ರಾಜ್ಯ ರಾಜಧಾನಿಯಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ ಸಂಚು – 6 ಮಂದಿ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಕೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಜುಲೈನಲ್ಲಿ ನಗರದಲ್ಲಿ ಸರಣಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಿದ್ದ 6 ಜನ ಆರೋಪಿಗಳ ವಿರುದ್ಧ ಈಗ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಹೌದು, ಆರ್ಟಿ ನಗರದ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್, 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಹಾಗೂ ವಾಕಿಟಾಕಿಗಳು ವಶಕ್ಕೆ ಪಡೆದಿದ್ದರು. ನಂತರ ಈ ಪ್ರಕರಣ ಎನ್ಐಎಗೆ ವರ್ಗಾವಣೆಯಾಗಿತ್ತು. ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದರು ಎಂಬ ವಿಚಾರ ಬಯಲಾಗಿತ್ತು. ಈ ಎಲ್ಲಾ ಅಂಶಗಳನ್ನು ಒಳಗೊಂಡು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದ ತಾಪಮಾನ – ಭಾರೀ ಹಿಮಪಾತದಿಂದಾಗಿ ರಸ್ತೆ ಸಂಚಾರ ಬಂದ್, ವಿಮಾನ ಹಾರಾಟ ರದ್ದು
ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್, ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಬೆಂಗಳೂರಿನಲ್ಲಿದ್ದವರಿಗೆ ಲಕ್ಷ ಲಕ್ಷ ರೂ. ಫಂಡಿಂಗ್ ಮಾಡ್ತಿದ್ದ. ಜೊತೆಗೆ ಏನೇನು ಮಾಡಬೇಕು ಅಂತಾ ಟ್ರೈನಿಂಗ್ ಕೊಡ್ತಿದ್ದ. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ ಎಂಬ ಶಾಕಿಂಗ್ ವಿಚಾರ ವಿಚಾರಣೆ ವೇಳೆ ಬಯಲಾಗಿದೆ.
ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಎರಡು ಮೂರು ದಿನ ತಡ ಮಾಡಿದ್ದರೇ ಬೆಂಗಳೂರಿನ ಕೆಲವು ಕಡೆ ಸ್ಫೋಟಗೊಳಿಸಲು ತಯಾರಿ ಮಾಡಿಕೊಂಡಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು.