ಚುನಾವಣೆ ತಯಾರಿ ನಡುವೆಯೇ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಘೋಷಣೆ

ಚುನಾವಣೆ ತಯಾರಿ ನಡುವೆಯೇ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾ ಘೋಷಣೆ

ಕರ್ನಾಟಕದಲ್ಲಿ ಸದ್ಯ ವಿಧಾನಸಭೆ ಚುನಾವಣೆಯ ಬಿಸಿ ಏರುತ್ತಿದೆ. ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕೂಡಾ ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಈ ಬ್ಯುಸಿ ಶೆಡ್ಯೂಲ್ ನಡುವೆಯೇ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಮನೋಹರ್ ಎಂಬವರ ನಿರ್ದೇಶನದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯಿಸಲಿದ್ದಾರೆ. ಚುನಾವಣೆಗೂ ಮುನ್ನವೇ ಚಿತ್ರದ ಚಿತ್ರೀಕರಣ ಕೂಡಾ ಆರಂಭವಾಗಲಿದೆ.

ಇದನ್ನೂ ಓದಿ:  ಬಾಕ್ಸಾಫೀಸ್ ನಲ್ಲಿ ‘ಅವತಾರ್ 2’ ಅಬ್ಬರ – 16 ಸಾವಿರ ಕೋಟಿ ಕಲೆಕ್ಷನ್!

ಮನೋಹರ್ ಈ ಹಿಂದೆ ‘ದನ ಕಾಯೋನು’, ‘ಜೇಮ್ಸ್‌’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಪ್ರಿಯಾಮಣಿ ನಟನೆಯ ‘ವೈಟ್‌’ ಎಂಬ ಕಿರುಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಈ ಕಿರುಚಿತ್ರಕ್ಕೆ ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಧ್ವನಿ ನೀಡಿದ್ದರು. ಈಗ ಇವರು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಬಿಗ್‌ ಬಜೆಟ್‌ನ ಸಿನಿಮಾ ಇದಾಗಿದೆ. ಸಿನಿಮಾ ಬಗ್ಗೆ ಹೇಳಿಕೊಂಡಿರುವ ನಿರ್ದೇಶಕ ಮನೋಹರ್, ‘ನಿಖಿಲ್‌ ಕುಮಾರಸ್ವಾಮಿಗೆ ಅನೌನ್ಸ್‌ ಮಾಡಿರುವ ಸಿನಿಮಾದ ಕಥೆ ರಾ ಕಂಟೆಂಟ್‌ ಹೊಂದಿದೆ. ಅವರ ಹಿಂದಿನ ಸಿನಿಮಾಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದೊಂದು ಬೇರೆ ರೀತಿಯ ಕಥೆ. ನಿಖಿಲ್‌ಗೆ ಕಥೆ ಹೇಳಿದಾಗ ಅವರೂ ಖುಷಿಯಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಕನ್ನಡಕ್ಕೂ ಇದೊಂದು ಹೊಸ ರೀತಿಯ ಕಥೆ. ನಿಖಿಲ್‌ ಪಾತ್ರ ಪೋಷಣೆ ಮತ್ತು ಸಿನಿಮಾ ನಡೆಯುವ ಹಿನ್ನೆಲೆ ಎಲ್ಲವೂ ಹೊಸದಾಗಿರುತ್ತದೆ. ಈ ಕಾರಣಗಳಿಂದಾಗಿ ನಿಖಿಲ್‌ ಈ ಸಿನಿಮಾ ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ.

suddiyaana