ಅಮೆರಿಕದ 30 ನಗರಗಳಿಗೆ ವಂಚಿಸಿದ ನಿತ್ಯಾನಂದ – ‘ಕೈಲಾಸ’ ದೇಶವೇ ಇಲ್ಲದೆ ಒಪ್ಪಂದ..!
ನಾನೊಬ್ಬ ದೇವಮಾನವ. ನಾನೇ ಕೈಲಾಸ ಎಂಬ ಸ್ವಂತ ದೇಶ ಕಟ್ಟಿದ್ದೇನೆ. ಇದು ಮೊದಲ ಹಿಂದೂ ರಾಷ್ಟ್ರ ಅಂತೆಲ್ಲಾ ಸ್ವಯಂಘೋಷಣೆ ಮಾಡಿಕೊಂಡು ಪುಂಗಿ ಬಿಡ್ಡಿದ್ದ ನಿತ್ಯಾನಂದ ಈಗ ಅಮೆರಿಕನ್ನರಿಗೂ ವಂಚಿಸಿದ್ದಾನೆ. ಅತ್ಯಾಚಾರ, ವಂಚನೆ ಪ್ರಕರಣದ ಬೆನ್ನಲ್ಲೇ ಬಂಧನ ಭೀತಿಯಿಂದ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ, ಸಿಸ್ಟರ್ ಸಿಟಿ ಅಥವಾ ಸೋದರ ನಗರಿ ಹೆಸರಿನಲ್ಲಿ ಅಮೆರಿಕದ ಬರೋಬ್ಬರಿ 30 ನಗರಗಳಿಗೆ ಮೋಸ ಮಾಡಿದ್ದಾನಂತೆ.
ರೇಪ್, ವಂಚನೆ ಕೇಸ್‌ನಲ್ಲಿ ಭಾರತದಿಂದ ಎಸ್ಕೇಪ್ ಆಗಿದ್ದ ನಿತ್ಯಾನಂದ ಬಳಿಕ ಕೈಲಾಸ ದೇಶ ಸ್ಥಾಪಿಸಿರೋದಾಗಿ ಘೋಷಿಸಿಕೊಂಡಿದ್ದ. ವಾರಗಳ ಹಿಂದಷ್ಟೇ ನಿತ್ಯಾನಂದನ ಕೈಲಾಸ ದೇಶದ ಮಹಿಳಾ ಪ್ರತಿನಿಧಿಗಳು ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ಭಾರೀ ಸುದ್ದಿಯಾಗಿತ್ತು. ಇದೀಗ ನಿತ್ಯಾನಂದ ಸಾಂಸ್ಕೃತಿಕ ಸಹಭಾಗಿತ್ವದ ಹೆಸರಿನಲ್ಲಿ ಅಮೆರಿಕದ 30 ನಗರಗಳಗೆ ಮೋಸ ಮಾಡಿದ್ದಾನೆ ಎಂದು ವರದಿಯಾಗಿದೆ.
ಇದನ್ನೂ ಓದಿ : ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಗವಹಿಸಿದ ‘ಕೈಲಾಸ’ದ ಪ್ರತಿನಿಧಿ – ನಿತ್ಯಾನಂದನಿಗೆ ರಕ್ಷಣೆ ಕೋರಿದ ಶಿಷ್ಯೆ..!
