ನಿಫಾ ಸೋಂಕಿತ ರೋಗಿಗಳು ಸಂಪೂರ್ಣ ಚೇತರಿಕೆ – ಕೇರಳದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಹಿಂಪಡೆದ ಸರ್ಕಾರ
ಕೋಯಿಕ್ಕೋಡ್: ಕೇರಳದಲ್ಲಿ 6 ಜನರಲ್ಲಿ ನಿಫಾ ಸೋಂಕು ಪತ್ತೆಯಾಗಿ ಜನರ ಭೀತಿಗೆ ಕಾರಣವಾಗಿತ್ತು. ಸೆಪ್ಟೆಂಬರ್ 16 ರಿಂದ ಇಲ್ಲಿಯವರೆಗೆ ನಿಫಾ ವೈರಸ್‌ನ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಉತ್ತರದ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಿಂಪಡೆಯಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ವೀಣಾ ಜಾರ್ಜ್ ಶುಕ್ರವಾರ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಯಿಕ್ಕೋಡ್‌ನಲ್ಲಿ ನಿಪಾ ವೈರಸ್ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಒಂಬತ್ತು ವರ್ಷದ ಬಾಲಕ ಸೇರಿದಂತೆ ನಾಲ್ವರು ಚೇತರಿಸಿಕೊಂಡಿದ್ದಾರೆ. ಸೋಂಕಿತರ ಪರೀಕ್ಷಾ ವರದಿ ಇದೀಗ ನೆಗೆಟಿವ್ ಬಂದಿದೆ. ಅವರನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎರಡು ಬಾರಿಯೂ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ನಲ್ಲಿ ಆಪ್ ಸರ್ಕಾರದಿಂದ ಕಾಂಗ್ರೆಸ್ ಶಾಸಕನ ಬಂಧನ – ಅನ್ಯಾಯ ಸಹಿಸಲ್ಲ ಎಂದ ಖರ್ಗೆ.. ಮೈತ್ರಿಗೆ ಹೊಡೆತ?
ಜಿಲ್ಲೆಯಲ್ಲಿ ಒಟ್ಟು ಆರು ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಈ ಹಿಂದೆ, ಕೇರಳ ಸರ್ಕಾರವು ಎಲ್ಲಾ ವಲಯಗಳಲ್ಲಿ ವಿಧಿಸಿದ್ದ ಷರತ್ತುಗಳನ್ನು ಹಿಂಪಡೆದಿದೆ ಮತ್ತು ಸೆಪ್ಟೆಂಬರ್ 16 ರಿಂದ ಇಲ್ಲಿಯವರೆಗೆ ನಿಪಾ ವೈರಸ್‌ನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲದ ಕಾರಣ ಉತ್ತರದ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಿಂಪಡೆದಿದೆ. ಆದರೂ ಜಿಲ್ಲೆಯ ಅಧಿಕಾರಿಗಳು ಸೋಂಕಿನ ವಿರುದ್ಧ ಜನರು ಜಾಗರೂಕರಾಗಿರಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಮುಂದುವರಿಸಬೇಕು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 14 ರಿಂದ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲಾಗಿತ್ತು ಮತ್ತು ಸೆಪ್ಟೆಂಬರ್ 12 ರಂದು ರಾಜ್ಯದಲ್ಲಿ ಮೊದಲ ನಿಪಾ ವೈರಸ್ ಸೋಂಕು ಪ್ರಕರಣ ಪತ್ತೆಯಾದ ನಂತರ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿತ್ತು.