ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ನಿಖಿಲ್ ಕುಮಾರಸ್ವಾಮಿ – ಮಂಡ್ಯದಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು?

ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದ ನಿಖಿಲ್ ಕುಮಾರಸ್ವಾಮಿ – ಮಂಡ್ಯದಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿ ಯಾರು?

ಮಂಡ್ಯ ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗೋದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಹೆಚ್.ಡಿ ಕುಮಾರಸ್ವಾಮಿಯವರು ತಮ್ಮ ಭದ್ರಕೋಟೆಯನ್ನ ಮರಳಿ ತೆಕ್ಕೆಗೆ ಪಡೆಯೋಕೆ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ರೌಂಡ್ಸ್ ಹಾಕ್ತಿದ್ದು ಬಿಜೆಪಿ ಸೇರಿದಂತೆ ಹಲವು ನಾಯಕರನ್ನ ತಮ್ಮ ಕಡೆ ಸೆಳೆದುಕೊಳ್ತಿದ್ದಾರೆ. ಮತ್ತೊಂದೆಡೆ ಮೈತ್ರಿ ಅಭ್ಯರ್ಥಿಯಾಗಿ ಯಾರನ್ನ ಕಣಕ್ಕಿಳಿಸೋದು ಅನ್ನೋ ಚರ್ಚೆಯೂ ಜೋರಾಗಿದೆ. ಅದ್ರಲ್ಲೂ ಮಂಡ್ಯದ ಜೆಡಿಎಸ್ ನಾಯಕರೆಲ್ಲಾ ನಿಖಿಲ್ ಕುಮಾರಸ್ವಾಮಿಯವ್ರತ್ತಲೇ ಬೊಟ್ಟು ಮಾಡ್ತಿದ್ದಾರೆ. ಮತ್ತೊಮ್ಮೆ ನಿಖಿಲ್ ಅಖಾಡಕ್ಕೆ ಇಳೀಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಆದ್ರೆ ನಿಖಿಲ್ ಉದ್ದೇಶವೇ ಬೇರೆ ಇದೆ. ಹಾಗಾದ್ರೆ ನಿಖಿಲ್ ಸ್ಪರ್ಧೆ ಮಾಡಲ್ವಾ..? ಯಾರು ಕಣಕ್ಕೆ ಇಳಿಯುತ್ತಾರೆ..? ಕುಮಾರಸ್ವಾಮಿ ಗೇಮ್ ಏನು..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಸುಮಲತಾ ಮತ್ತು ನಿಖಿಲ್ ಜಟಾಪಟಿಗೆ ಮತ್ತೆ ಸಾಕ್ಷಿಯಾಗುತ್ತಾ ಮಂಡ್ಯ ಅಖಾಡ – ನಿಖಿಲ್ ಮೈತ್ರಿ ಅಭ್ಯರ್ಥಿಯಾಗೋದು ಪಕ್ಕಾನಾ..?

ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಬರಲಿ. ದೊಡ್ಡಗೌಡ್ರ ಮನೆಯ ಒಂದಷ್ಟು ಹೆಸರುಗಳು ಮುನ್ನಲೆಗೆ ಬರುತ್ತವೆ. ಇದೀಗ ನಿಖಿಲ್ ಹೆಸರು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರೇಸ್​ನಲ್ಲಿ ಮುಂಚೂಣಿಯಲ್ಲಿದೆ. ಕ್ಷೇತ್ರದ ಕೆಲ ನಾಯಕರೂ ಕೂಡ ನಿಖಿಲ್ ಪರ ಬ್ಯಾಟ್ ಬೀಸ್ತಿದ್ದಾರೆ. ಆದ್ರೆ ನಿಖಿಲ್ ಮಾತ್ರ ಬೇರೆಯದ್ದೇ ಫ್ಲ್ಯಾನ್​ನಲ್ಲಿದ್ದಾರೆ.  ಅವ್ರ ಮಾತುಗಳು ಜೆಡಿಎಸ್ ನಾಯಕರಿಗೆ ಶಾಕ್ ಕೊಟ್ಟಿವೆ.

