ಕೇರಳದಲ್ಲಿ ನಿಫಾ ವೈರಸ್ ಅಬ್ಬರ ಕರ್ನಾಟಕದಲ್ಲಿ ಕಟ್ಟೆಚ್ಚರ – ರಾಜ್ಯದ ಗಡಿಭಾಗಗಳಲ್ಲಿ ಹೈ ಅಲರ್ಟ್
ನಿಫಾ ವೈರಸ್ ಕಾಟದಿಂದ ಜನ ನಿರಾಳರಾಗಿರುವಾಗಲೇ ಮತ್ತೆ ಅದೇ ಮಾರಿ ವಕ್ಕರಿಸಿಕೊಂಡಿದೆ. ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಆತಂಕ ಹೆಚ್ಚಾಗಿದೆ. ಈಗಾಗಲೇ ಕೇರಳ ರಾಜ್ಯದಲ್ಲಿ 6 ಮಂದಿ ನಿಫಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ಇಬ್ಬರು ಸೋಂಕಿತರು ಈಗಾಗಲೇ ಸಾವನ್ನಪ್ಪಿದ್ದಾರೆ. ಕೇರಳದ ಹಲವು ಗ್ರಾಮಗಳನ್ನು ಕಂಟೈನ್ಮೆಂಟ್ ವಲಯ ಅಂತಾ ಘೋಷಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ಕೂಡಾ ಕಟ್ಟೆಚ್ಚರ ವಹಿಸಿದೆ.
ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಆರ್ಭಟ – ಇಬ್ಬರು ಬಲಿ, 6 ಜನರಿಗೆ ಸೋಂಕು
ಕರ್ನಾಟಕ ರಾಜ್ಯದ 4 ಜಿಲ್ಲೆಗಳು ಕೇರಳ ರಾಜ್ಯದ ಗಡಿಯಲ್ಲಿವೆ. ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳು ಕೇರಳ ರಾಜ್ಯದ ಗಡಿಯಲ್ಲಿವೆ. ಹೀಗಾಗಿ, ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಜನ ಸಾಮಾನ್ಯರು ಅನಗತ್ಯವಾಗಿ ಕೇರಳಕ್ಕೆ ಹೋಗಬೇಡಿ ಅಂತಾ ಸೂಚನೆ ನೀಡಿದೆ. ಅಷ್ಟೇ ಅಲ್ಲ, ಕೇರಳದಿಂದ ಬರುವ ಜನರ ತಪಾಸಣೆ ಕೂಡಾ ನಡೀತಿದೆ. ಸೋಂಕು ತಗುಲಿರುವ ಶಂಕೆ ಕಂಡು ಬಂದ ಕೂಡಲೇ, ಅಂಥವರನ್ನು ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ಯಾವುದೇ ಕಾರಣಕ್ಕೂ ನಿಫಾ ಸೋಂಕು ನಮ್ಮ ರಾಜ್ಯಕ್ಕೆ ಹರಡದಂತೆ ನೋಡಿಕೊಳ್ಳಲು ಭಾರೀ ಕಟ್ಟೆಚ್ಚರ ವಹಿಸಿದೆ. ಶಂಕಿತ ಪ್ರಕರಣದ ಕುರಿತು ಜಿಲ್ಲಾ ಕಣ್ಗಾವಲು ಕಚೇರಿಗೆ ಮಾಹಿತಿ ನೀಡಬೇಕು.
ನಿಫಾ ವೈರಸ್ ನಿರ್ವಹಣೆಗಾಗಿ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ 10 ಹಾಸಿಗೆಯ ವಾರ್ಡ್ ಕಾಯ್ದಿರಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ಔಷಧಿಗಳನ್ನು ಒಳಗೊಂಡಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಅಗತ್ಯವಿರುವ ಔಷಧಿಗಳನ್ನು ಶೇಖರಿಸಲು ಹಾಗೂ ನಿಫಾ ರೋಗ ಲಕ್ಷಣಗಳ ಕುರಿತು ಕ್ಷೇತ್ರ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು. ಯಾವುದೇ ಶಂಕಿತ ಪ್ರಕರಣಗಳ ಮಾದರಿಯನ್ನು ಪುಣೆಯ ಎನ್ಐವಿ ಲ್ಯಾಬ್ ಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದು ಸೂಚಿಸಲಾಗಿದೆ. ಕೇರಳ ಹಾಗೂ ಜ್ವರದಿಂದ ಬರುವ ರೋಗಿಗಳ ಬಗ್ಗೆ ನಿಗಾ ಮತ್ತು ಮಾಹಿತಿ ನೀಡಲು ಮಂಗಳೂರಿನಲ್ಲಿರುವ ಎಲ್ಲಾ 8 ಮೆಡಿಕಲ್ ಕಾಲೇಜುಗಳಿಗೆ ಸರ್ಕಾರ ಸೂಚನೆ ನೀಡಿದ್ದುಸ ಐಸೋಲೇಸನ್ ವಾರ್ಡ್‌ಗಳನ್ನು ಮೀಸಲಿಡಲು ಸೂಚಿಸಿದೆ. ವೆನ್ಲಾಕ್ ಆಸ್ಪತ್ರೆಯಲ್ಲೂ ಕೂಡ ಐಸೋಲೇಶನ್ ವಾರ್ಡ್ ತೆರೆಯಲಾಗಿದೆ. ಬಾವಲಿ ಕಚ್ಚಿದ ಹಣ್ಣು, ಹಂದಿಗಳಿಂದ ಸೋಂಕು ತಗುಲುತ್ತದೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಾಗುತ್ತೆ ಎಂದರು.