ನಿಖಿಲ್ ಕುಮಾರಸ್ವಾಮಿಯೇ ಮೈತ್ರಿ ಅಭ್ಯರ್ಥಿ – ಮಂಡ್ಯ ಲೋಕಸಭಾ ಅಖಾಡದಲ್ಲಿ ಲೆಕ್ಕಾಚಾರಗಳು ಉಲ್ಟಾ..!

ನಿಖಿಲ್ ಕುಮಾರಸ್ವಾಮಿಯೇ ಮೈತ್ರಿ ಅಭ್ಯರ್ಥಿ – ಮಂಡ್ಯ ಲೋಕಸಭಾ ಅಖಾಡದಲ್ಲಿ ಲೆಕ್ಕಾಚಾರಗಳು ಉಲ್ಟಾ..!

ಇಡೀ ಜಗತ್ತೇ ಎದುರು ನೋಡ್ತಿದ್ದ ಭಾರತದ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಹೀಗೆ ಚುನಾವಣೆ ಹತ್ತಿರವಾಗುತ್ತಿರುವಾಗ್ಲೇ ಮಂಡ್ಯ ಲೋಕಸಭಾ ಅಖಾಡದಲ್ಲಿ ಇಷ್ಟು ದಿನ ಇದ್ದ ಲೆಕ್ಕಾಚಾರಗಳೆಲ್ಲಾ ಉಲ್ಟಾ ಆಗಿದೆ. ಮೈತ್ರಿ ಅಭ್ಯರ್ಥಿ ಯಾರು ಅನ್ನೋ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಜಪ್ಪಯ್ಯ ಅಂದ್ರೂ ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುತ್ತಿದ್ದ ನಿಖಿಲ್ ಕುಮಾರಸ್ವಾಮಿಯೇ ಈಗ ಮೈತ್ರಿ ಅಭ್ಯರ್ಥಿಯಾಗೋದು ಕನ್ಫರ್ಮ್ ಆಗಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರು, ಮುಖಂಡರೆಲ್ಲಾ ನಿಖಿಲ್ ಜಪ ಮಾಡ್ತಿದ್ರೆ ಅತ್ತ ಹೆಚ್​ಡಿ ಕುಮಾರಸ್ವಾಮಿ ಕೂಡ ಪುತ್ರನನ್ನೇ ಕಣಕ್ಕಿಳಿಸೋಕೆ ವೇದಿಕೆ ಸಿದ್ಧ ಮಾಡ್ತಿದ್ದಾರೆ. ಮತ್ತೊಂದೆಡೆ ಸಕ್ಕರೆನಾಡಿನ ಸೊಸೆ ನಾನು ಎನ್ನುತ್ತಿದ್ದ ಸ್ವಾಭಿಮಾನಿ ಸುಮಲತಾ ಅಂಬರೀಶ್ ಕ್ಷೇತ್ರ ತ್ಯಾಗ ಮಾಡಿದಂತಿದೆ. ಜೆಡಿಎಸ್​ ವಿರುದ್ಧ ಕಣಕ್ಕಿಳಿಯೋ ಬದಲು ಹೊಂದಾಣಿಗೆ ರಾಜಕೀಯಕ್ಕೆ ಮುಂದಾಗಿದ್ದಾರೆ. ಇನ್ನು ಕಾಂಗ್ರೆಸ್ ಸ್ಟಾರ್ ಚಂದ್ರುಗೆ ಟಿಕೆಟ್ ಘೋಷಿಸಿ ವಿಧಾನಸಭೆಯಂತೆಯೇ ಲೋಕಸಭೆಯಲ್ಲೂ ಗೆಲ್ಲೋ ಹುಮ್ಮಸ್ಸಿನಲ್ಲಿದೆ. ಆದ್ರೆ ಕುಮಾರಣ್ಣನ ತಂತ್ರಗಾರಿಕೆ ನೋಡಿದ್ರೆ ಈ ಸಲ ಜೆಡಿಎಸ್ ಕಮಾಲ್ ಮಾಡೋ ಥರ ಇದೆ. ನಿಖಿಲ್ ಸ್ಪರ್ಧೆಗೆ ಒಪ್ಪಿದ್ದೇಗೆ..? ಕುಮಾರಣ್ಣನ ಪ್ಲ್ಯಾನ್ ಏನು..? ಸುಮಲತಾ ಸೈಲೆಂಟ್ ಆಗಿದ್ದೇಕೆ..? ನಿಖಿಲ್ ಸ್ಪರ್ಧೆ ಕಾಂಗ್ರೆಸ್​ಗೆ ವರವೋ, ಕಷ್ಟವೋ..? ಈ ಬಗೆಗಿನ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಂಡ್ಯ ಕ್ಷೇತ್ರಕ್ಕಾಗಿ ಹೆಚ್ ಡಿ ಕುಮಾರಸ್ವಾಮಿ ಸುಮಲತಾಗೆ ಶರಣಾದ್ರಾ?- ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಕಾರ್ಯಕರ್ತರ ಬಿಗಿಪಟ್ಟು

