ಗೆಳೆಯನ ಬೆನ್ನುಮೂಳೆ ಮುರಿಯಿತು ಎಂದು ಜೀವ ತೆಗೆದೇ ಬಿಟ್ರು! – ಸ್ನೇಹಿತರು ಹೀಗೂ ಇರುತ್ತಾರಾ?

ಏನೇ ಕಷ್ಟ ಬಂದ್ರೂ ಮೊದಲಿಗೆ ನೆನಪಾಗೋದು ಅಂದ್ರೆ ಸ್ನೇಹಿತರು. ಆದ್ರೆ ಇಲ್ಲೊಂದು ಕಡೆ ಬೆನ್ನುಮೂಳೆ ಮುರಿದ ಸ್ನೇಹಿತನ ಪ್ರಾಣ ತೆಗೆದ ಘಟನೆ ನಡೆದಿದೆ. ಈ ಕೃತ್ಯ ಬಯಲಾಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ವ್ಯಕ್ತಿ ಮೃತಪಟ್ಟರೂ ಸಹಾಯಕ್ಕೆ ಬಾರದ ಜನ! – ಶ*ವದ ಪಕ್ಕ ಬಿದ್ದಿದ್ದ ಈರುಳ್ಳಿ ಹೊತ್ತೊಯ್ದ ಸ್ಥಳೀಯರು!
ಈ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ವಿನೋದ್ ಕುಮಾರ್ (26) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಸುದೀಪ್ ಮತ್ತು ಪ್ರಜ್ವಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನಿದು ಘಟನೆ?
ವಿನೋದ್ ಕುಮಾರ್ ಹಾಗೂ ಸುದೀಪ್ ಮತ್ತು ಪ್ರಜ್ವಲ್ ಆರೋಪಿಗಳಾದ ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.
ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಗಳು ವಿನೋದ್ನನ್ನು ಕೆರೆಯಲ್ಲಿ ಮುಳುಗಿಸಿದ ನಂತರ ಆರಾಮವಾಗಿ ಊರಿನಲ್ಲಿ ಓಡಾಡಿದ್ದರು. ಸಂಜೆ ವೇಳೆಗೆ ಮತ್ತೆ ಸ್ಥಳಕ್ಕೆ ಬಂದು ಕೆರೆಯಿಂದ ಮೃತದೇಹವನ್ನು ಹೊರತೆಗೆದು, ತಂತಿಯಿಂದ ಸೈಜುಕಲ್ಲು ಕಟ್ಟಿ ಬಾವಿಗೆ ಎಸೆದಿದ್ದರು.
ಕೊಲೆ ಪ್ರಕರಣ ಬೆಳಕಿಗೆ ಬಂದಿದ್ಹೇಗೆ?
ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಅವರ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಡೆಸಿದ ಸೂಕ್ಷ್ಮವಾಗಿ ತನಿಖೆ ನಡೆಸಿದ್ದು, ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಇದೀಗ ಸುದೀಪ್ ಮತ್ತು ಪ್ರಜ್ವಲ್ನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ನೋಡಿರಿ

