ಗಂಭೀರ್ & ಶ್ರೇಯಸ್ ಕೋಲ್ಡ್ ವಾರ್ – CSKಗೆ ಸಂಜು ಸ್ಯಾಮ್ಸನ್ ಕ್ಯಾಪ್ಟನ್?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ವೈಭವ್ ಸೂರ್ಯವಂಶಿ ಕುರಿತು ಆಡಿದ್ದ ಮಾತುಗಳಿಗೆ ಆರ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ. ತಂಡದಲ್ಲಿ ಸ್ಥಾನ ಸಿಗದಿದ್ದರೆ ವೈಭವ್ ಹಿರಿಯ ಆಟಗಾರರಿಗೆ ಡ್ರಿಂಕ್ಸ್ ನೀಡಲಿ ಎಂದು ಅಶ್ವಿನ್ ಹೇಳಿದ್ದರು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದ್ದಕ್ಕೆ ಸ್ಪಷ್ಟನೆ ನೀಡಿದ ಅಶ್ವಿನ್, ವೈಭವ್ಗೆ ನಾನು ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ವೈಭವ್ ಡ್ರೆಸ್ಸಿಂಗ್ ರೂಮ್ನಲ್ಲಿ ಸಮಯ ಕಳೆಯಬಹುದು, ಹಿರಿಯರಿಗೆ ಪಾನೀಯಗಳನ್ನು ನೀಡಬಹುದು ಅಥವಾ ಹೊರಗೆ ಕುಳಿತುಕೊಳ್ಳಬಹುದು ಅನ್ನೋ ಅರ್ಥದಲ್ಲಿ ಹೇಳಿದ್ದು ಎಂದಿದ್ದಾರೆ.
ಇದನ್ನೂ ಓದಿ: ತಿಲಕ್ ಗೆ ಗೇಟ್ ಪಾಸ್ ಟೈಂ ಬಂತಾ? – ರಜತ್ ಗೆ ಭಾರತದ ಬಾಗಿಲು ಓಪನ್?
ವೈಭವ್ ಅವರ ಬ್ಯಾಟಿಂಗ್ ತಂತ್ರವು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ಶೈಲಿಯನ್ನು ಹೋಲುತ್ತದೆ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಡಾನ್ ಬ್ರಾಡ್ಮನ್ ತಮ್ಮ ಶೈಲಿಯಲ್ಲಿ ಬ್ಯಾಟ್ ಮಾಡುತ್ತಿದ್ದಾಗ, ಅವರನ್ನು ತಡೆಯಲು ಎದುರಾಳಿ ತಂಡಗಳು ‘ಬಾಡಿಲೈನ್’ ತಂತ್ರವನ್ನು ಬಳಸಿದ್ದವು. ವೈಭವ್ ಅವರ ತಂತ್ರವೂ ಬ್ರಾಡ್ಮನ್ ಅವರ ಶೈಲಿಯನ್ನು ಹೋಲುತ್ತದೆ. ಏಕೆಂದರೆ ಬ್ರಾಡ್ಮನ್ ಬಹುತೇಕ ಸಮಯ ಎಲ್ಬಿಡಬ್ಲ್ಯು ಆಗುತ್ತಿರಲಿಲ್ಲ ಎಂದು ಉತ್ತಪ್ಪ ಹೇಳಿದ್ದಾರೆ.
BCCI ಟೀಮ್ ಇಂಡಿಯಾದ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಹಿಂದೆ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರ ಒಪ್ಪಂದದ ಅವಧಿಯನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ್ದು, ಆ ಸ್ಥಾನಕ್ಕೆ ಸುಭದೀಪ್ ಘೋಷ್ ಅವರನ್ನು ಹೊಸ ಫೀಲ್ಡಿಂಗ್ ಕೋಚ್ ಆಗಿ ನೇಮಿಸಿದೆ. ಭಾರತ ಮಹಿಳಾ ತಂಡ ಮತ್ತು ಭಾರತ ‘ಎ’ ತಂಡದೊಂದಿಗೆ ಕೆಲಸ ಮಾಡಿದ ಅನುಭ ಶುಭದೀಪ್ ಘೋಷ್ಗಿದೆ.
ಟೀಂ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಶ್ರೇಯಸ್ ಅಯ್ಯರ್ ಅವರು ಆಡಿರುವ ಮಾತುಗಳು ಚರ್ಚೆಗೆ ಗ್ರಾಸವಾಗಿದೆ. ಜಿಬಾಂಬ್ವೆ ವಿರುದ್ಧ ಗೆದ್ದ ನಂತ್ರ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಅವರಿಗೆ ‘ನಮ್ಮಲ್ಲಿ ಸ್ಫೂರ್ತಿ ತುಂಬಿದ್ದಕ್ಕೆ ಧನ್ಯವಾದಗಳು’ ಎಂದಿದ್ರು. ಈ ಮಾತಿನ ನಂತ್ರ ಗೌತಮ್ ಮತ್ತು ಅಯ್ಯರ್ ನಡುವೆ ಯಾವುದು ಸರಿ ಇಲ್ಲ ಅನ್ನೋ ಚರ್ಚೆ ಮತ್ತಷ್ಟು ಜೋರಾಗಿದೆ.
