ಯಾವುದೇ ನಿಷೇಧ ಇಲ್ಲ.. ಆದರೂ ಭಾರತದ ಈ ಹಳ್ಳಿಗಳಲ್ಲಿ ಯಾರೂ ಮದ್ಯ, ಡ್ರಗ್ಸ್ ಸೇವಿಸಲ್ಲ!

ಯಾವುದೇ ನಿಷೇಧ ಇಲ್ಲ.. ಆದರೂ ಭಾರತದ ಈ ಹಳ್ಳಿಗಳಲ್ಲಿ ಯಾರೂ ಮದ್ಯ, ಡ್ರಗ್ಸ್ ಸೇವಿಸಲ್ಲ!

ಇತ್ತೀಚೆಗೆ ಮದ್ಯಪಾನ, ಡ್ರಗ್ಸ್‌ ವ್ಯಸನದ ಹಾವಳಿ ಹೆಚ್ಚಾಗುತ್ತಿದೆ. ಎಲ್ಲಿ ಹೋದ್ರೂ ಮದ್ಯ ವ್ಯಸನಿಗಳು ಇದ್ದೇ ಇರುತ್ತಾರೆ. ಕೆಲವರು ಈ ಕೆಟ್ಟಚಟಕ್ಕೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಮನೆ, ಸಂಸಾರ ಕಳೆದುಕೊಂಡು ಬೀದಿಗೆ ಬಿದ್ದಿರುವ ಉದಾಹರಣೆಗಳು ಇದೆ. ಆದರೆ ಭಾರತದ ಈ ಎರಡು ಗ್ರಾಮದಲ್ಲಿ ಯಾರು ಕೂಡ ಡ್ರಗ್ಸ್ ಮತ್ತು ಮದ್ಯ ಸೇವಿಸುವುದಿಲ್ಲವಂತೆ. ಅಚ್ಚರಿಯಾದ್ರೂ ಸತ್ಯ.

ಉತ್ತರಾಖಂಡದ ಡೆಹ್ರಾಡೂನ್‌ನಿಂದ 44 ಕಿಮೀ ದೂರದಲ್ಲಿರುವ ತಹಸಿಲ್ ಕಲ್ಸಿ ಪ್ರದೇಶದ ಕೋಟಾ ದಿಮೌ ಎಂಬಲ್ಲಿ ಗಡೋಲ್ ಮತ್ತು ಬೋಹ್ರಿ ಎಂಬ ಎರಡು ಗ್ರಾಮಗಳಿವೆ. ಈ ಎರಡು ಗ್ರಾಮದಲ್ಲಿ ಯಾರು ಕೂಡ ಡ್ರಗ್ಸ್ ಮತ್ತು ಮದ್ಯ ಸೇವಿಸುವುದೇ ಇಲ್ಲ. ಇಲ್ಲಿನ ಗ್ರಾಮಸ್ಥರು ಯಾವುದೇ ಕೆಟ್ಟ ಚಟಗಳ ದಾಸರಾಗಿಲ್ಲ. ಇಲ್ಲಿವರೆಗೂ ಯಾರೊಬ್ಬರು ಕೂಡ ಒಂದು ಹನಿ ಮದ್ಯ ಸೇವಿಸಿಲ್ಲ. ಸರ್ಕಾರ ಕೂಡ ಇಲ್ಲಿ ಮದ್ಯ, ಡ್ರಗ್ಸ್‌ ಮಾರಾಟ, ಸೇವನೆ ಮಾಡುವುದನ್ನು ನಿಷೇಧಿಸಿಲ್ಲ, ಆದರೂ ಕೂಡ ಇಲ್ಲಿನ ಜನರು ತಮ್ಮ ಗ್ರಾಮಗಳಿಗೆ ಡ್ರಗ್ಸ್ ಮತ್ತು ಮದ್ಯ ಕಾಲಿಡದಂತೆ ನೋಡಿಕೊಂಡಿದ್ದಾರೆ. ಹಿರಿಯರ ಮಾರ್ಗದರ್ಶನದಂತೆ ಯುವಕರೂ ಕೂಡ ಇದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಒಬ್ಬ ತಪ್ಪು ಮಾಡಿದ್ರೆ ಮೂರು ತಲೆಮಾರಿನವರಿಗೆ ಶಿಕ್ಷೆ – ಉತ್ತರ ಕೊರಿಯಾದಲ್ಲಿವೆ ವಿಚಿತ್ರ ಕಾನೂನುಗಳು

ಮಾದಕ ವಸ್ತು ಸೇವಿಸದೇ ಇರಲು ಇದೇ ಕಾರಣ!

