ಭೀಕರ ಚಂಡಮಾರುತಕ್ಕೆ ನ್ಯೂಜಿಲೆಂಡ್​ನಲ್ಲಿ ಅಲ್ಲೋಲ ಕಲ್ಲೋಲ – ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ..!

ಭೀಕರ ಚಂಡಮಾರುತಕ್ಕೆ ನ್ಯೂಜಿಲೆಂಡ್​ನಲ್ಲಿ ಅಲ್ಲೋಲ ಕಲ್ಲೋಲ – ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ..!

ಗೇಬ್ರಿಯೆಲ್ ಚಂಡಮಾರುತದ ಅಬ್ಬರಕ್ಕೆ ನ್ಯೂಜಿಲೆಂಡ್​ನಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಜನಜೀವನ ತಲ್ಲಣಗೊಂಡಿದ್ದು, ಕತ್ತಲಲ್ಲಿ ದಿನ ದೂಡುವಂತಾಗಿದೆ. ಸೈಕ್ಲೋನ್ ಎಫೆಕ್ಟ್​ನಿಂದಾಗಿ ಒಂದೂವರೆ ಲಕ್ಷಕ್ಕೂ ಹೆಚ್ಚು ಮನೆಗಳು ವಿದ್ಯುತ್ ಸಂಪರ್ಕ ಕಳೆದುಕೊಂಡಿವೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದ್ದು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ : ಒತ್ತುವರಿ ತೆರವು ವೇಳೆ ತಾಯಿ, ಮಗಳು ಸಜೀವದಹನ – ಅಧಿಕಾರಿಗಳೇ ಗುಡಿಸಲಿಗೆ ಬೆಂಕಿ ಇಟ್ಟು ಕೊಂದ್ರಾ..!?

ಧಾರಾಕಾರ ಮಳೆ ಮತ್ತು ಬಿರುಗಾಳಿ ಆರ್ಭಟಕ್ಕೆ ವಿದ್ಯುತ್ ಗ್ರಿಡ್ ವ್ಯವಸ್ಥೆ ಹಾಳಾಗಿದ್ದು, ಲಕ್ಷಾಂತರ ಮನೆಗಳು ಕತ್ತಲಲ್ಲಿ ಮುಳುಗಿವೆ. ಹಲವು ಭಾಗಗಳಿಗೆ ಅಲ್ಲಿನ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ ಮಾಡಿದೆ. ತುರ್ತು ನಿರ್ವಹಣಾ ಸಚಿವ ಕೀರನ್ ಮ್ಯಾಕ್ಅನುಲ್ಟಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ನ್ಯೂಜಿಲೆಂಡ್​ನ ಉತ್ತರ ಭಾಗದ ಪ್ರದೇಶಗಳಿಗೆ ಗೇಬ್ರಿಯೇಲ್ ಚಂಡಮಾರುತದಿಂದ ಅತಿಹೆಚ್ಚು ಹಾನಿಯಾಗಿದೆ. ಅದರಲ್ಲೂ ಆಕ್ಲೆಂಡ್, ನಾರ್ತ್​ಲ್ಯಾಂಡ್, ಕೋರೋಮಂಡೆಲ್, ಗಿಸ್​ಬೋರ್ನ್, ಟೈರಾವಿಟಿ, ಹಾಕ್ಸ್ ಬೇ ಮೊದಲಾದ ಕಡೆ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಶ್ಚಿಮ ಆಕ್ಲೆಂಡ್ ಮತ್ತು ಉತ್ತರ ಭಾಗದಲ್ಲಿ ಪ್ರವಾಹ ಮತ್ತು ಭೂಕುಸಿತದ ಘಟನೆಗಳು ಹೆಚ್ಚಾಗುತ್ತಿವೆ. ಗಿಸ್​ಬೋರ್ನ್, ಕೋರೋಮಂಡೆಲ್, ಹಾಕ್ಸ್ ಬೇ ಪ್ರದೇಶಗಳು ಸಂಪೂರ್ಣ ಸಂಪರ್ಕ ಕಳೆದುಕೊಂಡಿವೆ.  ಗೇಬ್ರಿಯೆಲ್ ಚಂಡಮಾರುತದ ಪರಿಣಾಮ ನ್ಯೂಜಿಲೆಂಡ್​ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಂಡಮಾರುತದಿಂದ ಬಹಳ ಹಾನಿಗೊಂಡಿರುವ ಗಿಸ್ ಬೋರ್ನ್, ಟೈರಾವ್ಹಿಟಿ, ಬೇ ಆಫ್ ಪ್ಲೆಂಟಿ ಎಂಬ ಪ್ರದೇಶಗಳಲ್ಲಿ ವಿದ್ಯುತ್ ಗ್ರಿಡ್ ಕಾರ್ಯನಿರ್ವಹಣೆ ಸ್ಥಗಿತಗೊಂಡಿದೆ.

