ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದು! – 7 ಗ್ರಾಮಗಳನ್ನು ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ!
ತಿರುವನಂತಪುರ: ಕೇರಳದಲ್ಲಿ ನಾಲ್ವರಿಗೆ ನಿಫಾ ಸೋಂಕು ದೃಢಪಟ್ಟಿದ್ದು, ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಕೇರಳದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದ್ದು, ಕೋಳಿಕ್ಕೋಡ್ ಜಿಲ್ಲೆಯಲ್ಲಿನ ಏಳು ಗ್ರಾಮ ಪಂಚಾಯತಿಗಳನ್ನು ಕಂಟೈನ್‌ಮೆಂಟ್ ವಲಯಗಳು ಎಂದು ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ʼಅತಂಚೆರಿ, ಮರುತೊಂಕರ, ತಿರುವಳ್ಳೂರ್, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಯಾಪಳ್ಳಿ ಮತ್ತು ಕವಿಲುಂಪರ- ಕಂಟೈನ್‌ಮೆಂಟ್ ವಲಯಗಳೆಂದು 7 ಗ್ರಾಮಗಳನ್ನು ಘೋಷಿಸಲಾಗಿದೆ. ಮುಂದಿನ ಸೂಚನೆವರೆಗೂ ಕಂಟೈನ್ಮೆಂಟ್ ವಲಯಗಳೆಂದು ಈ ಗ್ರಾಮಗಳನ್ನು ಘೋಷಿಸಲಾಗಿದೆ. ಈ ಗ್ರಾಮದ 43 ವಾರ್ಡ್‌ಗಳಲ್ಲಿ ಒಳಗೆ ಹಾಗೂ ಹೊರಗೆ ಓಡಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಒಬ್ಬರಿಗೂ ಒಳ- ಹೊರಗೆ ಪ್ರವೇಶ ನೀಡುವುದಿಲ್ಲ ಎಂದು ಕೋಳಿಕ್ಕೋಡ್ ಜಿಲ್ಲಾಧಿಕಾರಿ ಎ.ಗೀತಾ ತಿಳಿಸಿದ್ದಾರೆ.
ಇದನ್ನೂ ಓದಿ: ಆಧಾರ್ ತಿದ್ದುಪಡಿ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ! – ಮದುವೆಯಾಗಿ 7 ತಿಂಗಳ ಬಳಿಕ ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ದೂರು
ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದಾಗಿದ್ದು, ಕಡಿಮೆ ಸಾಂಕ್ರಾಮಿಕ ಎಂದು ತಿಳಿದುಬಂದಿದೆ. ಅದು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ ಮತ್ತು ಇದು ಕಡಿಮೆ ಸಾಂಕ್ರಾಮಿಕವಾಗಿದ್ದರೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ. ನಿಫಾ ಎಚ್ಚರಿಕೆ ನಡುವೆ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯು (ಎನ್‌ಐವಿ) ಕೇರಳಕ್ಕೆ ಭೇಟಿ ನೀಡಲಿದ್ದು, ಕೋಳಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ವೈರಸ್ ಪರೀಕ್ಷೆಗಳು ಹಾಗೂ ಬಾವಲಿಗಳ ಸಮೀಕ್ಷೆ ನಡೆಸಲು ಸಂಚಾರಿ ಲ್ಯಾಬ್ ಸ್ಥಾಪಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.