ರಾಮನಗರದ ಬಿಡದಿಯ ಆಶ್ರಮದಿಂದ ಪರಾರಿಯಾಗಿರುವ ನಿತ್ಯಾನಂದ ಕೈಲಾಸ ಎನ್ನುವ ಹೆಸರಿನಲ್ಲಿ ದೇಶವನ್ನು ಕಟ್ಟಿದ್ದಾನೆ. ತಮ್ಮ ಕೈಲಾಸ ದೇಶದಲ್ಲಿ ಅಮೆರಿಕದ ಪ್ರಮುಖ ನಗರಗಳು ಸಿಸ್ಟರ್ ಸಿಟಿ ಒಪ್ಪಂದ ಮಾಡಿಕೊಂಡಿವೆ ಎಂದು ವರದಿಯಾಗಿತ್ತು. ಸ್ವತಃ ನಿತ್ಯಾನಂದ ಟ್ವಿಟರ್ ಖಾತೆ ಮೂಲಕ ಈ ಬಗ್ಗೆ ಅಪ್‌ಡೇಟ್ ನೀಡುತ್ತಿದ್ದ. ಅಮೆರಿಕದ ನ್ಯೂಜೆರ್ಸಿ ರಾಜ್ಯದ ನೇವರ್ಕ್ ನಗರದೊಂದಿಗೆ ನಿತ್ಯಾನಂದ ಒಪ್ಪಂದ ಮಾಡಿಕೊಂಡಿದ್ದ. ಆದರೆ, ಇಂಥದ್ದೊಂದು ದೇಶವೇ ಇಲ್ಲ ಎಂದು ಗೊತ್ತಾದ ಬಳಿಕ ಈ ನಗರಗಳು ತಾವು ಮೋಸ ಹೋಗಿರುವುದು ಗೊತ್ತಾಗಿ ಒಪ್ಪಂದವನ್ನು ರದ್ದು ಮಾಡಿದೆ.
ನಿತ್ಯಾನಂದ ಮಾಡಿಕೊಂಡಿರುವ ಸಾಂಸ್ಕೃತಿಕ ಒಪ್ಪಂದದ ಅಡಿಯಲ್ಲಿ, ಈ ನಗರಗಳು ಮತ್ತು ಕೈಲಾಸ ದೇಶ ಅಭಿವೃದ್ಧಿಯಲ್ಲಿ ಪರಸ್ಪರ ಸಹಾಯ ಮಾಡುತ್ತವೆ. ಇದರಲ್ಲಿ ವಂಚನೆ ಏನೆಂದರೆ ಜಗತ್ತಿನಲ್ಲಿ ಕೈಲಾಸ ಎಂಬ ಹೆಸರಿನ ದೇಶವೇ ಇಲ್ಲ. ಅಮೆರಿಕದ ಫಾಕ್ಸ್ ನ್ಯೂಸ್ ಗುರುವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಓಹಿಯೋದ ಡೇಟನ್‌ನಿಂದ ವರ್ಜೀನಿಯಾದ ರಿಚ್‌ಮಂಡ್ ಮತ್ತು ಫ್ಲೋರಿಡಾದ ಬ್ಯೂನಾ ಪಾರ್ಕ್‌ವರೆಗಿನ ಹಲವು ನಗರಗಳ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಈ ಎಲ್ಲಾ ನಗರಗಳೊಂದಿಗೆ ಮಾಡಿಕೊಂಡ ಒಪ್ಪಂದಗಳ ಬಗ್ಗೆ ಸ್ವತಃ ಕೈಲಾಸದ ವೆಬ್‌ಸೈಟ್ ಬರೆದಿದೆ. 2019ರಲ್ಲಿ ಕೈಲಾಸ ಎಂಬ ಹೆಸರಿನ ದೇಶವನ್ನು ಸ್ಥಾಪಿಸಿರುವುದಾಗಿ ನಿತ್ಯಾನಂದ ಹೇಳಿಕೊಂಡಿದ್ದಾನೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ನಕಲಿ ದೇವಮಾನವ ನಿತ್ಯಾನಂದ ತಮಗೆ ಮೋಸ ಮಾಡಿದ್ದನ್ನು ಹಲವು ನಗರಗಳು ಒಪ್ಪಿಕೊಂಡಿವೆ. ಕೈಲಾಸ ದೇಶದ ಹೆಸರಿನಲ್ಲಿ ಕೆಲವು ದಿನಗಳ ಹಿಂದೆ ನಮಗೆ ಮನವಿ ಬಂದಿತ್ತು. ಅದಕ್ಕೆ ನಾವು ಸ್ಪಂದಿಸಿದ್ದೇವೆ. ಆದರೆ, ಅವರು ಮಾಡಿದ ವಿನಂತಿ ಏನೆಂದು ಈಗ ತಿಳಿಸಲು ಸಾಧ್ಯವಿಲ್ಲ. ಸರಿಯಾದ ಮಾಹಿತಿ ಸಂಗ್ರಹಣೆ ಮಾಡದೆ ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅಧಿಕಾರಿಗಳ ತಪ್ಪು ಎಂದು ಉಲ್ಲೇಖಿಸಲಾಗಿದೆ.
