ಅಧಿಕಾರ ಹಂಚಿಕೆ ವಿಚಾರವಾಗಿ ಯಾರೂ ಮಾತನಾಡಬಾರದು – ‘ಕೈ’ ನಾಯಕರಿಗೆ ‘ಹೈ’ಕಮಾಂಡ್ ಬ್ರೇಕ್!

ಅಧಿಕಾರ ಹಂಚಿಕೆ ವಿಚಾರವಾಗಿ ಯಾರೂ ಮಾತನಾಡಬಾರದು – ‘ಕೈ’ ನಾಯಕರಿಗೆ ‘ಹೈ’ಕಮಾಂಡ್ ಬ್ರೇಕ್!

ಕಾಂಗ್ರೆಸ್ ಪಾಳಯದಲ್ಲಿ ಸಿಎಂ ವಿಚಾರ ಮತ್ತೆ ಸಮರಕ್ಕೆ ಕಾರಣವಾಗಿದೆ. ಸಚಿವ ಎಂ.ಬಿ ಪಾಟೀಲ್ ನೀಡಿದ್ದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯರೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂಬ ಹೇಳಿಕೆಯಿಂದ ‘ಕೈ’ ಮನೆಯಲ್ಲಿ ಕೋಲಾಹಲ ಉಂಟಾಗಿದೆ. ಹೀಗಾಗಿ ಹೈಕಮಾಂಡ್ ಯಾರೂ ಕೂಡ ಅನಗತ್ಯ ಹೇಳಿಕೆಗಳನ್ನ ನೀಡಬಾರದು ಎಂದು ಎಚ್ಚರಿಕೆ ನೀಡಿದೆ.

ಸಿಎಂ ವಿಚಾರವಾಗಿ ಭಾರೀ ಬೆಳವಣಿಗೆಗಳಾದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಒಳ್ಳೆಯ ಆಡಳಿತ ನೀಡುವುದಷ್ಟೇ ಈಗ ನಮ್ಮ ಆದ್ಯತೆ. ಇದರ ಕಡೆಗೆ ಗಮನ ಕೊಡಬೇಕು. ಇದರ ಹೊರತಾಗಿ ಅನಗತ್ಯ ಹೇಳಿಕೆಗಳನ್ನು ನೀಡಬಾರದು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವೆ ಶೀತಲ ಸಮರಕ್ಕೆ ಕಾರಣವಾಗಿದೆ. ಇಂಥ ಹೇಳಿಕೆಗಳಿಗೆ ನಾವೂ ಕೂಡ ತೀಕ್ಷ್ಣವಾದ ಉತ್ತರವನ್ನು ನೀಡಬಹುದು. ಆದರೆ ಹಾಗೆ ಮಾಡದಿರಲು ನಿರ್ಧರಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಪರೋಕ್ಷವಾಗಿ ಪಾಟೀಲ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪಾಟೀಲ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಚರ್ಚಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ‘ಮೋದಿ ಮುಖ ನೋಡಿಕೊಂಡು ಸುಮ್ಮನಿದ್ದೇವೆ’ – ಬಿಜೆಪಿ ನಾಯಕರ ವಿರುದ್ಧ ಹಿಂದೂ ಮಹಾಸಭಾ ಕೆರಳಿದ್ದೇಕೆ?

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದ ಸಚಿವರು, ಶಾಸಕರಿಗೆ ಸುರ್ಜೇವಾಲ ಸ್ಪಷ್ಟ ಸೂಚನೆ ನೀಡಿದ್ದಾರೆ. ಮೈಸೂರಿನ ಸುತ್ತೂರಿನಲ್ಲಿ ಸೋಮವಾರ ರಾತ್ರಿ ಮಾತನಾಡಿದ್ದ ಎಂಬಿ ಪಾಟೀಲ್, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಇರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದರು. ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಉಪ-ಮುಖ್ಯಮಂತ್ರಿಗಳು 5 ವರ್ಷಗಳ ಕಾಲ ಮುಂದುವರಿಯಲಿದ್ದಾರೆ, ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆವರೆಗೆ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದನ್ನೇ ತಾನು ಪುನರುಚ್ಛರಿಸಿದ್ದೆ ಎಂದು ಹೇಳಿದ್ದಾರೆ.

suddiyaana