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿಯನ್ನ ಕಣಕ್ಕಿಳಿಸೋಕೆ ಜೆಡಿಎಸ್ ನಾಯಕರು ತಯಾರಿ ಮಾಡಿಕೊಳ್ತಿದ್ದಾರೆ. ಆದ್ರೆ ನಿಖಿಲ್ ಮಾತ್ರ ಚುನಾವಣೆಗೆ ಸ್ಪರ್ಧಿಸೋದಿಲ್ಲ ಎನ್ನುವ ಮೂಲಕ ಶಾಕ್ ಕೊಟ್ಟಿದ್ದಾರೆ. ಬುಧವಾರ ತಮ್ಮ ಸ್ಪರ್ಧೆ ಬಗ್ಗೆ ಮಾತನಾಡಿರುವ ನಿಖಿಲ್, ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಅಲ್ಲ. ನನ್ನ ಅಭಿಪ್ರಾಯ ಈಗಾಗಲೇ ಸ್ಪಷ್ಟವಾಗಿ ಸಾಕಷ್ಟು ಬಾರಿ ಹೇಳಿದ್ದೇನೆ. ಹೇಳಿಕೆಯನ್ನು ಬದಲಾಯಿಸುವ ವ್ಯಕ್ತಿ ನಾನಲ್ಲ. ಮಂಡ್ಯದ ಟಿಕೆಟ್ ಆಕಾಂಕ್ಷಿಗಳ ವಿಚಾರವಾಗಿ ಗುರುವಾರ ಮಂಡ್ಯ ಜಿಲ್ಲೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನಮ್ಮ ನಾಯಕರು, ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ. ದೇವೇಗೌಡರು, ಕುಮಾರಸ್ವಾಮಿಯವರು ಹಾಗೂ ಮಂಡ್ಯ ನಾಯಕರು ಕುಳಿತು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ನಮ್ಮ ನಾಯಕರ ಜೊತೆಗೆ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತರ ಭಾವನೆಗಳನ್ನು ಕಲೆ ಹಾಕಿ ಅಂತಿಮವಾಗಿ ಅಭ್ಯರ್ಥಿಗಳ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

ಇದೇ ವೇಳೆ ಹೆಚ್.ಡಿ ಕುಮಾರಸ್ವಾಮಿಯವರ ಸ್ಪರ್ಧೆ ವಿಚಾರವಾಗಿಯೂ ಸ್ಪಷ್ಟನೆ ನೀಡಿದ್ದಾರೆ. ಇವೆಲ್ಲ ಊಹಾಪೋಹಗಳು ಅಷ್ಟೆ. ಇದರ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ. ಸ್ವಲ್ಪ ದಿನ ಎಲ್ಲವೂ ಗೊತ್ತಾಗಲಿದೆ. ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ಮುಖ್ಯ ಅಲ್ಲ. ಮಂಡ್ಯ ಜಿಲ್ಲೆಯ ಸ್ಥಾನವನ್ನು ಜೆಡಿಎಸ್ ಪಡೆದುಕೊಳ್ಳಬೇಕು. ಅದು ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ಎಲ್ಲವೂ ತೀರ್ಮಾನ ಆಗುತ್ತದೆ ಎನ್ನುವ ಮೂಲಕ ಕಹಾನಿಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಇಲ್ಲಿ ನಿಖಿಲ್ ತಾನು ಸ್ಪರ್ಧೆ ಮಾಡಲ್ಲ ಅಂತಿದ್ದಾರೆ. ಜೊತೆಗೆ ಹೆಚ್​ಡಿಕೆ ಸ್ಪರ್ಧೆಯೂ ಊಹಾಪೋಹ ಅಂದಿದ್ದಾರೆ. ಹಾಗಾದ್ರೆ ಮಂಡ್ಯ ಕ್ಷೇತ್ರದಲ್ಲಿ ಯಾರಾಗ್ತಾರೆ ಮೈತ್ರಿ ಅಭ್ಯರ್ಥಿ ಅನ್ನೋ ಚರ್ಚೆಯೂ ಇದೆ.

ಯಾರಿಗೆ ಮಂಡ್ಯ ಟಿಕೆಟ್? 