ಮಂಡ್ಯದಿಂದ ಇಷ್ಟು ದಿನ ತಾನು ಮತ್ತು ಪುತ್ರ ನಿಖಿಲ್ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಈಗ ಮನಸ್ಸು ಬದಲಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದೆಂದು ನಿಶ್ಚಯವಾಗಿದೆ. ಈ ಬಗ್ಗೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಲು ಶನಿವಾರ ಕುಮಾರಸ್ವಾಮಿ ದೆಹಲಿಗೆ ತೆರಳಿದ್ದಾರೆ. ತಮ್ಮ ಪುತ್ರ ನಿಖಿಲ್ ಋಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಜೊತೆ ದೆಹಲಿಗೆ ತೆರಳಿದ್ದು, ಅಮಿತ್ ಶಾ ಜೊತೆ ಚರ್ಚಿಸಲಿದ್ದಾರೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಖಚಿತವಾಗಿದೆ. ಹೀಗಾಗಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯನ್ನ ನಿಲ್ಲಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಮಂಡ್ಯದಿಂದ ನಿಖಿಲ್ ಸ್ಪರ್ಧೆ ಬಗ್ಗೆ ಪರೋಕ್ಷ ಸುಳಿವು ನೀಡಿದ್ದರು.

ಚುನಾವಣೆಗೆ ನಿಖಿಲ್ ಸ್ಪರ್ಧೆ?

ಮಂಡ್ಯದಲ್ಲಿ ಶುಕ್ರವಾರ ನಡೆದಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಂಡ್ಯದಿಂದ ಹೆಚ್,ಡಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ಕೇಳಿ ಬಂದಿತ್ತು. ಈ ವೇಳೆ ಕುಮಾರಣ್ಣ ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೇ ವೇಳೆ ಕ್ಷೇತ್ರದ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದು ಪುತ್ರ ನಿಖಿಲ್ ನ ಮನವೊಲಿಸುವುದಾಗಿ ಭರವಸೆ ನೀಡಿದ್ದರು. ಮಾರ್ಚ್‌ 21ರಂದು ನನಗೆ ಅಪರೇಷನ್ ಇದೆ. ಮಾರ್ಚ್‌ 25ಕ್ಕೆ ಮಂಡ್ಯಕ್ಕೆ ಬಂದು ನಾನು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುತ್ತೇನೆ. ನಿಮ್ಮ ಆಸೆಗೆ ನಾವು ಭಂಗ ತರಲ್ಲ, ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್‌ ಕುಮಾರಸ್ವಾಮಿಯನ್ನು ಒಪ್ಪಿಸುತ್ತೇನೆ ಎಂದಿದ್ದರು. ಈ ಮೂಲಕ ಮಂಡ್ಯದಲ್ಲಿ ಮತ್ತೊಮ್ಮೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತವಾಗಿದೆ.

ಆರಂಭದಲ್ಲಿ ಮಂಡ್ಯದಲ್ಲಿ ಜೆಡಿಎಸ್‌ನಿಂದ ಮಾಜಿ ಸಚಿವರಾದ ಸಿಎಸ್‌ ಪುಟ್ಟಸ್ವಾಮಿ ಅಥವಾ ಡಿಸಿ ತಮ್ಮಣ್ಣ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಲಾಗಿತ್ತು. ಆದರೆ, ಕಾರ್ಯಕರ್ತರು ಮತ್ತು ಸ್ಥಳೀಯರು ಎಚ್‌ಡಿ ಕುಮಾರಸ್ವಾಮಿ ಅಥವಾ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ನಿಖಿಲ್ ಕೂಡ ಗೊಂದಲದಲ್ಲಿದ್ದಾರೆ. ಯಾಕಂದ್ರೆ ವಿಧಾನಸಭಾ ಚುನಾಚಣೆಯ ಸೋಲಿನ ಆಘಾತಕ್ಕೊಳಗಾಗಿದ್ದ ನಿಖಿಲ್ ಈ ಹಿಂದೆಯೇ ಲೋಕಸಭಾ ಚುಣಾವಣೆಗೆ ಸ್ಪರ್ಧಿಸಲ್ಲ. ನಾನು ಯು ಟರ್ನ್ ಹೊಡೆಯುಬ ಗಿರಾಕಿ ಅಲ್ಲ ಎಂದಿದ್ದರು. ಆದ್ರೀಗ ಕಾರ್ಯಕರ್ತರ ಒತ್ತಾಯದ ಬಳಿಕ ಮನಸ್ಸು ಬದಲಿಸಿದಂತಿದೆ.

