ಮಿತಿ ಮೀರಿದ ಭಯೋತ್ಪಾದನೆ & ಗೂಂಡಾಗಿರಿ – 8 ರಾಜ್ಯಗಳಲ್ಲಿ 70 ಕಡೆ ಎನ್​ಐಎ ರೇಡ್

ಮಿತಿ ಮೀರಿದ ಭಯೋತ್ಪಾದನೆ & ಗೂಂಡಾಗಿರಿ – 8 ರಾಜ್ಯಗಳಲ್ಲಿ 70 ಕಡೆ ಎನ್​ಐಎ ರೇಡ್

ಭಯೋತ್ಪಾದನೆ ಚಟುವಟಿಕೆ ಮತ್ತು ಗೂಂಡಾಗಿರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಭಾರತದ 8 ರಾಜ್ಯಗಳಲ್ಲಿ ಎನ್​ಐಎ ತಂಡ ದಾಳಿ ನಡೆದಿದೆ. 70ಕ್ಕೂ ಹೆಚ್ಚು ಕಡೆ ರಾಷ್ಟ್ರೀಯ ತನಿಖಾ ದಳ ರೇಡ್ ಮಾಡಿ ಪರಿಶೀಲನೆ ನಡೆಸಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ, ದೆಹಲಿ, ಛಂಡೀಗಢ, ಮಧ್ಯಪ್ರದೇಶದಲ್ಲಿ ಗೂಂಡಾಗಿರಿ, ದರೋಡೆಕೋರರ ಉಪಟಳ ಹೆಚ್ಚಾದ ಬಗ್ಗೆ ದೂರುಗಳು ದಾಖಲಾಗಿದ್ದವು.

ಇದನ್ನೂ ಓದಿ : ಸೆಲ್ಫಿ ಕಿರಿಕ್​.. ಸೋನು ನಿಗಮ್ & ತಂಡದವರ ಮೇಲೆ ಅಟ್ಯಾಕ್ – ಬೆಚ್ಚಿ ಬೀಳಿಸುವ ವಿಡಿಯೋ ವೈರಲ್!

ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಆರೋಪಿಗಳಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆಸಲಾಗಿದೆ. ಕಳೆದ ವರ್ಷದ ನವೆಂಬರ್​ನಲ್ಲಿ ಪಂಜಾಬ್​ನ ರೂಪನಗರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಈ ಗ್ಯಾಂಗ್​ನ ನಾಲ್ವರು ಸದಸ್ಯರನ್ನ ಬಂಧಿಸಲಾಗಿತ್ತು. ಗ್ಯಾಂಗ್​ಸ್ಟರ್​ಗಳ ವಿರುದ್ಧ ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣಗಳನ್ನ ದಾಖಲಿಸಲಾಗಿದೆ.

ಲಾರೆನ್ಸ್‌ ಬಿಷ್ಣೋಯಿ ಜೊತೆಗಿನ ದೀರ್ಘ ಕಾಲದ ಸಹಚರ ಕುಲ್ವಿಂದರ್‌ಗೆ ಸೇರಿದ ಗಾಂಧಿಧಾಮದ ಜಾಗಗಳಲ್ಲಿ ಎನ್‌ಐಎ ತಂಡ ಹುಡುಕಾಟ ನಡೆಸಿದೆ. ಬಿಷ್ಣೋಯಿ ಗ್ಯಾಂಗ್‌ನ ವ್ಯಕ್ತಿಗಳಿಗೆ ಆಶ್ರಯ ನೀಡಿರುವ ಆರೋಪಗಳು ಕುಲ್ವಿಂದರ್‌ ಮೇಲಿವೆ. ಆತ ಅಂತಾರಾಷ್ಟ್ರೀಯ ಡ್ರಗ್‌ ಸಿಂಡಿಕೇಟ್ಸ್‌ನೊಂದಿಗೆ ಸಂಪರ್ಕ ಹೊಂದಿರುವುದಾಗಿ ತಿಳಿದು ಬಂದಿದೆ.

