IND Vs PAK ಪಂದ್ಯಗಳು ಬ್ಯಾನ್?  – ಪಹಲ್ಗಾಂ ದಾಳಿಗೆ ಭಾರತದ ರಿವೇಂಜ್?

IND Vs PAK ಪಂದ್ಯಗಳು ಬ್ಯಾನ್?  – ಪಹಲ್ಗಾಂ ದಾಳಿಗೆ ಭಾರತದ ರಿವೇಂಜ್?

ಜ್ವಾಲಾಮುಖಿಯಂತ ಸಿಟ್ಟು ಒಂದ್ಕಡೆ. ಕಿಬ್ಬೊಟ್ಟೆಯೇ ಕಿತ್ತು ಬರುವಂತ ಸಂಕಟ ಮತ್ತೊಂದ್ಕಡೆ. ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ನರಮೇಧಕ್ಕೆ 140 ಕೋಟಿ ಭಾರತೀಯರ ಒಡಲಿಗೇ ಬೆಂಕಿ ಬಿದ್ದಂತಾಗಿದೆ. ಅಮಾಯಕರ ಸಾವಿನ ಮೇಲೆ ಕೇಕೆ ಹಾಕಿದವರ ರುಂಡ ಚೆಂಡಾಡ್ಬೇಕು ಅಂತಾ ಇಡೀ ದೇಶವೇ ಒಕ್ಕೊರಲಿನಿಂದ ಮೊರೆ ಇಡ್ತಿದೆ. ನಿಜ ಏನಂದ್ರೆ ಭಾರತೀಯರ ಈ ಹತ್ಯಾಕಾಂಡದ ಹಿಂದೆ ಇರೋದು ಪರಮಪಾಪಿ ಪಾಕಿಸ್ತಾನ ಅನ್ನೋದನ್ನ ಬಿಡಿಸಿ ಹೇಳ್ಬೇಕಿಲ್ಲ. ನರರಾಕ್ಷಸರನ್ನೇ ಸಾಕಿ ಬೆಳೆಸ್ತಿರೋ ಪಾಕಿಸ್ತಾನ ಬೆನ್ನಿಗೆ ಚೂರಿ ಇರಿಯೋ ಕೆಲಸ ಮಾಡ್ತಾನೇ ಇದೆ. ಶಾಂತಿಯ ಹೂದೋಟದಂತಿರೋ ಹಿಂದೂಸ್ಥಾನದಲ್ಲಿ ರಕ್ತ ಹರಿಸಿರೋ ಕುತಂತ್ರಿ ಪಾಕ್​ಗೆ ಬುದ್ಧಿ ಕಲಿಸಬೇಕಿದೆ. ಇದಕ್ಕೆ ಕ್ರಿಕೆಟಿಗರು ಕೂಡ ಧ್ವನಿ ಎತ್ತಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸೋಕೆ ಸರ್ಕಾರ ಸರ್ವಸನ್ನದ್ಧವಾಗ್ತಿದ್ರೆ ಕ್ರಿಕೆಟಿಗರೂ ಕೂಡ ಮರ್ಮಾಘಾತ ನೀಡೋಕೆ ರೆಡಿಯಾಗಿದ್ದಾರೆ.

ಇದನ್ನೂ ಓದಿ : RCBಗೆ ಅಯ್ಯರ್ ಬರದಿದ್ದೇ ಅದೃಷ್ಟ -₹23.50 ಕೋಟಿ ವೇಸ್ಟ್ ಆಗುತ್ತಿತ್ತಾ?

