ಭಯೋತ್ಪಾದನೆ ಬೆಂಬಲಿಸುವವರಿಗೆ ಯಾವ ದೇಶದಲ್ಲಿ ಜಾಗ ಕೊಡಬಾರದು- ಪ್ರಧಾನಿ ಮೋದಿ

ಭಯೋತ್ಪಾದನೆ ಬೆಂಬಲಿಸುವವರಿಗೆ ಯಾವ ದೇಶದಲ್ಲಿ ಜಾಗ ಕೊಡಬಾರದು- ಪ್ರಧಾನಿ ಮೋದಿ

ನವದೆಹಲಿ: ಉಗ್ರವಾದ ಮತ್ತು ತೀವ್ರವಾದದ ಸಮಸ್ಯೆಯನ್ನು ನಾವು ಜಂಟಿಯಾಗಿ ಪರಿಹರಿಸಬೇಕಿದೆ. ಭಯೋತ್ಪಾದನೆಯನ್ನು ಬೆಂಬಲಿಸುವವರಿಗೆ ಯಾವ ದೇಶದಲ್ಲಿಯೂ ಜಾಗ ಕೊಡಕೂಡದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ತಾಜ್ ಪ್ಯಾಲೇಸ್​ ಹೊಟೇಲ್​ನಲ್ಲಿ ನಡೆಯುತ್ತಿರುವ ‘ಭಯೋತ್ಪಾದನೆಗೆ ಹಣಕಾಸು ಬೇಡ’   ಎಂಬ ವಿಷಯಾಧಾರಿತ ಮೂರನೇ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು ಭಯೋತ್ಪಾದಕ ಸಂಘಟನೆಗಳು ಹಲವಾರು ಮೂಲಗಳಿಂದ ಹಣವನ್ನು ಪಡೆಯುತ್ತವೆ. ಈ ಪೈಕಿ ಪ್ರಮುಖವಾದದ್ದು ಕೆಲವು ದೇಶಗಳ ಬೆಂಬಲ. ಆ ದೇಶಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತವೆ. ಭಯೋತ್ಪಾದಕರಿಗೆ ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕ ಬೆಂಬಲವನ್ನು ನೀಡುತ್ತವೆ ಎಂದು ಪರೋಕ್ಷವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರೈಲ್ವೆ ಇಲಾಖೆ ಸಿಬ್ಬಂದಿಗೆ ಕೇಂದ್ರದಿಂದ ಸಿಹಿಸುದ್ದಿ- ಶೀಘ್ರವೇ ವೇತನ ಹೆಚ್ಚಳ

ಕಳೆದ ಕೆಲವು ದಶಕಗಳಿಂದ ಭಯೋತ್ಪಾದನೆಯು ಹಲವು ಹೆಸರುಗಳಿಂದ ಜಗತ್ತಿನ ಹಲವೆಡೆ ವ್ಯಾಪಿಸಿದೆ. ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸುತ್ತಿರುವ ದೇಶವೊಂದರ ಜತೆ ಸಂವಹನಕ್ಕೆ ನಿಮಗೆಲ್ಲ ಅವಕಾಶ ದೊರೆತಿದೆ ಎಂದು ಹೇಳಿದರು.

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದು ಎಲ್ಲ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಒಬ್ಬ ಭಯೋತ್ಪಾದಕನನ್ನು ಶಸ್ತ್ರಾಸ್ತ್ರಗಳ ಮೂಲಕ ನಾಶಗೊಳಿಸಬಹುದು. ಆದರೆ, ಇದು ಕೇವಲ ತಾತ್ಕಾಲಿಕ ಕ್ರಮವಾಗಬಹುದಷ್ಟೆ. ಇದರಿಂದ ಭಯೋತ್ಪಾದನೆಯ ಸಂಪೂರ್ಣ ನಾಶ ಅಸಾಧ್ಯ. ಭಯೋತ್ಪಾದನೆಗೆ ನೀಡುವ ಹಣಕಾಸು ನೆರವಿಗೆ ತಡೆಯೊಡ್ಡಬೇಕು. ಅವರ ಹಣಕಾಸಿನ ಮೂಲಕ್ಕೆ ಅಡ್ಡಿ ಮಾಡಬೇಕು. ಅವರಿಗೆ ಹಣಕಾಸು ನೆರವು ನೀಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಎಲ್ಲಾ ಭಯೋತ್ಪಾದಕ ದಾಳಿಗಳು ಸಮಾನ ಆಕ್ರೋಶಕ್ಕೆ ಅರ್ಹವಾಗಿವೆ. ಎಲ್ಲಿ ದಾಳಿ ನಡೆದಿದೆ, ಯಾರ ಮೇಲೆ ನಡೆದಿದೆ ಎಂಬುದು ಪ್ರಶ್ನೆಯಲ್ಲ. ಭಯೋತ್ಪಾದಕ ದಾಳಿಗಳ ವಿರುದ್ಧ ಇಡೀ ವಿಶ್ವ ಒಂದಾಗಿ ಹೋರಾಡಬೇಕಿದೆ. ಉಗ್ರರಿಂದ ನಡೆಯುವ ಒಂದೇ ಒಂದು ದಾಳಿಯನ್ನೂ ನಾವು ಹಲವಾರು ಎಂದೇ ಪರಿಗಣಿಸುತ್ತೇವೆ. ಒಂದೇ ಒಂದು ಜೀವ ಕಳೆದು ಹೋದರೂ ಅದರ ಬೆಲೆ ಅಮೂಲ್ಯ. ಹಾಗಾಗಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವವರೆಗೂ ನಾವು ವಿರಮಿಸುವುದಿಲ್ಲ ಎಂದು  ಹೇಳಿದರು.

suddiyaana