ನ್ಯೂಜಿಲೆಂಡ್​ನಲ್ಲಿ ಒಟ್ಟಾರೆ ಜನಸಂಖ್ಯೆ ಇರುವುದೇ ಸುಮಾರು 50 ಲಕ್ಷ. ಸದ್ಯ ಚಂಡಮಾರುತ ಅಪ್ಪಳಿಸಿರುವ ಪರಿಣಾಮ ಬಹುತೇಕ ಪ್ರದೇಶಗಳು ಸಂಪೂರ್ಣವಾಗಿ ಕತ್ತಲಲ್ಲಿ ಮುಳುಗಿವೆ. ವಿದ್ಯುತ್ ಗ್ರಿಡ್​ಗಳು ಭಾಗಶಃ ಹಾಳಾಗಿರೋದ್ರಿಂದ ವಿದ್ಯುತ್ ಪೂರೈಕೆ ಮಾಡಲು ಹಲವು ದಿನಗಳು ಅಥವಾ ವಾರಗಳೇ ಉಂಟಾಗಬಹುದು.

ತುರ್ತುಪರಿಸ್ಥಿತಿ ಘೋಷಣೆ ಮಾಡಿರೋದ್ರಿಂದ ಪರಿಹಾರ, ರಕ್ಷಣಾ ಕಾರ್ಯಗಳ ಜವಾಬ್ದಾರಿಯನ್ನು ಸ್ಥಳೀಯ ಆಡಳಿತದ ಬದಲು ಕೇಂದ್ರ ಸರ್ಕಾರವೇ ಹೊತ್ತುಕೊಳ್ಳುತ್ತಿದೆ. ಸರ್ಕಾರದಿಂದ ಕ್ಷಿಪ್ರವಾಗಿ ಹಣಕಾಸು ಸಂಪನ್ಮೂಲಗಳ ವ್ಯವಸ್ಥೆ ಮಾಡಲಾಗುತ್ತಿದೆ. ಹಾಗೇ ರಕ್ಷಣಾ ಪಡೆಗಳನ್ನು ಸಹಾಯಕ್ಕಾಗಿ ಬಳಸಬಹುದು. ಚಂಡಮಾರುತ ಅಪ್ಪಳಿಸಿದ ಪ್ರದೇಶಗಳಲ್ಲಿ ಭಾರೀ ಮಳೆ, ಗಾಳಿಗೆ ಜನರು ತತ್ತರಿಸಿದ್ದಾರೆ. ಜನವರಿ ಕೊನೆಯ ವಾರದಲ್ಲಿ ಆಕ್ಲೆಂಡ್ ನಗರದಲ್ಲಿ 24 ಗಂಟೆ ಅವಧಿಯಲ್ಲಿ 245 ಮಿಮೀಯಷ್ಟು ಮಳೆಯಾಗಿ ಅಲ್ಲಿ ಪ್ರವಾಹ ಸ್ಥಿತಿ ಉದ್ಭವಿಸಿತ್ತು. ಆ ವಿಕೋಪಕ್ಕೆ ನಾಲ್ವರು ಬಲಿಯಾಗಿದ್ದರು. ಕುತೂಹಲದ ವಿಚಾರ ಅಂದ್ರೆ ನ್ಯೂಜಿಲೆಂಡ್ ಇತಿಹಾಸದಲ್ಲಿ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ ಆಗಿರುವುದು ಇದು ಮೂರನೇ ಬಾರಿ.

suddiyaana