ಕೋವಿಡ್‌ಗೆ ಹೋಲಿಸಿದರೆ ನಿಫಾ ವೈರಸ್ ಸಖತ್ ಡೇಂಜರ್ – ಲಸಿಕೆ ಅಭಿವೃದ್ಧಿಪಡಿಸಲು ಐಸಿಎಂಆರ್ ಚಿಂತನೆ

ಕೋವಿಡ್‌ಗೆ ಹೋಲಿಸಿದರೆ ನಿಫಾ ವೈರಸ್ ಸಖತ್ ಡೇಂಜರ್ – ಲಸಿಕೆ ಅಭಿವೃದ್ಧಿಪಡಿಸಲು ಐಸಿಎಂಆರ್ ಚಿಂತನೆ

ನಿಫಾ ವೈರಸ್ ಕೇರಳ ರಾಜ್ಯದಲ್ಲಿ ಆರ್ಭಟಿಸುತ್ತಿದೆ. ಆದರೆ, ಕೋವಿಡ್‌ಗೆ ಹೋಲಿಸಿದರೆ ನಿಫಾ ವೈರಸ್ ಸಖತ್ ಡೇಂಜರ್ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಸಿದೆ. ನಿಫಾ ವೈರಸ್ ಸೋಂಕು ಪ್ರಮಾಣ ಹೆಚ್ಚುತ್ತಿರುವುದು ಮತ್ತು ಕೋವಿಡ್‌ಗೆ ಹೋಲಿಸಿದರೆ ಹೆಚ್ಚಿನ ಮರಣ ಪ್ರಮಾಣ ಹೊಂದಿರುವುದರಿಂದ ಅದರ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ.

ಇದನ್ನೂ ಓದಿ: ಕೇರಳದಲ್ಲಿ ಉಲ್ಬಣಗೊಳ್ಳುತ್ತಿದೆ ಡೆಡ್ಲಿ ನಿಫಾ ವೈರಸ್ – ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ತೆರೆದ  ಚಿಕ್ಕಮಗಳೂರು ಜಿಲ್ಲಾಡಳಿತ

ಕೋವಿಡ್-19 ಸೋಂಕಿತರಿಗೆ ಹೋಲಿಸಿದರೆ ನಿಫಾ ವೈರಸ್ ಸೋಂಕಿತರಲ್ಲಿ ಮರಣ ಪ್ರಮಾಣವು ತುಂಬಾ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಖ್ಯಸ್ಥ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ. ಡಾ ಬಹ್ಲ್ ಅವರ ಪ್ರಕಾರ, ಕೋವಿಡ್‌ನ ಶೇ 2-3 ಮರಣ ಪ್ರಮಾಣಕ್ಕೆ ಹೋಲಿಸಿದರೆ ನಿಫಾ ವೈರಸ್ ಸೋಂಕಿನಿಂದ ಮರಣ ಪ್ರಮಾಣ ಶೇಕಡಾ 40 ರಿಂದ 70 ರಷ್ಟಿದೆ.

ಕೇರಳದ ಕೋಯಿಕ್ಕೋಡ್‌ನಲ್ಲಿ ನಿಫಾ ವೈರಸ್‌ನ ಹೊಸ ಪ್ರಕರಣ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಕ್ಕೆ ತಲುಪಿದೆ. ಕೇರಳದಲ್ಲಿ ಪ್ರಕರಣಗಳ ಹೆಚ್ಚಳದ ಮಧ್ಯೆ, ನಿಫಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಇನ್ನೂ 20 ಡೋಸ್ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ಪೂರೈಸುವಂತೆ ಭಾರತವು ಆಸ್ಟ್ರೇಲಿಯಾಕ್ಕೆ ಮನವಿ ಮಾಡಿದೆ. ನಿಫಾ ವೈರಸ್ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಐಸಿಎಂಆರ್ ತಿಳಿಸಿದೆ. ನಾವು 2018 ರಲ್ಲಿ ಆಸ್ಟ್ರೇಲಿಯಾದಿಂದ ಕೆಲವು ಡೋಸ್ ಮೊನೊಕ್ಲೋನಲ್ ಆಂಟಿಬಾಡಿಗಳನ್ನು ಪಡೆದುಕೊಂಡಿದ್ದೆವು. ಪ್ರಸ್ತುತ, ಕೇವಲ 10 ರೋಗಿಗಳಿಗೆ ಮಾತ್ರ ಸಾಕಾಗುವಷ್ಟು ಲಭ್ಯವಿವೆ ಎಂದು ಡಾ ರಾಜೀವ್ ಬಹ್ಲ್ ತಿಳಿಸಿದ್ದಾರೆ. ವಿದೇಶಗಳಲ್ಲಿ ನಿಫಾ ವೈರಸ್‌ಗೆ ತುತ್ತಾದ 14 ಜನರು ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಯನ್ನು ಪಡೆದ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಡಾ ಬಹ್ಲ್ ಹೇಳಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೋಯಿಕ್ಕೋಡ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳು ಇಂದಿನಿಂದ ಒಂದು ವಾರದವರೆಗೆ ರಜೆ ಘೋಷಿಸಿವೆ.

Sulekha