ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಹಿಂದೇಟು – ದೊಡ್ಡಗೌಡರಿಗೆ ಕಾಡುತ್ತಿರುವ ಭಯವೇನು?

ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಹಿಂದೇಟು – ದೊಡ್ಡಗೌಡರಿಗೆ ಕಾಡುತ್ತಿರುವ ಭಯವೇನು?

ರಾಜಕೀಯ ಅನ್ನೋದು ನಿಂತ ನೀರಲ್ಲ. ಇಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಕರ್ನಾಟಕದ ರಾಜಕಾರಣವೂ ಇದಕ್ಕೆ ಹೊರತಾಗಿಲ್ಲ. ಬಿಜೆಪಿ, ಸಂಘ ಪರಿವಾರವನ್ನು ಟೀಕಿಸುತ್ತಿದ್ದ ಜೆಡಿಎಸ್ ನಾಯಕರು ಈಗ ಕೇಸರಿ ಶಾಲಿಗೆ ಕೊರಳೊಡ್ಡುತ್ತಿರುವುದು ಗೊತ್ತಿರುವ ವಿಚಾರವೇ. ಸಾರ್ವತ್ರಿಕ ಚುನಾವಣೆಗೆ ದೋಸ್ತಿಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಟಿಕೆಟ್ ಹಂಚಿಕೆ ಕಸರತ್ತು ನಡೀತಿದೆ. ಅದ್ರಲ್ಲೂ ಮಂಡ್ಯಕ್ಕಾಗಿ ಜೆಡಿಎಸ್ ನಾಯಕರು ಪಟ್ಟು ಹಿಡಿದು ಕುಳಿತಿದ್ದಾರೆ. ಒಂದ್ಕಡೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಟಿಕೆಟ್ ನನಗೇ ಅಂತಿದ್ದಾರೆ. ಆದ್ರೆ ಟಿಕೆಟ್ ಗುದ್ದಾಟದ ನಡುವೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಪದೇ ಪದೆ ಮುನ್ನಲೆಗೇ ಬರ್ತಾನೇ ಇದೆ. ಕ್ಷೇತ್ರದ ಕಾರ್ಯಕರ್ತರು, ನಾಯಕರು, ಹಾಲಿ, ಮಾಜಿ ಶಾಸಕರೆಲ್ಲಾ ನಿಖಿಲ್ ಪರ ಬ್ಯಾಟ್ ಬೀಸ್ತಿದ್ದಾರೆ. ಜಸ್ಟ್ ನೀವು ಸ್ಪರ್ಧೆ ಮಾಡಿ ಸಾಕು. ಗೆಲ್ಲಿಸಿಕೊಂಡು ಬರೋದು ನಮ್ಮ ಜವಾಬ್ದಾರಿ ಅಂತಾ ಅಭಯ ನೀಡ್ತಿದ್ದಾರೆ. ಆದ್ರೆ ನಿಖಿಲ್ ಮಾತ್ರ ನಾನು ಯೂಟರ್ನ್ ಹೊಡೆಯೋ ಗಿರಾಕಿ ಅಲ್ಲ. ಸ್ಪರ್ಧೆ ಮಾಡಲ್ಲ ಅಂತಾ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಅಷ್ಟಕ್ಕೂ ನಿಖಿಲ್ ಸ್ಪರ್ಧೆಗೆ ನಿರಾಕರಿಸುತ್ತಿರೋದೇಕೆ..? ಎರಡೆರಡು ಸೋಲಿನ ಭಯ ಕಾಡ್ತಿದ್ಯಾ..? ದೊಡ್ಡಗೌಡ್ರಿಗೆ ನಿಖಿಲ್ ಪರ ಒಲವಿದ್ರೂ ಹಿಂದೇಟು ಹಾಕ್ತಿರೋದೇಕೆ..? ರಾಜಕೀಯ ಭವಿಷ್ಯವೇ ಕಮರಿ ಹೋಗುವ ಆತಂಕವಿದ್ಯಾ.. ನಿಖಿಲ್ ನಕಾರದ ಹಿಂದೆ ಏನೆಲ್ಲಾ ಕಾರಣಗಳಿವೆ..? ಈ ಕುರಿತ ಮಾಹಿತಿ ಇಲ್ಲಿದೆ..

