ಶಿವರಾಜ್​ಕುಮಾರ್ ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ – ಸ್ಪಷ್ಟಪಡಿಸಿದ ಚುನಾವಣಾ ಆಯೋಗ

ಶಿವರಾಜ್​ಕುಮಾರ್ ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ – ಸ್ಪಷ್ಟಪಡಿಸಿದ ಚುನಾವಣಾ ಆಯೋಗ

ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಚಾರದ ಕಾವು ಜೋರಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೀತಾ ಶಿವರಾಜ್​ಕುಮಾರ್ ಅಖಾಡಕ್ಕಿಳಿಯುತ್ತಿದ್ದಾರೆ. ಶಿವರಾಜ್​ಕುಮಾರ್ ಅವರು ಪತ್ನಿ ಪರವಾಗಿ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಅವರು ನಟಿಸಿದ ಸಿನಿಮಾ, ಜಾಹೀರಾತುಗಳ ಮೇಲೆ ಬ್ಯಾನ್ ಹೇರುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಕೆ ಆಗಿತ್ತು. ಸಿನಿಮಾಗಳ ಮೇಲೆ ಬ್ಯಾನ್ ಹೇರಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: ಯದುವೀರ್ ಸೋಲಿಗೆ ಸಿದ್ಧವಾಯ್ತು ತಂತ್ರ – ಮೈಸೂರು ಗೆಲ್ಲಲು ಸಿದ್ದು ಪ್ಲ್ಯಾನ್ ಏನು?

ಈ ಹಿಂದೆ ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್​. ರಘು ಇತ್ತೀಚೆಗೆ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ವೇಳೆ ವಿಶೇಷ ಮನವಿ ಸಲ್ಲಿಕೆ ಮಾಡಿದ್ದರು. ‘ಸಿನಿಮಾ ಮತ್ತು ವೈಯಕ್ತಿಕ ವರ್ಚಸ್ಸಿನ ಮೂಲಕ ಶಿವರಾಜ್​ಕುಮಾರ್ ರಾಜ್ಯದಲ್ಲಿ ಪ್ರಭಾವ ಹೊಂದಿದ್ದಾರೆ. ಲೋಕಸಭಾ ಚುನಾವಣೆ ಮುಗಿಯುವ ತನಕ ಶಿವರಾಜ್​ಕುಮಾರ್​ ಅವರ ಸಿನಿಮಾ, ಬಿಲ್​ಬೋರ್ಡ್, ಜಾಹೀರಾತು ಪ್ರದರ್ಶನ ಮಾಡದಂತೆ ಚಿತ್ರಮಂದಿರ, ಟಿವಿ ಚಾನೆಲ್​, ಸೋಶಿಯಲ್​ ಮೀಡಿಯಾ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಬೇಕು’ ಎಂದು ಅವರು ಕೋರಿದ್ದರು.

ಇದೀಗ ಈ ಮನವಿಗೆ ಚುನಾವಣಾ ಆಯೋಗ ಉತ್ತರಿಸಿದೆ. ‘ಚುನಾವಣೆಗೆ ಸ್ಪರ್ಧಿಸುವ ಅಥವಾ ಪ್ರಚಾರ ಮಾಡುವ ನಟರನ್ನು ಒಳಗೊಂಡ ಸಿನಿಮಾಗಳ ಪ್ರದರ್ಶನವನ್ನು ಸರ್ಕಾರದ ಹಣದಿಂದ ನಡೆಸಲ್ಪಡುವ ದೂರದರ್ಶನದಲ್ಲಿ ಮಾತ್ರ ನಾವು ನಿಷೇಧಿಸಬಹುದು. ಖಾಸಗಿ ಟಿವಿ ಚಾನೆಲ್‌ಗಳು ಮತ್ತು ಸಿನಿಮಾ ಥಿಯೇಟರ್‌ಗಳಲ್ಲಿ ವಾಣಿಜ್ಯ ಪ್ರದರ್ಶನಗಳನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.

Shwetha M