸಿ ಟೂರ್ನಮೆಂಟ್​ ಆಫ್​ ದ ಟೀಂ ಪ್ರಕಟ ಮಾಡಿದ್ದು ಇದ್ರಲ್ಲಿ ಭಾರತದ 6 ಆಟಗಾರರಿಗೆ ಸ್ಥಾನ ಸಿಕ್ಕಿದೆ.. ಐಸಿಸಿಯು ಪ್ರತಿ ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ 12 ಸದಸ್ಯರ ತಂಡವನ್ನು ಪ್ರಕಟಿಸುತ್ತದೆ. ಹಾಗಂತ ಇವ್ರು ಯಾವುದೇ ಮ್ಯಾಚ್ ಆಡೋದಿಲ್ಲ. ಬದಲಾಗಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಗೌರವಯುತವಾಗಿ ಈ ಆಯ್ಕೆ ಮಾಡಲಾಗುತ್ತದೆ. ಅದ್ರಲ್ಲೂ ಈ ಗೌರತಯುವ ಟೀಮ್​ನಲ್ಲಿ ಬರೋಬ್ಬರಿ 6 ಭಾರತೀಯರು ಕಾಣಿಸಿಕೊಂಡಿರುವುದೇ ವಿಶೇಷ. ಅಷ್ಟಕ್ಕೂ ಭಾರತದ ಆಟಗಾರರು ಯಾರು? ಉಳಿದ ಯಾವೆಲ್ಲಾ ಆಟಗಾರರು ಹೆಸರು ಸೇರಿದೆ ಅನ್ನೋ ಮಾಹಿತಿ ಇಲ್ಲಿದೆ.

ರೋಹಿತ್ ಕ್ಯಾಪ್ಟನ್.. ಕೊಹ್ಲಿ ಔಟ್!

ಐಸಿಸಿ ತಂಡದ ಆರಂಭಿಕರಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಅಫ್ಘಾನಿಸ್ತಾನ್ ಓಪನರ್ ರಹಮಾನುಲ್ಲಾ ಗುರ್ಬಾಝ್ ಆಯ್ಕೆಯಾಗಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಗುರ್ಬಾಝ್ 281 ರನ್ ಕಲೆಹಾಕಿದರೆ, ರೋಹಿತ್ ಶರ್ಮಾ 257 ರನ್​​ ಗಳಿಸಿದ್ದಾರೆ. ಹೀಗಾಗಿ ಅತ್ಯಧಿಕ ರನ್ ಕಲೆಹಾಕಿದ ಇಬ್ಬರನ್ನು ಆರಂಭಿಕರಾಗಿ ಆಯ್ಕೆ ಮಾಡಲಾಗಿದೆ. ಇನ್ನು ಮೂರನೇ ಕ್ರಮಾಂಕಕ್ಕೆ ಆಯ್ಕೆಯಾಗಿರುವುದು ವೆಸ್ಟ್ ಇಂಡೀಸ್​ನ ನಿಕೋಲಸ್ ಪೂರನ್. ವಿಂಡೀಸ್​ ಪರ ಈ ಬಾರಿ ಭರ್ಜರಿ ಪ್ರದರ್ಶನ ನೀಡಿದ್ದ ಪೂರನ್ ಒಟ್ಟು 228 ರನ್ ಬಾರಿಸಿದ್ದಾರೆ. ಹಾಗೆಯೇ 199 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ 4ನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಲ್​ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಆಯ್ಕೆಯಾಗಿದ್ದಾರೆ. ಸ್ಟೋಯಿನಿಸ್ ಈ ಬಾರಿ 10 ವಿಕೆಟ್​ಗಳೊಂದಿಗೆ ಒಟ್ಟು 169 ರನ್ ಬಾರಿಸಿ ಮಿಂಚಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಪರ 144 ರನ್​ ಹಾಗೂ 11 ವಿಕೆಟ್​ಗಳೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಸ್ಥಾನ ನೀಡಲಾಗಿದೆ. ಅದೇ ರೀತಿ ಸ್ಪಿನ್ ಆಲ್​ರೌಂಡರ್ ಆಗಿ ಟೀಮ್ ಇಂಡಿಯಾದ ಅಕ್ಷರ್ ಪಟೇಲ್​ಗೆ ಕಾಣಿಸಿಕೊಂಡಿದ್ದಾರೆ. ಇನ್ನು ಟಿ20 ವಿಶ್ವಕಪ್ 2024 ರಲ್ಲಿ 14 ವಿಕೆಟ್ ಕಿತ್ತು ಮಿಂಚಿರುವ ರಶೀದ್ ಖಾನ್ ಸ್ಪಿನ್ನರ್ ಆಗಿ ಆಯ್ಕೆಯಾದರೆ, 15 ವಿಕೆಟ್ ಕಬಳಿಸಿರುವ ಜಸ್​ಪ್ರೀತ್ ಬುಮ್ರಾ ಪ್ರಮುಖ ವೇಗಿಯಾಗಿ ತಂಡದಲ್ಲಿದ್ದಾರೆ. ಹಾಗೆಯೇ ತಲಾ 17 ವಿಕೆಟ್ ಉರುಳಿಸಿದ ಅರ್ಷದೀಪ್ ಸಿಂಗ್ ಮತ್ತು ಫಝಲ್​ಹಕ್ ಫಾರೂಖಿ ವೇಗಿಗಳಾಗಿ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ 12ನೇ ಆಟಗಾರರಾಗಿ ಸೌತ್ ಆಫ್ರಿಕಾ ವೇಗಿ ಅನ್ರಿಕ್ ನೋಕಿಯಾ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಭಾರತ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್ ಹಾಗೇ ಸೌತ್ ಆಫ್ರಿಕಾದ ಆಟಗಾರರು ಮಾತ್ರ ಈ 12ರ ಬಳಗದಲ್ಲಿ ಕಾಣಿಸಿಕೊಂಡಿರೋದು  ಇನ್ನೊಂದು ಸ್ಪೆಷಾಲಿಟಿ.