ಪಹಲ್ಗಾಂ ನಲ್ಲಿ ನಡೆದ ನರಮೇಧಕ್ಕೆ ಸಾಕಷ್ಟು ಕ್ರಿಕೆಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನ ಹಾಕೋ ಮೂಲಕ ಪಾಪಿಗಳಿಗೆ ತಕ್ಕ ಶಾಸ್ತಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಅಲ್ದೇ ಪಾಕಿಸ್ತಾನದ ಜೊತೆ ಇನ್ಮುಂದೆ ಯಾವುದೇ ಮಾದರಿಯ ಕ್ರಿಕೆಟ್​ಗಳನ್ನೂ ಆಡದಂತೆ ಮಾಜಿ ಕ್ರಿಕೆಟಿಗ ಶ್ರೀವತ್ಸ ಗೋಸ್ವಾಮಿ ಪೋಸ್ಟ್ ಹಾಕಿದ್ದಾರೆ. ಪಾಕಿಸ್ತಾನದೊಂದಿಗೆ ಈಗಲ್ಲ ಎಂದಿಗೂ ಕ್ರಿಕೆಟ್ ಆಡಬಾರದು.  ಚಾಂಪಿಯನ್ಸ್ ಟ್ರೋಫಿ ವೇಳೆ ಬಿಸಿಸಿಐ ಅಥವಾ ಸರ್ಕಾರ ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗೆ ಭಾರತದ ಆಟಗಾರರನ್ನು ಕಳುಹಿಸಲು ನಿರಾಕರಿಸಿದಾಗ, ಕೆಲವರು ಕ್ರೀಡೆ ರಾಜಕೀಯವನ್ನು ಮೀರಿ ಮೇಲೇರಬೇಕು ಎಂದಿದ್ರು. ಆದ್ರೆ ಅಮಾಯಕ ಭಾರತೀಯರನ್ನು ಕೊಲ್ಲುವುದು ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಯಂತೆ ಕಾಣುತ್ತೆ. ಹೀಗಾಗಿ ಭಾರತವು ಬ್ಯಾಟ್ ಮತ್ತು ಚೆಂಡಿನಿಂದ ಅಲ್ಲ, ಅಷ್ಟೇ ಕಠೋರವಾಗಿ ಪ್ರತಿಕ್ರಿಯಿಸಬೇಕು ಎಂದು ಬರೆದುಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ನಿಂತು ದಶಕವೇ ಕಳೆದಿದೆ. 2012-13ರಿಂದ ಭಾರತ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಹಾಗೂ ಪಾಕಿಸ್ತಾನದಕ್ಕೂ ಪ್ರಯಾಣ ಬೆಳೆಸಿಲ್ಲ. ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಉಭಯ ತಂಡಗಳು ಎದುರು ಬದುರಾಗುತ್ತಿವೆ. ಈ ವರ್ಷದ ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿಗೆ ತನ್ನ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿದ್ದರೂ, ಇತರ ಭಾರತೀಯ ತಂಡಗಳು ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ಮುಂದುವರಿಸಿವೆ. ಕ್ರಿಕೆಟ್ ಹೊರತುಪಡಿಸಿ ಬೇರೆ ಮಾದರಿಯ ಕ್ರೀಡಾಪಟುಗಳು ಭೇಟಿ ನೀಡ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವ್ರೂ ಕೂಡ ಪ್ರಯಾಣ ಬೆಳೆಸಬಾರದು ಅನ್ನೋ ಒತ್ತಾಯ ಶುರುವಾಗಿದೆ.