ಮಂಡ್ಯ ಕ್ಷೇತ್ರ ಹೇಳಿ ಕೇಳಿ ರಾಜ್ಯದಲ್ಲಿ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿನ ರಾಜಕೀಯ ರಾಜ್ಯಮಟ್ಟದಲ್ಲಿ ಹಾಗೂ ಕೆಲವೊಮ್ಮೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಪ್ರಭಾವ ಬೀರುತ್ತದೆ. ಒಕ್ಕಲಿಗ ಮತಗಳೇ ಹೆಚ್ಚಾಗಿರುವ ಕ್ಷೇತ್ರ ಇದಾಗಿದ್ದು, ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಹಿಂದಿನಿಂದ್ಲೂ ಸಾಕಷ್ಟು ಪ್ರಾಬಲ್ಯ ಹೊಂದಿತ್ತು. ಆದ್ರೆ ಕೆಲ ವರ್ಷಗಳಿಂದ ಜೆಡಿಎಸ್ ಪ್ರಭಾವ ಕುಗ್ಗುತ್ತಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸುತ್ತಿದ್ದು, ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದೆ. 7 ಸ್ಥಾನಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಒಂದು ಕ್ಷೇತ್ರದಲ್ಲಷ್ಟೇ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಮೇಲುಕೋಟೆಯಲ್ಲಿ ರೈತಸಂಘದ ದರ್ಶನ್ ಪುಟ್ಟಣ್ಣಯ್ಯ ಆಯ್ಕೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಕೂಡ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯನ್ನೇ ಕಣಕ್ಕಿಳಿಸೋ ತಯಾರಿಯಲ್ಲಿದೆ. ಆದ್ರೆ ಬಿಜೆಪಿ ಮೊದ್ಲಿಂದಲೂ ಮಂಡ್ಯದಲ್ಲಿ ಇದ್ದೂ ಇಲ್ಲದಂತಿದೆ. ಹೀಗಾಗಿ ಕ್ಷೇತ್ರವನ್ನ ಜೆಡಿಎಸ್​ಗೆ ಬಿಟ್ಟುಕೊಡುವ ಎಲ್ಲಾ ಸಾಧ್ಯತೆಯೂ ಇದೆ. ಇವೆಲ್ಲ ಬೆಳವಣಿಗೆಗಳ ನಡುವೆ ಸುಮಲತಾ ಅಂಬರೀಶ್​ರನ್ನ ಮರೆಯೋಕೆ ಆಗಲ್ಲ. 2019ರ ಚುನಾವಣೆಯಲ್ಲಿ ಪಕ್ಷೇತರವಾಗಿ ಕಣಕ್ಕಿಳಿದು ಗೆದ್ದಿದ್ದ ಸುಮಲತಾ ಮತ್ತೆ ಇದೇ ಕ್ಷೇತ್ರದಿಂದಲೇ ಸ್ಪರ್ಧಿಸೋದಾಗಿ ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಗೆ ಪ್ರಬಲ ಸ್ಪರ್ಧಿಯನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸದ್ಯ ಮಂಡ್ಯ ಕ್ಷೇತ್ರದ ಮೇಲೆ ಮೂವರು ಕಣ್ಣಿಟ್ಟಿದ್ದಾರೆ. ಭದ್ರಕೋಟೆ ಮರಳಿ ಪಡೆಯೋಕೆ ಜೆಡಿಎಸ್ ಹವಣಿಸುತ್ತಿದೆ. ಮತ್ತೊಮ್ಮೆ ಜಿಲ್ಲೆಯ ಸಂಸದೆ ಆಗೋಕೆ ಸುಮಲತಾ ತಯಾರಿ ಆರಂಭಿಸಿದ್ದಾರೆ. ಕಾಂಗ್ರೆಸ್ ಕೂಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಹಲವು ಆಂಕಾಕ್ಷಿಗಳ ಹೆಸರು ಕೂಡ ಹರಿದಾಡ್ತಿದೆ. ಈ ನಡುವೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಲ್ಲ ಅಂತಿರೋದು ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಹತ್ತಾರು ಲೆಕ್ಕಾಚಾರಗಳಿಗೆ ಕಾರಣವಾಗಿದೆ.

 

Sulekha