ಇದನ್ನೂ ಓದಿ:  ಜನರಿಂದ ದೂರ ಉಳಿದ ಸಂಸದೆ ಸುಮಲತಾ – ಅಭಿಮಾನಿಗಳ ಬಲವೂ ಇಲ್ಲ, ಕ್ಷೇತ್ರದ ಜನ್ರ ಬೆಂಬಲವೂ ಸಿಗ್ತಿಲ್ಲ ಏಕೆ..?

ನಿಖಿಲ್ ಕುಮಾರಸ್ವಾಮಿ.. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಮೊಮ್ಮಗ. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿಯವ್ರ ಏಕೈಕ ಪುತ್ರ. ದೊಡ್ಡಪ್ಪ ಹೆಚ್.ಡಿ ರೇವಣ್ಣ ಹಾಲಿ ಶಾಸಕರಾಗಿದ್ರೆ ಸೋದರ ಪ್ರಜ್ವಲ್ ರೇವಣ್ಣ ಹಾಸನ ಸಂಸದರು. ಹೀಗೆ ಕುಟುಂಬಸ್ಥರೆಲ್ಲಾ ರಾಜಕೀಯದಲ್ಲಿ ಹೆಜ್ಜೆ ಗುರುತು ಮೂಡಿಸ್ತಿದ್ರೆ ನಿಖಿಲ್​ಗೆ ಮಾತ್ರ ಅದೃಷ್ಟ ಕೈಕೊಡ್ತಾನೇ ಇದೆ. ಎರಡೆರಡು ಸೋಲಿನ ಆಘಾತ ರಾಜಕೀಯ ಭವಿಷ್ಯದ ಕನಸಿಗೆ ಕೊಳ್ಳಿ ಇಟ್ಟಿದೆ. ಹೀಗಾಗೇ ಜನಬೆಂಬಲ ಇದ್ರೂ ನಿಖಿಲ್ ಸ್ಪರ್ಧೆಗೆ ಹಿಂದೇಟು ಹಾಕ್ತಿದ್ದಾರೆ.

ನಿಖಿಲ್ ಸ್ಪರ್ಧೆಗೆ ಒತ್ತಡ!   

2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಮಂಡ್ಯ ಜಿಲ್ಲಾ ವ್ಯಾಪ್ತಿಯ ಎಲ್ಲಾ ಏಳು ಅಸೆಂಬ್ಲಿ ಕ್ಷೇತ್ರವನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಆದಾಗ್ಯೂ, 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮುಗ್ಗರಿಸಿತ್ತು. ಅಂಬರೀಶ್ ನಿಧನದ ಅನುಕಂಪವೂ ಅಂದು ಸುಮಲತಾಗೆ ವರ್ಕೌಟ್ ಆಗಿರಬಹುದು. ಆಗಿನ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎನ್ನುವ ಲೆಕ್ಕಾಚಾರದಲ್ಲಿ ಜೆಡಿಎಸ್ ನಾಯಕರು ಇದ್ದಾರೆ. ಅಲ್ಲದೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. 7 ಕ್ಷೇತ್ರಗಳ ಪೈಕಿ ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ರೆ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಆಯ್ಕೆಯಾಗಿದ್ದಾರೆ. ಇನ್ನು ಒಂದು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕರು ಸೆಲೆಕ್ಟ್ ಆಗಿದ್ದಾರೆ. ಹೀಗಿದ್ರೂ ಬಿಜೆಪಿ, ಪ್ರಧಾನಿ ಮೋದಿಯವರ ವರ್ಚಸ್ಸು, ರಾಮ ಮಂದಿರ ಮುಂತಾದ ವಿದ್ಯಮಾನಗಳು ಚುನಾವಣೆಯಲ್ಲಿ ಪ್ರಭಾವ ಬೀರುವ ಸಾಧ್ಯತೆಯಿಲ್ಲ. ಹಾಗಾಗಿ, ಮತ್ತೆ ನಿಖಿಲ್ ಕುಮಾರಸ್ವಾಮಿ ಯಾಕೆ ಸ್ಪರ್ಧಿಸಬಾರದು ಎನ್ನುವ ಆಲೋಚನೆಯಲ್ಲಿ ದಳಪತಿಗಳು ಇದ್ದಾರೆ.