ಪಹಲ್ಗಾಂವ್‌ ದಾಳಿಯ ಹಿಂದಿನ ಮಾಸ್ಟರ್‌ಮೈಂಡ್ ಸೈಫುಲ್ಲಾ ಖಾಲಿದ್ ಆಗಿರಬಹುದು ಎನ್ನಲಾಗಿದೆ. ಸೈಫುಲ್ಲಾ ಕಸೂರಿ ಎಂದೂ ಕರೆಯಲ್ಪಡುವ ಸೈಫುಲ್ಲಾ ಖಾಲಿದ್, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯೊಂದರ ಉಪ ಮುಖ್ಯಸ್ಥ. ಇಂಥಾ ನೀಚ ಕೃತ್ಯಗಳನ್ನ ನಡೆಸಲು ಪಾಕಿಸ್ತಾನದ ಸಂಪೂರ್ಣ ಬೆಂಬಲವನ್ನು ಪಡೆಯುವ ಖಾಲಿದ್, ಪಾಕ್ ಸೇನಾ ಅಧಿಕಾರಿಗಳೊಂದಿಗೂ ಸಂಪರ್ಕ ಹೊಂದಿದ್ದಾನೆ. ಅಲ್ದೇ  ಪಾಕ್‌ನಲ್ಲಿ ಯಾವುದೇ ಭಯವಿಲ್ಲದೆ ಓಡಾಡ್ತಾನೆ. ಅದೆಲ್ಲಕ್ಕಿಂತ ಶಾಕಿಂಗ್ ವಿಚಾರ ಅಂದ್ರೆ ಭಾರತದ ವಿರುದ್ಧ ಪಾಕಿಸ್ತಾನ ಸೇನೆಯನ್ನು ಪ್ರಚೋದನೆ ಮಾಡುತ್ತಿದ್ದಾನೆ. ಪಾಕಿಸ್ತಾನಿ ಸೇನಾ ಅಧಿಕಾರಿಗಳು ಈತನ ಮೇಲೆ ಹೂವುಗಳನ್ನು ಸುರಿದು ಸ್ವಾಗತಿಸುವಷ್ಟ್ರರ ಮಟ್ಟಿಗೆ ಪ್ರಭಾವ ಬೀರಿದ್ದಾನೆ. ಹೀಗಾಗಿ ಪಾಕ್​ನ ಸೇನೆ ಕುಮ್ಮಕ್ಕಿಲ್ಲದೆ ಆತನ ಚಮಚಾಗಳು ಇಂಥಾದ್ದೊಂದು ಕ್ರೌರ್ಯ ಮೆರೆಯೋಕೆ ಸಾಧ್ಯನೇ ಇಲ್ಲ. ಹಿಗಾಗಿ ಇಂಥಾ ನೀಚ ಮನಸ್ಥಿತಿಯ ಪಾಕ್ ಜೊತೆ ಕ್ರಿಕೆಟ್ ಮಾತ್ರವಲ್ಲದೆ ಯಾವುದೇ ಕ್ರೀಡೆ ಆಡೋದು ಬೇಡ ಅನ್ನೋ ಕೂಗು ಕೇಳಿ ಬರ್ತಿದೆ.

ಸದ್ಯ ಪಹಲ್ಗಾಂ ಅಟ್ಯಾಕ್ ಬಗ್ಗೆ 143 ಕೋಟಿ ಭಾರತೀಯರ ಹೃದಯ ಭಾರವಾಗಿದೆ. ಕನ್ನಡಿಗರ ಮನೆಗಳಲ್ಲೂ ಕಣ್ಣೀರು ಹರಿದಿದೆ. ಒಂದೊಂದು ಫೋಟೋಗಳೂ ಒಂದೊಂದು ಭಯಾನಕತೆಗೆ ಸಾಕ್ಷಿಯಂತಿದೆ. ಅದ್ರಲ್ಲೂ ಈ ನವದಂಪತಿಯ ಬದುಕಿನ ದುರಂತಕ್ಕೆ ಇಡೀ ರಾಷ್ಟ್ರವೇ ನಿರುತ್ತರವಾಗಿ ನಿಂತಿದೆ. ಈ ಸಾವುಗಳಿಗೆ ನ್ಯಾಯ ಕೊಡ್ಲೇಬೇಕಿದೆ. ಅಟ್ಟಹಾಸ ಮೆರೆದವ್ರನ್ನ ಮಟ್ಟ ಹಾಕ್ಲೇಬೇಕಿದೆ.

Shantha Kumari

Leave a Reply

Your email address will not be published. Required fields are marked *