ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ? – ಸೋತ ಕ್ಷೇತ್ರದಲ್ಲಿಯೇ ರಣತಂತ್ರ ರೂಪಿಸುತ್ತಿರುವ ದಳಪತಿಗಳು..!
ಮಂಡ್ಯ ಕುರುಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಪ್ರವೇಶ ಮಾಡೋದು ಬಹುತೇಕ ಗ್ಯಾರಂಟಿ ಎಂಬಂತೆ ಕಾಣ್ತಿದೆ. ಸೋತ ಕ್ಷೇತ್ರದಲ್ಲಿಯೇ ಗೆಲ್ಲುವ ರಣತಂತ್ರ ಈಗಾಗಲೇ ಶುರುವಾಗಿದೆ. ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಆಗಿ ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕು ಅಂತಾ ಮಂಡ್ಯ ಜೆಡಿಎಸ್ ಮುಖಂಡರು ಒತ್ತಾಯಿಸ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನ ಮತ್ತೆ ಸ್ವಾಗತಿಸೋಕೆ ಮಂಡ್ಯದ ಎಲ್ಲಾ ಕ್ಷೇತ್ರದ ಜೆಡಿಎಸ್ ನಾಯಕರು ಈಗಾಗ್ಲೇ ಸಭೆ ಕೂಡ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಪ್ರವಾಸಕ್ಕೆ ತಯಾರಿ ಮಾಡುವಂತೆ ಜೆಡಿಎಸ್ ವರಿಷ್ಠರಿಂದಲೇ ಸೂಚನೆ ಬಂದಿದೆ ಎನ್ನಲಾಗಿದೆ. ಮೊದಲಿಗೆ ಮಾಜಿ ಶಾಸಕ ಡಿ.ಸಿ ತಮ್ಮಣ್ಣ ನೇತೃತ್ವದಲ್ಲಿ ಮದ್ದೂರು ಕ್ಷೇತ್ರದಲ್ಲಿ ಸಭೆ ನಡೆಸಲಾಯ್ತು. ನಿಖಿಲ್ ಸ್ವಾಗತಕ್ಕೆ ಕಾರ್ಯಕರ್ತರು ತಯಾರಿ ಮಾಡ್ಕೊಬೇಕು. ಜನರನ್ನು ಸೇರಿಸಬೇಕು. ಈ ಬಾರಿ ನಿಖಿಲ್ರನ್ನ ಗೆಲ್ಲಿಸುವ ಮೂಲಕ ಮಂಡ್ಯದಲ್ಲಿ ಮತ್ತೆ ಮುಂಚೂಣಿಗೆ ಬರಬೇಕು ಎಂದು ಜೆಡಿಎಸ್ ಮುಖಂಡರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸ್ಥಳೀಯ ನಾಯಕರೇನೊ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯೇ ಸ್ಪರ್ಧಿಸ್ತಾರೆ ಎಂಬಂತೆ ಸಿದ್ಧತೆ ಶುರು ಮಾಡಿದ್ದಾರೆ. ಹಾಗಿದ್ರೆ ನಿಜವಾಗಿಯೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಗ್ಯಾರಂಟಿನಾ? ಅಪ್ಪನಿಗಿಂತ ಮಗನೇ ಸ್ಪರ್ಧೆ ಮಾಡೋದು ಒಳ್ಳೆಯದು ಅನ್ನೋ ನಿರ್ಧಾರಕ್ಕೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಬಂದಿದ್ದಾರಾ? ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮಂಡ್ಯಕ್ಕೆ ಸ್ಟಾರ್ ಚಂದ್ರು ಅಭ್ಯರ್ಥಿ? – ಮಂಡ್ಯ ಕಾಂಗ್ರೆಸ್ ಶಾಸಕರಿಂದ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್
ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಸ್ಟಾರ್ ಚಂದ್ರುವೇ ಅಭ್ಯರ್ಥಿಯಾಗಲಿ ಅಂತಾ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇದರ ಬೆನ್ನಲ್ಲೇ ದಳಪತಿಗಳು ಕೂಡಾ ಅಲರ್ಟ್ ಆಗಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿ ಎಂದು ಜೆಡಿಎಸ್ ಮುಖಂಡರು ಒತ್ತಾಯಿಸ್ತಿದ್ದಾರೆ. ಇದಕ್ಕೆ ಸರಿಯಾಗಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಈ ತಿಂಗಳ ಕೊನೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳು ಕೂಡಾ ನಡೀತಾ ಇದೆ.
ಲೋಕಸಭೆ ಎಲೆಕ್ಷನ್ಗೂ ಮೊದಲು ಜೆಡಿಎಸ್ ಕಾರ್ಯಕರ್ತರಲ್ಲಿ ಹುರುಪು ತುಂಬಿಸಲು ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸಂಚಾರ ಮಾಡಲಿದ್ದಾರೆ. ಹೀಗಾಗಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಮೊದಲ ಹಂತದ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಮದ್ದೂರು ಶ್ರೀಉಗ್ರ ನರಸಿಂಹಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ ಡಿಸಿ ತಮ್ಮಣ್ಣ ತಿಳಿಸಿದರು. ನಂತರ ಆತಗೂರು ಹೋಬಳಿಯ ಕೆಸ್ತೂರು ಗ್ರಾಮದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ಬಳಿಕ ಕೆ.ಎಂ.ದೊಡ್ಡಿ ಸರ್ಕಾರಿ ಕಾಲೇಜಿನಲ್ಲಿ ನಿಖಿಲ್ ಕುಮಾರಸ್ವಾಮಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ತರುವಾಯ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದು. ಪಕ್ಷ ಸಂಘಟನೆ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯ ಗೆಲುವಿನ ಸಂಬಂಧ ಮುಖಂಡರು ಹಾಗೂ ಕಾರ್ಯಕರ್ತರು ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ಮುಖಂಡರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ನಿಖಿಲ್ ಕುಮಾರಸ್ವಾಮಿಯೇ ಅಭ್ಯರ್ಥಿ ಅಂತಾ ಹೇಳಲಾಗ್ತಿದೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಥವಾ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದ ಸ್ಪರ್ಧಿಸುವಂತೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲು ನಿರಾಕರಿಸಿದರೆ ಮಾಜಿ ಶಾಸಕ ಅಥವಾ ಬೇರೆ ಮುಖಂಡರನ್ನು ಕಣಕ್ಕಿಳಿಸುವ ಬಗ್ಗೆಯೂ ಪಕ್ಷವು ಪರಿಗಣಿಸಲಿದೆ ಎನ್ನಲಾಗಿದೆ. ಅದೇನೇ ಆಗಿದ್ದರೂ ಸೋತ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲು ದಳಪತಿಗಳು ಸಿದ್ಧತೆ ನಡೆಸುತ್ತಿದ್ದಾರೆ.