ವಿಪಕ್ಷ ನಾಯಕನ ಜೊತೆ ಕಾಣಿಸಿಕೊಂಡ ನಿತೀಶ್ ಕುಮಾರ್! – ಎನ್‌ಡಿಎ ಗೆ ಕೈ ಕೊಡ್ತಾರಾ ಬಿಹಾರ ಸಿಎಂ?
ಲೋಕಸಭೆ ಚುನಾವಣೆಯ ಫಲಿತಾಂಶ ನಿನ್ನೆ ಹೊರಬಿದ್ದಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಳ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದ್ದು, ಆದರೆ ಇದರ ನಡುವಲ್ಲೇ ಕೇಂದ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಎನ್‌ಡಿಎ ತೊರೆದು ನಿತೀಶ್ ಕುಮಾರ್ ಇಂಡಿಯಾ ಮೈತ್ರಿಗೆ ಹೋಗುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಮೊದಲ ವಿಶ್ವಕಪ್ ಪಂದ್ಯಕ್ಕೆ ಕೌಂಟ್‌ಡೌನ್ – ಐರ್ಲೆಂಡ್ ವಿರುದ್ಧ ಕಾದಾಟ
ಬುಧವಾರ ಇಂಡಿಯಾ ಮತ್ತು ಎನ್‌ಡಿಎ ಒಕ್ಕೂಟದ ಪಕ್ಷಗಳ ಸಭೆ ದೆಹಲಿಯಲ್ಲಿ ನಡಿತಾ ಇದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಂದೇ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಿ ಅಚ್ಚರಿ ಮೂಡಿಸಿದ್ದಾರೆ. ವಿಮಾನದಲ್ಲಿ ನಿತೀಶ್ ಕುಮಾರ್ ಮುಂದುಗಡೆ ಸೀಟ್ ಕುಳಿತುಕೊಂಡಿದ್ದರೆ, ಹಿಂದುಗಡೆ ತೇಜಸ್ವಿ ಯಾದವ್ ಆಸೀನರಾಗಿದ್ದಾರೆ. ಇಬ್ಬರು ನಾಯಕರು ವಿಮಾನದಲ್ಲಿ ಮಾತನಾಡಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ. ಇಂಡಿಯಾ ಒಕ್ಕೂಟ ಈಗಾಗಲೇ ನಿತೀಶ್ ಕುಮಾರ್ ಅವರನ್ನು ಮೈತ್ರಿಮಾಡಿಕೊಳ್ಳುವಂತೆ ಆಹ್ವಾನ ನೀಡಿದೆ. ಹೀಗಿದ್ದರೂ ನಿತೀಶ್ ಕುಮಾರ್ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದೀಗ ವಿಮಾನ ಪ್ರಯಾಣ ಭಾರಿ ಅಚ್ಚರಿಗೆ ಕಾರಣವಾಗಿದೆ.
ದೆಹಲಿಯಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಲ್ಲದೆ, ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ ಅವರನ್ನೂ ದೆಹಲಿಗೆ ಕರೆಯಲಾಗಿದ್ದು, ಹೀಗಾಗಿ ಅವರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣಾ ಫಲಿತಾಂಶದ ನಂತರ ಇಂದಿನ ದಿನವೂ ಅತ್ಯಂತ ಮಹತ್ವ ಪಡೆದುಕೊಂಡಿದೆ.