ಬಿಸಿಲಿನ ತಾಪಕ್ಕೆ 14 ಮಂದಿ ಸಾವು – ಹೊರಾಂಗಣ ಕಾರ್ಯಕ್ರಮಗಳಿಗೆ ಬ್ರೇಕ್
ಮಹಾರಾಷ್ಟ್ರದ ನವಿ ಮುಂಬೈಯಲ್ಲಿ ಭಾನುವಾರ ನಡೆದ ಮಹಾರಾಷ್ಟ್ರ ಭೂಷಣ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ವೇಳೆ ಬಿಸಿಲಿನ ತಾಪಕ್ಕೆ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದ ನವಿ ಮುಂಬೈಯಲ್ಲಿ ಭಾನುವಾರ ಸಮಾಜ ಸುಧಾರಕ ಅಪ್ಪಾಸಾಹೇಬ್ ಅವರಿಗೆ ‘ಮಹಾರಾಷ್ಟ್ರ ಭೂಷಣ್’ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. ಇದರಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಈ ವೇಳೆ ಸನ್ ಸ್ಟ್ರೋಕ್ ಗೆ ಜನ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಮತ್ತೊಬ್ಬರು ಅಸುನೀಗಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಈ ಅವಘಡವನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರ ಸರ್ಕಾರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಯಾವುದೇ ಹೊರಾಂಗಣ ಕಾರ್ಯಕ್ರಮ ನಡೆಸುವಂತಿಲ್ಲ ಅಂತಾ ಆದೇಶ ನೀಡಿದೆ.
ಇದನ್ನೂ ಓದಿ: ಹೆಚ್ಚಾಗುತ್ತಿದೆ ಸೈಬರ್ ವಂಚನೆ – ಉದ್ಯೋಗ ಹುಡುಕುತ್ತಿರುವವರೇ ಟಾರ್ಗೆಟ್!
ಇನ್ನು ದೇಶದ ಪೂರ್ವ ಭಾಗದ ಕೆಲವು ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ವಾಯವ್ಯ ಭಾಗಕ್ಕೆ ಮುಂದಿನ 2 ದಿನಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ದೇಶದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಮಕ್ಕಳು, ವೃದ್ಧರು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ಬಿಸಿಲಿನಲ್ಲಿ ಸುತ್ತಾಡುವುದನ್ನು ಆದಷ್ಟು ಕಡಿಮೆ ಮಾಡಬೇಕು. ಬಾಯಾರಿಕೆಯಾಗದಿದ್ದರೂ ಪದೇ ಪದೆ ನೀರು ಕುಡಿಯುತ್ತಿರಬೇಕು. ಒಆರ್ ಎಸ್ ಅಥವಾ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಕುಡಿಯುತ್ತಿರಬೇಕು ಅಂತಾ ತಜ್ಞರು ಸೂಚಿಸಿದ್ದಾರೆ.