ಹೊಸವರ್ಷಕ್ಕೆ ಸಿಬ್ಬಂದಿಗೆ ಗುಡ್‌ನ್ಯೂಸ್‌ ಕೊಟ್ಟ ಬಿಎಂಟಿಸಿ – 6,960 ಕೇಸ್‌ಗಳು ಖುಲಾಸೆ!

ಹೊಸವರ್ಷಕ್ಕೆ ಸಿಬ್ಬಂದಿಗೆ ಗುಡ್‌ನ್ಯೂಸ್‌ ಕೊಟ್ಟ ಬಿಎಂಟಿಸಿ – 6,960 ಕೇಸ್‌ಗಳು ಖುಲಾಸೆ!

ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲೇ ಬಿಎಂಟಿಸಿ ತನ್ನ ಚಾಲಕ ಹಾಗೂ ನಿರ್ವಾಹಕರಿಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಬಿಎಂಟಿಸಿ ಸಿಬ್ಬಂದಿ ಮೇಲೆ ದಾಖಲಾಗಿದ್ದ ಎಲ್ಲಾ ಕೇಸ್‌ಗಳನ್ನು ಖುಲಾಸೆಗೊಳಿಸಿದೆ.

ಹೌದು, ಹೊಸ ವರ್ಷ ಮತ್ತು 25ನೇ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ತನ್ನ ಎಲ್ಲಾ ಚಾಲಕ ಹಾಗೂ ನಿರ್ವಾಹಕರ ಮೇಲಿದ್ದ ಎಲ್ಲಾ ಕೇಸ್‌ಗಳನ್ನು ಖುಲಾಸೆಗೊಳಿಸಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ ಅವರು ಈ ಆದೇಶ ಹೊರಡಿಸಿದ್ದು, ಇದು ಡಿ.30 ರಿಂದಲೇ ಈ ಆದೇಶ ಜಾರಿಯಾಗಲಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ –  ಹೊಸ ವರ್ಷಾಚರಣೆಗೆ ತಡರಾತ್ರಿ 2 ಗಂಟೆವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ

ಬಿಎಂಟಿಸಿಯಲ್ಲಿ ಬಹಳ ವರ್ಷಗಳಿಂದಲೂ ಡಿಪೋ ಮ್ಯಾನೇಜರ್‌ಗಳ ಕಿರುಕುಳ, ಸಣ್ಣಪುಟ್ಟ ಪ್ರಕರಣಗಳಿಗೂ ಕೇಸ್ ದಾಖಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಬಾರಿ ಸಿಬ್ಬಂದಿ ಮೇಲೆ ದಾಖಲಾದ ಒಟ್ಟು 6,960 ಕೇಸ್‌ಗಳನ್ನು ಖುಲಾಸೆ ಮಾಡುತ್ತಿದೆ. ಬಸ್‌ಗಳ ಆಪರೇಷನ್ ಕಾರ್ಯಾಚರಣೆ, ಮಾನವ ಸಂಪನ್ಮೂಲಗಳ ಸದ್ಬಳಕೆಯಿಂದ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ಬರೋ 26 ಗೈರು ಹಾಜರಿ ಪ್ರಕರಣ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳು ಖುಲಾಸೆಯಾಗುತ್ತಿವೆ. ಇದರಲ್ಲಿ ಸಸ್ಪೆಂಡ್ ಆಗಿ ರಿವೋಕ್ ಆದ ಪ್ರಕರಣಗಳೂ ಸೇರಿವೆ. ಹಾಗೆಯೇ ಡಿಪೋಗಳಲ್ಲಿ ದಾಖಲಾದ ಒಟ್ಟು 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳು ಸೇರಿ ಒಟ್ಟು 6,416 ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ.

ಒಟ್ಟಾರೆ 6,960 ಕೇಸ್‌ಗಳನ್ನು ಖುಲಾಸೆಯಾಗುತ್ತಿವೆ. ಈ ಕೇಸ್‌ಗಳಲ್ಲಿ ಟ್ರಾಫಿಕ್ ಸೆನ್ಸಾರ್ ಉಲ್ಲಂಘನೆ, ಎಲ್ಲೆಂದರಲ್ಲಿ ಬಸ್ ನಿಲುಗಡೆ, ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ, ಕರ್ತವ್ಯದ ವೇಳೆ ಸಮವಸ್ತ್ರ ಧರಿಸದೇ ಇರೋದು ಹೀಗೆ ಹಲವು ಪ್ರಕರಣಗಳಿಗೆ ಲಘು ಹಾಗೂ ಏಕರೂಪದ ಶಿಕ್ಷೆ ಕೊಟ್ಟು ಖುಲಾಸೆಗೊಳಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ತಿಳಿಸಿದ್ದಾರೆ.

Shwetha M