ಕೇರಳದಲ್ಲಿ ನಿಫಾ ವೈರಸ್ ಭೀತಿ! – ರಾಜ್ಯದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚನೆ
ಕೇರಳದಲ್ಲಿ ಇಬ್ಬರು ಅಸಹಜವಾಗಿ ಸಾವನ್ನಪ್ಪಿದ್ದು, ನಿಫಾ ಸೋಂಕಿನಿಂದಾಗಿ ಸಾವನ್ನಪ್ಪಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನೆಯ ಬಳಿಕ ಕೇರಳದಲ್ಲಿ ಆರೋಗ್ಯ ಇಲಾಖೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್, ಮೃತಪಟ್ಟ ಇಬ್ಬರಿಗೂ ನಿಫಾ ಲಕ್ಷಣಗಳಿದ್ದವು. ಇದರಲ್ಲಿ ಒಬ್ಬರು ಆಗಸ್ಟ್ 30ರಂದು ಸಾವನ್ನಪ್ಪಿದ್ದಾರೆ. ಅವರು ಸ್ಯಾಂಪಲ್ ಕಳುಹಿಸಿರಲಿಲ್ಲ. ಇನ್ನೊಬ್ಬರು ಸೋಮವಾರ ಮೃತಪಟ್ಟಿದ್ದು, ಅವರ ಸ್ಯಾಂಪಲ್ ಅನ್ನು ಪುಣೆಗೆ ಕಳುಹಿಸಿದ್ದಾರೆ. ಟೆಸ್ಟ್ ರಿಪೋರ್ಟ್ ಬರಬೇಕಿದೆ ಎಂದು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಒಬ್ಬರ ಕುಟುಂಬದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 9 ವರ್ಷದ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. 10 ತಿಂಗಳ ಮಗುವಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 75 ಜನರ ಸಂಪರ್ಕ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಸಿದ್ದಾರೆ.
ಇದನ್ನೂ ಓದಿ: ರಸ್ತೆ ಮೇಲೆ ಹರಿಯಿತು 22 ಲಕ್ಷ ಲೀಟರ್ ರೆಡ್ ವೈನ್ – ದಿಢೀರ್ ‘ವೈನ್ ಪ್ರವಾಹ’ಕ್ಕೆ ಕಂಗೆಟ್ಟ ಜನ
ಕ್ವಾರಂಟೈನ್‌ಗೆ ಸಿದ್ಧತೆಗಳನ್ನು ನಡೆಸಿದ್ದು, ಕೋಯಿಕೋಡ್ ಜಿಲ್ಲೆಯ ಆಸ್ಪತ್ರೆಗಳಲ್ಲಿ ಮಾಸ್ಕ್, ಪಿಪಿಇ ಬಳಸಲು ಆರೋಗ್ಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಅನಿವಾರ್ಯತೆ ಇದ್ದರೆ ಮಾತ್ರ ಆಸ್ಪತ್ರೆಗೆ ಬನ್ನಿ. ಅನಗತ್ಯವಾಗಿ ಆಸ್ಪತ್ರೆಗೆ ಭೇಟಿ ನೀಡುವುದು ಬೇಡ ಎಂದು ಜನರಿಗೆ ಮನವಿ ಮಾಡಿದ್ದಾರೆ.
ನಿಫಾ ವೈರಸ್ ಎಂದರೇನು?
1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಫಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.
ವೈರಸ್ ಹೇಗೆ ಹರಡುತ್ತದೆ?
- ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನೋದ್ರಿಂದ ಹರಡುತ್ತೆ.
- ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತೆ.
- ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.
ನಿಫಾ ವೈರಸ್ ಲಕ್ಷಣಗಳೇನು?
- ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
- ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
- ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
- ಬಳಿಕ ಪ್ರಜ್ಞಾಹೀನರಾಗುತ್ತಾರೆ
- ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
- ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು