15 ವರ್ಷದೊಳಗಿನ ಮಕ್ಕಳಿಗೆ ನೋ ಕೋಚಿಂಗ್ ಕ್ಲಾಸ್ – ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಪೋಷಕರೇ ಈ ಸುದ್ದಿ ಓದಲೇಬೇಕು. ನಿಮ್ಮ ಮಕ್ಕಳು ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದರೆ ಈ ಸುದ್ದಿ ಗಮನಿಸಲೇಬೇಕು. ಯಾಕೆಂದರೆ, ರಾಜ್ಯ ಸರ್ಕಾರ ಕೋಚಿಂಗ್ ಕ್ಲಾಸ್ ವಿಚಾರದಲ್ಲಿ ಕೆಲವೊಂದು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ.
ಇದನ್ನೂ ಓದಿ:ಹಾಸನಾಂಬೆ ದರ್ಶನ ಆರಂಭ – ವರ್ಷಕ್ಕೊಮ್ಮೆ ದರ್ಶನ ಕೊಡುವ ತಾಯಿಯ ಮಹಿಮೆ ಏನು?
ರಾಜ್ಯದಲ್ಲಿ ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ಮೂಗುದಾರ ಹಾಕಲು ರಾಜ್ಯ ಸರ್ಕಾರ ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದಿದೆ. 15 ವರ್ಷದೊಳಗಿನ ಮಕ್ಕಳಿಗೆ ಕೋಚಿಂಗ್ ಕ್ಲಾಸ್ ಎಂಟ್ರಿಯನ್ನು ನಿಷೇಧ ಮಾಡಲಾಗಿದೆ. ಖಾಸಗಿ ಕೋಚಿಂಗ್ ಸೆಂಟರ್ಗಳ ಅತಿಯಾದ ಒತ್ತಡ, ದರ ವಸೂಲಿ ಹಾಗೂ ಶೈಕ್ಷಣಿಕ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊಸದಾಗಿ ಕಠಿಣ ಕರಡು ನಿಯಮಗಳನ್ನು ಪ್ರಕಟಿಸಿದೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಈ ಹೊಸ ನಿಯಮಗಳ ಪ್ರಕಾರ, 15 ವರ್ಷದ ಕೆಳಗಿನ ಅಥವಾ ಹತ್ತನೇ ತರಗತಿ ಪೂರ್ಣಗೊಳಿಸದ ವಿದ್ಯಾರ್ಥಿಗಳನ್ನು ಯಾವುದೇ ಖಾಸಗಿ ಕೋಚಿಂಗ್ ಕೇಂದ್ರಗಳು ದಾಖಲಿಸಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡವನ್ನು ತಗ್ಗಿಸಲು ಕೋಚಿಂಗ್ ತರಗತಿಗಳ ಅವಧಿಯನ್ನು ಪ್ರತಿದಿನ ಗರಿಷ್ಠ ಐದು ಗಂಟೆಗಳಿಗೆ ಮಿತಿಗೊಳಿಸಲಾಗಿದೆ. ಈ ಕೇಂದ್ರಗಳು ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಹಾಗೂ ಮುಖ್ಯ ಶಾಲೆ ಅಥವಾ ಕಾಲೇಜು ಅವಧಿಯಲ್ಲಿ ಯಾವುದೇ ತರಗತಿಗಳನ್ನು ನಡೆಸುವಂತಿಲ್ಲ. ಇದರೊಂದಿಗೆ, ಪ್ರತಿ ಕ್ಯಾಂಪಸ್ನಲ್ಲಿ ಕಡ್ಡಾಯವಾಗಿ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು ಹಣಕಾಸಿನ ವಿಚಾರದಲ್ಲೂ ಖಾಸಗಿ ಕೋಚಿಂಗ್ ಸೆಂಟರ್ಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ. ಪೂರ್ಣ ಕೋರ್ಸ್ ಶುಲ್ಕವನ್ನು ಒಂದೇ ಬಾರಿಗೆ ಮುಂಗಡವಾಗಿ ಪಡೆಯುವುದನ್ನು ನಿಷೇಧಿಸಲಾಗಿದೆ. ಪೋಷಕರು ಕನಿಷ್ಠ ನಾಲ್ಕು ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ವಿದ್ಯಾರ್ಥಿಗಳು ಮಧ್ಯದಲ್ಲೇ ಕೋರ್ಸ್ ಬಿಟ್ಟರೆ, ಉಳಿದ ಅವಧಿಯ ಶುಲ್ಕವನ್ನು 10 ದಿನಗಳ ಒಳಗೆ ವಾಪಸ್ ನೀಡಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿ ಉಲ್ಲಂಘಿಸುವ ಮತ್ತು ನೋಂದಣಿ ಮಾಡಿಕೊಳ್ಳದ ಸಂಸ್ಥೆಗಳಿಗೆ ಭಾರೀ ದಂಡ ವಿಧಿಸುವುದರ ಜೊತೆಗೆ, ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಸಂಸ್ಥೆಯನ್ನು ಸೀಲ್ ಮಾಡುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.

ನೋಡಿರಿ