ಸಂಜು ಸ್ಯಾಮ್ಸನ್ ತನಗೆ ಯಾರ ಸಲಹೆ ಕೂಡ ಬೇಡ ಅಂತ ಖಡಕ್ ಆಗಿ ಹೇಳಿದ್ದಾರೆ. ದೇವರ ದಯೆಯಿಂದ, ನಾನು ಈಗಾಗಲೇ ಕ್ರಿಕೆಟಿಗನಾಗಿ ಬಹಳಷ್ಟು ಸಾಧಿಸಿದ್ದೇನೆ. ನನಗೆ ಈಗ 31 ವರ್ಷ. ನನ್ನಲ್ಲಿ ಇನ್ನೂ ಕೆಲವು ವರ್ಷಗಳ ಆಟ ಮಾತ್ರ ಉಳಿದಿದೆ. ಆದ್ದರಿಂದ, ಇಂದಿನಿಂದ, ನನ್ನ ಬ್ಯಾಟಿಂಗ್ ಬಗ್ಗೆ ನನಗೆ ಯಾರ ಸೂಚನೆ ಅಥವಾ ಸಲಹೆಗಳ ಅಗತ್ಯವಿಲ್ಲ. ನಾನು ಹೇಗೆ ಆಡುತ್ತೇನೆ ಎಂದು ನಾನು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
ಐಪಿಎಲ್ 2027ಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಯಕತ್ವ ಬದಲಾವಣೆ ಮಾಡಲಿದ್ದು, ರುತುರಾಜ್ ಗಾಯಕ್ವಾಡ್ ಬದಲಿಗೆ ಸಂಜು ಸ್ಯಾಮ್ಸನ್ ನಾಯಕನಾಗಲಿದ್ದಾರೆ ಅನ್ನೋ ಚರ್ಚೆ ನಡೆಯುತ್ತಿದೆ. 2027ರ ಐಪಿಎಲ್ನಲ್ಲಿ ಗಾಯಕ್ವಾಡ್ CSK ಪರ ಪ್ರಮುಖ ಬ್ಯಾಟ್ಸ್ಮನ್ ಆಗಿ ಮುಂದುವರಿದ್ರೆ, ಸಂಜು ಸ್ಯಾಮ್ಸನ್ IPL 2027 ರಿಂದ ಹೊಸ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಮಹಿಳಾ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡವನ್ನ ಸ್ಮೃತಿ ಮಂದಾನ ಏಕಾಂಕಿ ಹೋರಾಟದ ಮೂಲಕ ಗೆಲ್ಲಿಸಿಕೊಟ್ಟಿದ್ದಾರೆ. ಸನ್ರೈಸರ್ಸ್ ಲೀಡ್ಸ್ ನೀಡಿದ 143 ರನ್ಗಳ ಗುರಿಯನ್ನು ಬೆನ್ನತ್ತಿದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ತಂಡಕ್ಕೆ ಸ್ಮೃತಿ ಮಂಧಾನ ಉತ್ತಮ ಆರಂಭ ಒದಗಿಸಿದ್ದರು. ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ ಧೃತಿಗೆಡದ ಸ್ಮೃತಿ ಮಂಧಾನ ಕೇವಲ 50 ಎಸೆತಗಳಲ್ಲಿ 7 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 88 ರನ್ ಗಳಿಸಿ ತಂಡವನ್ನ ಗೆಲ್ಲಿಸಿದ್ರು.
ಲಂಕಾ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾರತದ ಮಾಜಿ ಅಂಡರ್-19 ಕ್ರಿಕೆಟಿಗ ಮಂಜೋತ್ ಕಲ್ರಾ ಮತ್ತು ಯುವರಾಜ್ ಪುಷ್ಪಾ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಇಬ್ಬರೂ ಆರೋಪಿಗಳಿಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಬೇಕೆಂದು ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಅಸ್ತಿತ್ವದಲ್ಲಿರುವ ರಿಮಾಂಡ್ ಆದೇಶವನ್ನು ಮುಂದುವರಿಸಲು ಆದೇಶ ನೀಡಿದೆ.
ಪಾಕಿಸ್ತಾನ್ ತಂಡದ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸು ಸಂಪೂರ್ಣವಾಗಿ ನುಚ್ಚುನೂರಾಗಿದೆ. 8 ಪಂದ್ಯ ಬಾಕಿ ಉಳಿದ್ರೂ, ಪಾಕ್ ಪಡೆ ಅಧಿಕೃತವಾಗಿ ಫೈನಲ್ ರೇಸ್ನಿಂದ ಹೊರಬಿದ್ದ ಮೊದಲ ತಂಡವಾಗಿದೆ. ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಪಾಕಿಸ್ತಾನ್ ತಂಡವು ಈವರೆಗೆ 5 ಪಂದ್ಯಗಳನ್ನಾಡಿದೆ. ಈ ಐದು ಮ್ಯಾಚ್ಗಳಲ್ಲಿ ಸೌತ್ ಆಫ್ರಿಕಾ ವಿರುದ್ಧ ಒಂದು ಪಂದ್ಯ ಮಾತ್ರ ಗೆದ್ದಿದೆ. ಇನ್ನುಳಿದ 4 ಪಂದ್ಯಗಳಲ್ಲೂ ಹೀನಾಯವಾಗಿ ಸೋತಿರುವ ಕಾರಣ ಇದೀಗ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭರ್ಜರಿ ಜಯ ಸಾಧಿಸಿದೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಸೆಕೆಂಡ್ ಇನ್ನಿಂಗ್ಸ್ನಲ್ಲಿ 211 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವನ್ನು 120 ರನ್ಗಳಿಗೆ ಆಲೌಟ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡವು 90 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ವಿಂಡೀಸ್ ಪಡೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ನೋಡಿರಿ