A fake Indian guru scammed 30 American cities #FoxNews pic.twitter.com/Xhpc3XIzZO
— Jesse Watters Primetime (@jesseprimetime) March 16, 2023
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಹುಟ್ಟಿದ್ದು ತಮಿಳುನಾಡಿನ ತಿರುವಣ್ಣಾಮಲೈ ನಗರದಲ್ಲಿ. ಅರುಣಾಚಲಂ ರಾಜಶೇಖರನ್ ಎನ್ನುವುದು ಮೂಲ ಹೆಸರು. 12ನೇ ವಯಸ್ಸಿನಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ಹೊಂದಲು ಆರಂಭಿಸಿದ್ದ ಹಾಗೂ 22ನೇ ವಯಸ್ಸಿನಲ್ಲಿ ತಮಗೆ ಜ್ಞಾನೋದಯ ಪ್ರಾಪ್ತವಾಯಿತು ಎಂದು ಹೇಳಿಕೊಂಡಿದ್ದ. 24ನೇ ವಯಸ್ಸಿನಲ್ಲಿ ನಿತ್ಯಾನಂದ ಎನ್ನವ ಹೆಸರಿನಲ್ಲಿ ಜನರಿಗೆ ಪ್ರವಚನಗಳನ್ನು ನೀಡಲು ಪ್ರಾರಂಭ ಮಾಡಿದ್ದ. 2003 ರಲ್ಲಿ ಅವರು ಕರ್ನಾಟಕದ ಬೆಂಗಳೂರಿನ ಬಳಿ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಆಶ್ರಮವನ್ನು ಪ್ರಾರಂಭಿಸಿದ್ದ. 2010ರಲ್ಲಿ ನಿತ್ಯಾನಂದನ ಶಿಷ್ಯರೊಬ್ಬರು ಈತನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದರು. ತನಿಖೆಯ ಬಳಿಕ 2019ರಲ್ಲಿ ಗುಜರಾತ್ ಪೊಲೀಸರು ಈತನ ವಿರುದ್ಧ ಅಪಹರಣದ ಆರೋಪ ಮಾಡಿದ್ದರು. ಈತನ ಆಶ್ರಮದ ಬಳಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದರು. ಆ ನಂತರ ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಡಿಸೆಂಬರ್ 2019 ರಲ್ಲಿ, ಅವರು ತಮ್ಮದೇ ಆದ ಕೈಲಾಸ ಎಂಬ ಹೊಸ ದೇಶ ಸ್ಥಾಪನೆ ಮಾಡಿದ್ದಾಗಿ ಹೇಳಿದ್ದ. ಆದರೆ, ಇಲ್ಲಿಯವರೆಗೆ ಯಾರೊಬ್ಬರೂ ಕೂಡ ಆತನ ದೇಶವನ್ನು ಪತ್ತೆ ಮಾಡಲು ಆಗಿಲ್ಲ. ಇಷ್ಟು ದಿನ ಭಾರತದವರನ್ನ ಯಾಮಾರಿಸಿದ್ದ ನಿತ್ಯಾನಂದ ಈಗ ಅಮೆರಿಕನ್ನರನ್ನೂ ವಂಚಿಸಿದ್ದಾನೆ.