ಲೋಕಸಮರಕ್ಕೆ ಬಿಜೆಪಿ ಜತೆ ಮೈತ್ರಿಯಾದ ಜೆಡಿಎಸ್ ನಾಯಕರು ಹಳೇ ಮೈಸೂರು ಭಾಗದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌ ನಡೆಸಿದ್ದಾರೆ. ಮಂಡ್ಯ ಹಾಗೂ ಹಾಸನ ಪ್ರಮುಖವಾದ ಕ್ಷೇತ್ರಗಳಾಗಿವೆ. ಹೀಗಾಗಿ ಹೆಚ್​.ಡಿ ಕುಮಾರಸ್ವಾಮಿ ತಲೆಯಲ್ಲೂ ಕೂಡ ಮಂಡ್ಯದಿಂದ ತಮ್ಮ ಪುತ್ರನನ್ನೇ ಕಣಕ್ಕಿಳಿಸಬೇಕೆಂಬ ಆಲೋಚನೆ ಇದೆ. ಇದೇ ಕಾರಣಕ್ಕೆ ಭವಿಷ್ಯ ಭದ್ರಮಾಡಿಕೊಡಲು ಒದ್ದಾಡ್ತಿದ್ದಾರೆ. ಅಮಿತ್‌ ಶಾ, ನಡ್ಡಾ ಭೇಟಿ ವೇಳೆಯೂ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‌ ರನ್ನೂ ಜೊತೆಗೆ ಕರೆದೊಯ್ದಿದ್ದರು. ಮೋದಿ ಭೇಟಿ ವೇಳೆಯೂ ನಿಖಿಲ್ ತಂದೆಗೆ ಸಾಥ್ ನೀಡಿದ್ದರು. ಹೀಗೆ ನಿಖಿಲ್ ಸ್ಪರ್ಧೆಗೆ ವೇದಿಕೆ ಸಿದ್ಧಗೊಳಿಸ್ತಿದ್ರೂ ಒಳಗೊಳಗೆ ಭಯವೂ ಕಾಡ್ತಿದೆ.

2 ಸೋಲು.. ನೂರೆಂಟು ನೋವು! 