ಪಂಜಾಬ್‌ನಲ್ಲೇ ಸುಮಾರು 30 ಜಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಹರಿಯಾಣದ ಯಮುನಾ ನಗರ ಹಾಗೂ ಆಜಾದ್‌ ನಗರದಲ್ಲಿ ಎನ್‌ಐಎ ಜೊತೆಗೆ ಸ್ಥಳೀಯ ಪೊಲೀಸರೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕರಲ್ಲಿ ಭಯ ಉಂಟು ಮಾಡಲು ಉಗ್ರರು, ಗ್ಯಾಂಗ್‌ಸ್ಟರ್‌ಗಳು ಹಾಗೂ ಡ್ರಗ್‌ ಸ್ಮಗ್ಲರ್‌ಗಳ ಗುಂಪು ಸಂಚು ರೂಪಿಸುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಲಾರೆನ್ಸ್‌ ಬಿಷ್ಣೋಯಿನನ್ನು ಎನ್‌ಐಎ 2022ರ ನವೆಂಬರ್‌ 24ರಂದು ಬಂಧಿಸಿತ್ತು.

ಡ್ರಗ್‌ ಸಾಗಣೆ, ಹಲ್ಲೆ ಪ್ರಕರಣಗಳಿಗೆ ಅಷ್ಟೇ ಗ್ಯಾಂಗ್‌ಸ್ಟರ್‌ಗಳು ಸೀಮಿತವಾಗಿರಲಿಲ್ಲ. ದಿಲ್ಲಿ ಸೇರಿದಂತೆ ದೇಶದ ವಿವಿಧೆಡೆ ದೊಡ್ಡ ಮಟ್ಟದಲ್ಲಿ ಭಯೋತ್ಪಾದನೆ ಸೃಷ್ಟಿಸುವ ಸಂಚನ್ನು ಇವರ ಜಾಲವು ರೂಪಿಸುತ್ತಿತ್ತು. ಯುವಕರನ್ನು ಗ್ಯಾಂಗ್‌ಗಳಿಗೆ ಸೇರಿಸಿಕೊಳ್ಳುವುದು, ದೇಶ ಮತ್ತು ವಿದೇಶಗಳಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು, ಪ್ರಖ್ಯಾತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶ ಹೊಂದಲಾಗಿತ್ತು. ಈ ಬಗ್ಗೆ ಮೊದಲಿಗೆ ದಿಲ್ಲಿ ಪೊಲೀಸ್‌ ಸ್ಪೆಷಲ್‌ ಸೆಲ್‌ನಲ್ಲಿ 2022ರ ಆಗಸ್ಟ್‌ 4ರಂದು ಪ್ರಕರಣ ದಾಖಲಾಗಿತ್ತು. ಅನಂತರ ಎನ್‌ಐಎ ಅದರ ತನಿಖೆ ಕೈಗೊಂಡಿತ್ತು.

ಬಿಷ್ಣೋಯಿ ನೇತೃತ್ವದಲ್ಲಿ ಭಯೋತ್ಪಾದಕರು-ಗ್ಯಾಂಗ್‌ಸ್ಟರ್‌-ಡ್ರಗ್‌ ಸ್ಮಗ್ಲರ್‌ಗಳ ಗುಂಪು ಹಲವು ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇದರೊಂದಿಗೆ ಉದ್ಯಮಿಗಳು, ವೈದ್ಯರು ಹಾಗೂ ಇತರೆ ವೃತ್ತಿಪರರಿಂದ ಹಣ ಸುಲಿಗೆ ಮಾಡಿರುವ ಪ್ರಕರಣಗಳಲ್ಲೂ ಭಾಗಿಯಾಗಿರುವುದಾಗಿ ಎನ್‌ಐಎ ಪತ್ತೆ ಮಾಡಿದೆ. ಡ್ರಗ್‌, ಶಸ್ತ್ರಾಸ್ತ್ರಗಳ ಸ್ಮಗ್ಲಿಂಗ್‌, ಸುಲಿಗೆ, ಹತ್ಯೆ ಹಾಗೂ ಭಯೋತ್ಪಾದನಾ ಚಟುವಟಿಕೆಗಳನ್ನು ಲಾರೆನ್ಸ್‌ ಬಿಷ್ಣೋಯಿ ಜೈಲಿನಲ್ಲಿ ಕುಳಿತೆ ನಿರ್ವಹಿಸುತ್ತಿದ್ದ. ವ್ಯವಸ್ಥಿತ ಸಂಪರ್ಕ ಜಾಲದ ಮುಖೇನ ಎಲ್ಲ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದ ಎಂಬುದು ತಿಳಿದು ಬಂದಿದೆ.

 

 

suddiyaana