ನ್ಯೂಜಿಲೆಂಡ್ ನಲ್ಲಿ 7.1 ತೀವ್ರತೆಯ ಭೂಕಂಪ – ಸುನಾಮಿ ಎಚ್ಚರಿಕೆ ನೀಡಿದ್ದೇಕೆ..?
ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳು ಭಾರೀ ಭೂಕಂಪಕ್ಕೆ ಸಿಲುಕಿ ಅಕ್ಷರಶಃ ತತ್ತರಿಸಿ ಹೋಗಿವೆ. ಇದೀಗ ನ್ಯೂಜಿಲೆಂಡ್ನ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಗುರುವಾರ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಗುರುವಾರ ಮುಂಜಾನೆ ದೇಶದ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಭೂಕಂಪ ಸಂತ್ರಸ್ತರಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಸಹಾಯ ಹಸ್ತ – ಅಭಿಮಾನಿಗಳ ಮನಗೆದ್ದ ಫುಟ್ಬಾಲ್ ತಾರೆಯ ಹೃದಯವಂತಿಕೆ
ಭಾರೀ ಭೂಕಂಪ ಉಂಟಾದ ತಕ್ಷಣ ಸುನಾಮಿ ಎಚ್ಚರಿಕೆ (Tsunami Alert) ನೀಡಲಾಗಿದೆ. ಭೂಕಂಪ ಸಂಭವಿಸಿದ 300 ಕಿಮೀ ವ್ಯಾಪ್ತಿಯ ಪ್ರದೇಶದೊಳಗೆ ಸುನಾಮಿಯ ಭೀತಿಯಿದೆ. ಸದ್ಯ ಈ ಪ್ರದೇಶದಲ್ಲಿ ಯಾವುದೇ ಜನವಸತಿ ಇಲ್ಲ. ಭೂಕಂಪದ ಬಳಿಕ ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿಯ ಭೀತಿ ಇಲ್ಲ ಎಂದು ತಿಳಿಸಿದೆ.
ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್ ಒಟ್ಟುಗೂಡುವ ಪ್ರದೇಶದಲ್ಲಿ ಭಾರೀ ಭೂಕಂಪಗಳು ಸಂಭವಿಸುತ್ತದೆ. ಈ ಪ್ರದೇಶ ರಿಂಗ್ ಆಫ್ ಫೈರ್‌ಗೆ ಅತ್ಯಂತ ಸಮೀಪವಿದೆ ಮಾತ್ರವಲ್ಲದೇ ಈ ಪ್ರದೇಶದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ. ವಾರ್ಷಿಕವಾಗಿ ನ್ಯೂಜಿಲೆಂಡ್‌ನಲ್ಲಿ ಸಾವಿರಾರು ಭೂಕಂಪಗಳು ನಡೆಯುತ್ತವೆ.