ರಾಮನಗರದಲ್ಲಿ ಅಮ್ಮನ ತ್ಯಾಗ ವ್ಯರ್ಥವಾಯ್ತು..! – ಜೆಡಿಎಸ್ ಭದ್ರಕೋಟೆಯಲ್ಲೇ ನಿಖಿಲ್ ಕುಮಾರಸ್ವಾಮಿಗೆ ಸೋಲು

ರಾಮನಗರದಲ್ಲಿ ಅಮ್ಮನ ತ್ಯಾಗ ವ್ಯರ್ಥವಾಯ್ತು..! – ಜೆಡಿಎಸ್ ಭದ್ರಕೋಟೆಯಲ್ಲೇ ನಿಖಿಲ್ ಕುಮಾರಸ್ವಾಮಿಗೆ ಸೋಲು

ಜೆಡಿಎಸ್ ಭದ್ರಕೋಟೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ. ರಾಮನಗರದಲ್ಲಿ ಮಗನಿಗಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು. ಆ ತ್ಯಾಗವೂ ಮಗನಿಗಾಗಿ ಫಲಿಸಲಿಲ್ಲ. ತಂದೆ ಹೆಚ್. ಡಿ ಕುಮಾರಸ್ವಾಮಿ ಬಲವನ್ನೂ ಮತದಾರರು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ – ಹೆಚ್‌ ಡಿಕೆ  

ಈ ಹಿಂದೆ ಲೋಕಸಭಾ ಚುನಾವಣೆಯಲ್ಲೂ ನಿಖಿಲ್ ಸ್ಪರ್ಧಿಸಿದ್ದರು. ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿದ್ದರು. ಅಲ್ಲಿಯೂ ನಿಖಲ್ ಸೋತಿದ್ದರು. ರಾಮನಗರದಲ್ಲಿ ಸತತವಾಗಿ ಗೆದ್ದಿದ್ದ ಜೆಡಿಎಸ್ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಈ ಮೂಲಕ ತಾಯಿಯ ಕ್ಷೇತ್ರವನ್ನು ನಿಖಿಲ್ ಕುಮಾರಸ್ವಾಮಿ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. 2018ರಲ್ಲಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲೂ ಗೆದ್ದಿದ್ದರು. ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉಪ ಚುನಾವಣೆಗೆ ಪತ್ನಿ ಅನಿತಾ ಕುಮಾರ್ ಸ್ವಾಮಿಗೆ ಟಿಕೆಟ್ ನೀಡಿದ್ದರು. ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿ, ಈ ಚುನಾವಣೆಯಲ್ಲಿ ಆ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುಕೊಟ್ಟಿದ್ದರು. ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವಂತೆ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 85003 ಮತಗಳನ್ನು ಪಡೆದಿದ್ದರೆ, ನಿಖಿಲ್ ಕುಮಾರಸ್ವಾಮಿ 73910 ಮತಗಳನ್ನು ಪಡೆದಿದ್ದಾರೆ. ಗೆದ್ದ ಅಭ್ಯರ್ಥಿಗಿಂತ 11093 ಕಡಿಮೆ ಮತಗಳನ್ನು ನಿಖಿಲ್ ಪಡೆದುಕೊಂಡಿದ್ದಾರೆ.

suddiyaana