ಗ್ರಾಮದಲ್ಲಿ ಮಾದಕ ವಸ್ತುಗಳನ್ನು ಮುಟ್ಟದೇ ಇರಲು ಕೂಡ ಒಂದು ಕಾರಣವಿದೆ. ಇದರ ಹಿಂದೆ ಯಾವುದೇ ನಿರ್ಬಂಧವಿಲ್ಲ. ಆದರೆ ಧಾರ್ಮಿಕ ನಂಬಿಕೆ ಇದೆ. ಗ್ರಾಮದ ಜನರು ಹಿಂದಿನಿಂದಲೂ ಒಂದು ಪೌರಾಣಿಕ ಕತೆಯನ್ನು ನಂಬಿಕೊಂಡು ಬಂದಿದ್ದಾರೆ. ಇದನ್ನು ಅಲ್ಲಿನ ಜನರು ಚಾಚುತಪ್ಪದೇ ಪಾಲಿಸುತ್ತಿದ್ದಾರೆ. ಹೀಗಾಗಿ ಹಿರಿಯರು ಮಾಡಿದ್ದ ಸಂಪ್ರದಾಯವನ್ನು ಅಲ್ಲಿನ ಜನರು ಮುಂದಿನ ಪೀಳಿಗೆಯಲ್ಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ತಮ್ಮ ಗ್ರಾಮಗಳಿಗೆ ಡ್ರಗ್ಸ್ ಮತ್ತು ಮದ್ಯ ಕಾಲಿಡದಂತೆ ನೋಡಿಕೊಂಡಿದ್ದಾರೆ.

ನಿಯಮ ಉಲ್ಲಂಘಿಸಿದ್ರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ!

ಗ್ರಾಮದ ಜನಸಂಖ್ಯೆ ಸುಮಾರು ಮೂರು ಸಾವಿರ ಇದೆ. ಈ ಎರಡು ಗ್ರಾಮಗಳ ದೇವರು ಪರಶುರಾಮ ಮಹಾರಾಜನಾಗಿದ್ದು, ಮದ್ಯದ ನಿಯಮಗಳನ್ನು ಗ್ರಾಮಸ್ಥರು ಉಲ್ಲಂಘಿಸಿದರೆ ಭವಿಷ್ಯದಲ್ಲಿ ದೇವರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಭಯ ಇದೆ. ಹೀಗಾಗಿ ಇಲ್ಲಿ ಮದ್ಯ ಸೇವಿಸುವುದು ಮತ್ತು ಮನೆಯಲ್ಲಿ ಮದ್ಯ ಸಂಗ್ರಹಿಸಲು ಸಹ ಯಾರೂ ಒಪ್ಪಿಕೊಳ್ಳವುದಿಲ್ಲ. ಇನ್ನು ಮದುವೆಯ ಮೆರವಣಿಗೆಯು ಕೋಟಾ ದಿಮೌವನ್ನು ತಲುಪಿದಾಗ ಹಳ್ಳಿಯ ಹಿರಿಯರು ಅವರನ್ನು ಮೊದಲು ಸ್ವಾಗತಿಸುತ್ತಾರೆ ಮತ್ತು ಗ್ರಾಮದ ವ್ಯಾಪ್ತಿಯಲ್ಲಿ ಯಾರೂ ಮದ್ಯವನ್ನು ತರಬೇಡಿ ಎಂದು ಎಚ್ಚರಿಸುತ್ತಾರಂತೆ.

ಗ್ರಾಮದ ಸುತ್ತಮುತ್ತ ಕೂಡ ಮದ್ಯ ಅಂಗಡಿಗಳಿಲ್ಲ!

ಇನ್ನು ಗ್ರಾಮದ ಸುತ್ತಮುತ್ತಲೂ ಯಾವುದೇ ಮದ್ಯದ ಅಂಗಡಿಗಳಿಲ್ಲ. ಗ್ರಾಮದಿಂದ ದೂರದಲ್ಲೂ ಮದ್ಯದ ಅಂಗಡಿಗಳನ್ನು ತೆರೆಯಲು ಅಲ್ಲಿನ ಗ್ರಾಮಸ್ಥರು ಅನುಮತಿ ನೀಡಿಲ್ಲ. ಈ ಸಂಬಂಧ ಸರ್ಕಾರ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಕ್ಕಪಕ್ಕದ ಗ್ರಾಮದ ಜನರು ಕೂಡ ಇದಕ್ಕೆ ಯಾವುದೇ ತಕರಾರು ಮಾಡಿಲ್ಲವಂತೆ. ಹೀಗಾಗಿ ಗ್ರಾಮದ ಸುತ್ತಮುತ್ತ ಯಾವುದೇ ಮದ್ಯದ ಅಂಗಡಿಗಳನ್ನು ತೆರೆದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Shwetha M