ಐಸಿಸಿ ಟೂರ್ನಮೆಂಟ್​ ಆಫ್​ ದ ಟೀಂನಲ್ಲಿ ಭಾರತದ 6 ಆಟಗಾರರಿಗೆ ಸ್ಥಾನ ಸಿಕ್ಕಿದೆ ನಿಜ. ಅಚ್ಚರಿ ಅಂದ್ರೆ ಐಸಿಸಿಯ 12ರ ಬಳಗದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. ವಿಶ್ವದ ಬೆಸ್ಟ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 59 ಎಸೆತಗಳಲ್ಲಿ 76 ರನ್‌ ಸಿಡಿಸಿದ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಗೌರವ ಕೂಡ ವಿರಾಟ್‌ ಕೊಹ್ಲಿ ಅವರಿಗೆ ಒಲಿಯಿತು. ಆದರೆ, ಟೂರ್ನಿಯ ಅತ್ಯುತ್ತಮ ತಂಡದಲ್ಲಿ ಸ್ಥಾನ ಪಡೆಯಲು ಕೊಹ್ಲಿ ವಿಫಲರಾಗಿದ್ದಾರೆ. ಯಾಕಂದ್ರೆ ಟೂರ್ನಿಯುದ್ದಕ್ಕೂ ಬ್ಯಾಟಿಂಗ್​ನಲ್ಲಿ ಫೇಲ್ಯೂರ್ ಅನುಭವಿಸಿದ್ದ ಕೊಹ್ಲಿ ಫೈನಲ್ ಮ್ಯಾಚ್​ನಲ್ಲಷ್ಟೇ ಅಬ್ಬರಿಸಿದ್ದರು. ಒಟ್ಟಾರೆ 8 ಪಂದ್ಯಗಳಿಂದ 151 ರನ್ ಗಳಿಸಿದ್ದಾರೆ. ಹೀಗಾಗಿ ಐಸಿಸಿ ಟೂರ್ನಮೆಂಟ್ ಆಫ್ ದಿ ಟೀನಲ್ಲಿ ಕೊಹ್ಲಿಗೆ ಚಾನ್ಸ್ ಸಿಕ್ಕಿಲ್ಲ. ಆದ್ರೆ ಆರಂಭದಲ್ಲಿ ವಿರಾಟ್ ಫೇಲ್ಯೂರ್ ಆಗಿದ್ರೂ ಕೂಡ ಕ್ರೂಶಿಯಲ್​ ಮ್ಯಾಚ್​ನಲ್ಲೇ ಸಿಡಿದೇಳುವ ಮೂಲಕ ಭಾರತಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಅವ್ರನ್ನ ಕ್ರಿಕೆಟ್ ಕಿಂಗ್ ಅನ್ನೋದು.

Shwetha M

Leave a Reply

Your email address will not be published. Required fields are marked *