2019ರ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರೇ ಇದ್ದ ಕಾರಣ ಗೆಲುವು ಕಟ್ಟಿಟ್ಟ ಬುತ್ತಿ ಅನ್ನೋ ನಂಬಿಕೆಯಲ್ಲಿದ್ರು. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಇದ್ದು, ಹೆಚ್.ಡಿ ಕುಮಾರಸ್ವಾಮಿಯವ್ರೇ ಸಿಎಂ ಆಗಿದ್ದರು. ಹೀಗಾಗಿ ಜೆಡಿಎಸ್, ಕಾಂಗ್ರೆಸ್ ವೋಟ್ ಸಿಕ್ಕೇ ಸಿಗುತ್ತೆ. ನಿಖಿಲ್ ಗೆಲ್ತಾರೇ ಅನ್ನೋ ಲೆಕ್ಕಾಚಾರದಲ್ಲೇ ಇದ್ರು. ಆದ್ರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಇಡೀ ಕ್ಷೇತ್ರದ ಚಿತ್ರಣವನ್ನೇ ಬುಡಮೇಲು ಮಾಡಿದ್ದರು. ಅಂಬರೀಶ್ ನಿಧನದ ಬಳಿಕ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾ ಪರ ಜನರ ಅನುಕಂಪವೂ ಇತ್ತು. ಹೀಗಾಗಿ ಸುಮಲತಾ ಎದುರು 2 ಲಕ್ಷ ಮತಗಳ ಅಂತರದಲ್ಲಿ ನಿಖಿಲ್ ಸೋಲಬೇಕಾಯ್ತು. ಬಳಿಕ 2023ರ ವಿಧಾನಸಭಾ ಚುನಾವಣೆಗೆ ತಾಯಿ ಅನಿತಾ ಕುಮಾರಸ್ವಾಮಿಯವ್ರೇ ಪುತ್ರನಿಗಾಗಿ ರಾಮನಗರ ಕ್ಷೇತ್ರತ್ಯಾಗ ಮಾಡಿದ್ದರು. ರಾಮನಗರದಿಂದ ಕಣಕ್ಕಿಳಿದಿದ್ದ ನಿಖಿಲ್ ಇಲ್ಲೂ ಕೂಡ ಸೋಲಬೇಕಾಯ್ತು. ಕಾಂಗ್ರೆಸ್​ನ ಇಕ್ಬಾಲ್ ಹುಸೇನ್ ಗೆದ್ದು ಬೀಗಿದ್ದರು. ಹೀಗೆ ಎರಡೆರಡು ಸೋಲಿನ ಆಘಾತ ನಿಖಿಲ್​ರನ್ನ ಸ್ಪರ್ಧೆಗೆ ಹಿಂದೇಟು ಹಾಕುವಂತೆ ಮಾಡಿದೆ. ಅಲ್ಲದೆ ಕುಟುಂಬಸ್ಥರಿಗೂ ಆತಂಕ ಆವರಿಸಿದೆ.

ಎರಡು ಚುನಾವಣೆಯಲ್ಲಿ ಸೋತಿರೋ ನಿಖಿಲ್​ ಇದೀಗ ಮೂರನೇ ಬಾರಿ ಸ್ಪರ್ಧಿಸಿ ಸೋತರೆ ನಿಖಿಲ್​ಗೆ ರಾಜಕೀಯ ಭವಿಷ್ಯವೇ ಇಲ್ಲದಂತಾಗುತ್ತೆ. ರಾಜಕೀಯ ಕ್ಷೇತ್ರದಲ್ಲಿ ವ್ಯಕ್ತಿತ್ವ ಕಳೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಹೆಚ್​ಡಿಡಿ ಹಾಗೂ ಹೆಚ್​ಡಿಕೆ, ನಿಖಿಲ್ ಸ್ಪರ್ಧೆಗೆ ಹಿಂದೇಟು ಹಾಕ್ತಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಜೆಡಿಎಸ್‌ ಕಾರ್ಯಕರ್ತರಿಂದ ಸಾಕಷ್ಟು ಒತ್ತಡ ಕೇಳಿ ಬಂದಿದೆ. ಹೀಗಾಗಿ ದಳಪತಿಗಳು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿದ್ದಾರೆ. ಈ ಸರ್ವೆಯಲ್ಲಿ ಮಂಡ್ಯ ಜನತೆ ಜೆಡಿಎಸ್‌ ಪರವಾಗಿ ಭಾರೀ ಒಲವು ವ್ಯಕ್ತಪಡಿಸಿದ್ದು, ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಒತ್ತಡ ಕೇಳಿ ಬಂದಿದೆ ಎನ್ನಲಾಗಿದೆ. ಆದ್ರೆ ನಿಖಿಲ್ ಮಾತ್ರ ಸ್ಪರ್ಧೆಗೆ ನಿರಾಸಕ್ತಿ ತೋರಿಸುತ್ತಿರೋದು ಜೆಡಿಎಸ್​ ನಾಯಕರಿಗೆ ನುಂಗಲಾರದ ತುತ್ತಾಗಿದೆ.

Shwetha M