ಕೇರಳದಲ್ಲಿ ನಿಫಾ ವೈರಸ್ ಆರ್ಭಟ – ಇಬ್ಬರು ಬಲಿ, 6 ಜನರಿಗೆ ಸೋಂಕು

ಕೇರಳದಲ್ಲಿ ನಿಫಾ ವೈರಸ್ ಆರ್ಭಟ – ಇಬ್ಬರು ಬಲಿ, 6 ಜನರಿಗೆ ಸೋಂಕು

ದೇವರನಾಡು ಕೇರಳದಲ್ಲಿ ಈಗ ನಿಫಾ ವೈರಸ್ ಆರ್ಭಟಿಸುತ್ತಿದೆ. ಕೇರಳ ರಾಜ್ಯದಲ್ಲಿ ಈಗಾಗಲೇ ಹಲವು ಶಾಲೆಗಳನ್ನು ಬಂದ್ ಮಾಡಲಾಗಿದೆ. ಗಡಿ ಭಾಗದಲ್ಲಿ ಹಲವೆಡೆ ಪ್ರವೇಶ ನಿಷೇಧ ಮಾಡಲಾಗಿದೆ. 2018ರ ಬಳಿಕ ಮತ್ತೆ ತಲೆ ಎತ್ತಿರುವ ನಿಫಾ ಮಾರಿ ಈಗಾಗಲೇ ಇಬ್ಬರನ್ನು ಬಲಿ ಪಡೆದಿದೆ. ಈವರೆಗೆ 6 ಪ್ರಕರಣಗಳು ಪತ್ತೆಯಾಗಿವೆ. ವಿಪರ್ಯಾಸವೆಂದರೆ ನಿಫಾ ವೈರಸ್‌ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಜೊತೆಗೆ ಲಸಿಕೆಯೂ ಇಲ್ಲ. ಈ ಕಾರಣಕ್ಕಾಗಿ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಬೇಕು.

ಇದನ್ನೂ ಓದಿ: ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಾಣು ಬಾಂಗ್ಲಾದೇಶದ್ದು! – 7 ಗ್ರಾಮಗಳನ್ನು ಕಂಟೈನ್‌ಮೆಂಟ್ ಝೋನ್‌ ಎಂದು ಘೋಷಣೆ!

ನಿಫಾ ವೈರಸ್ ಸೋಂಕು ಬಾವಲಿ ಹಾಗೂ ಹಂದಿಗಳ ದೈಹಿಕ ದ್ರವದ ಮೂಲಕ ಮನುಷ್ಯರಿಗೆ ಹರಡುತ್ತದೆ. ಕೆಲವು ಪ್ರಕರಣಗಳಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡಿದ ಉದಾಹರಣೆಗಳೂ ಇವೆ. ಜೀವ ವಿಜ್ಞಾನಿಗಳ ಪ್ರಕಾರ ನಿಫಾ ವೈರಸ್ ಬಾವಲಿಗಳ ದೇಹದಲ್ಲಿ ಶತಮಾನಗಳಿಂದಲೂ ಇದ್ದವು. ಆದರೆ, ಇತ್ತೀಚೆಗೆ ಈ ವೈರಸ್‌ಗಳು ರೂಪಾಂತರ ಹೊಂದಿದ ಕಾರಣ ಅವುಗಳು ಸಾಂಕ್ರಾಮಿಕದ ರೂಪ ಪಡೆದಿವೆ. ಸದ್ಯದ ಮಟ್ಟಿಗೆ ನಿಫಾ ವೈರಸ್ ಸೋಂಕಿಗೆ ಯಾವುದೇ ಚಿಕಿತ್ಸೆ ಇಲ್ಲ. ಈ ಸೋಂಕನ್ನು ನಿಗ್ರಹಿಸಲು ರೋಗ ನಿರೋಧಕ ಚುಚ್ಚುಮದ್ದು ಕೂಡಾ ಲಭ್ಯ ಇಲ್ಲ. ಹೀಗಾಗಿ, ನಿಫಾ ವೈರಸ್ ಸೋಂಕಿಗೆ ತುತ್ತಾಗುವವರ ಮರಣ ಪ್ರಮಾಣ ಶೇ. 70ರಷ್ಟಿದೆ. ನಿಫಾ ವೈರಸ್ ಸೋಂಕಿತರಿಗೆ ನೀಡಲು ನಿರ್ದಿಷ್ಟ ಔಷಧ ಇಲ್ಲವಾದರೂ ರೋಗದ ವಿರುದ್ಧ ಹೋರಾಡಲು ಪೂರಕವಾದ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

ನಿಫಾ ವೈರಸ್ ಲಕ್ಷಣಗಳು

ನಿಫಾ ವೈರಸ್ ಸೋಂಕು ತಗುಲಿದಾಗ ಮೊದಲಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ತಲೆ ನೋವು ಹಾಗೂ ವಾಂತಿ ಆಗಬಹುದು. ವಿಶ್ವ ಆರೋಗ್ಯ ಸಂಸ್ಥೆ ನಿಫಾ ವೈರಸ್ ಸೋಂಕಿತರ ರೋಗ ಲಕ್ಷಣಗಳನ್ನು ಪಟ್ಟ ಮಾಡಿ ಪ್ರಕಟಿಸಿದ್ದು, ಕೆಲವು ಸೋಂಕಿತರಿಗೆ ಮಿದುಳಿನ ಉರಿಯೂತವೂ ಆಗಬಹುದು. ಅಂತಿಮವಾಗಿ ಸೋಂಕಿತರ ದೇಹದಲ್ಲಿ ಸೆಳೆತ ಉಂಟಾಗಿ ಕೋಮಾ ಸ್ಥಿತಿಗೆ ಜಾರಿ ಸಾವನ್ನಪ್ಪಬಹುದಾಗಿದೆ.

Sulekha