2 ಸೋಲು.. 3ನೇ ಸಲ ಏನು?  

ರಾಜಕೀಯದಲ್ಲಿ ನಿಖಿಲ್ ಕುಮಾರಸ್ವಾಮಿ ಈಗಾಗ್ಲೇ ಸಾಲು ಸಾಲು ಆಘಾತಗಳನ್ನ ಕಂಡಿದ್ದಾರೆ. ಹ್ಯಾಟ್ರಿಕ್ ಸ್ಪರ್ಧೆಯಲ್ಲಿ ನಿಖಿಲ್ ಗೆ ಮೊದಲ ಬಾರಿಗೆ ಗೆಲುವು ಸಿಗುತ್ತಾ ಎಂಬ ಪ್ರಶ್ನೆ ಮೂಡಿದೆ. ನಿಖಿಲ್‌ ಕುಮಾರಸ್ವಾಮಿ ಅವರು 2019ರಲ್ಲಿ ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ವಿರುದ್ಧ ಸೋಲು ಅನುಭವಿಸಿದ್ದರು. ಅದಾದ ಬಳಿಕ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ವಿರುದ್ಧ ಸೋಲು ಅನುಭವಿಸಿದ್ದರು. ಹೀಗೆ ಎರಡೆರಡು ಸೋಲಿನ ಆಘಾತಗಳ ನಡುವೆ ಈಗ ಮೂರನೇ ಚುನಾವಣೆಗೆ ತಯಾರಾಗುತ್ತಿದ್ದು, ಈ ಬಾರಿಯಾದರೂ ವಿಜಯಲಕ್ಷ್ಮೀ ಒಲಿಯುತ್ತಾಳಾ ಕಾದು ನೋಡಬೇಕು.

ಅಷ್ಟಕ್ಕೂ 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದರು. ದಳಪತಿಗಳು ಇವರಿಬ್ಬರನ್ನೂ ತಮ್ಮ ಪ್ರಚಾರದಲ್ಲಿ ಮಾತಿನಲ್ಲಿ ಎಳೆದು ತಂದಿದ್ದರಿಂದ, ಇವರಿಬ್ಬರ ಪ್ರತಿಕ್ರಿಯೆಯೂ ಅಷ್ಟೇ ಖಾರವಾಗಿತ್ತು. ಈಗ, ಅದನ್ನು ಮರೆಯುವ ಅನಿವಾರ್ಯತೆಯಲ್ಲಿ ಜೆಡಿಎಸ್ ನಾಯಕರಿದ್ದಾರೆ. ಯಾಕಂದ್ರೆ ತಮ್ಮ ಅಭ್ಯರ್ಥಿ ಗೆಲುವಿಗೆ ಸುಮಲತಾ ಅವರ ಬೆಂಬಲ ಅತ್ಯವಶ್ಯಕ. ಈ ಹಿನ್ನಲೆಯಲ್ಲಿ ಮತ್ತು ತಮ್ಮ ಆರೋಗ್ಯದ ಕಾರಣಕ್ಕಾಗಿ ಹಳೆಯದನ್ನೆಲ್ಲಾ ಮರೆಯಲು ಕುಮಾರಸ್ವಾಮಿ ನಿರ್ಧರಿಸಿದಂತಿದೆ. ಹೀಗಾಗಿ ಅಂಬರೀಶ್ ಅವ್ರನ್ನ ಹಾಡಿ ಹೊಗಳಿದ್ದು ಸುಮಲತಾ ನನ್ನ ಅಕ್ಕ ಇದ್ದಂತೆ ಎಂದಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿ ಗೆಲುವಿಗೆ ಹೆಚ್​ಡಿಕೆ ಎಲ್ಲಾ ಥರನಾದ ತಂತ್ರ ಮಾಡಿದ್ದಾರೆ.

Sulekha