ಹೊಸ ವರ್ಷಾಚರಣೆ – ಮದ್ಯದ ಅಮಲಿನಲ್ಲಿ ತೇಲಾಡುವವರಿಗೆ ಆ್ಯಂಬುಲೆನ್ಸ್!
ಬೆಂಗಳೂರು: ರಾಜ್ಯಾದ್ಯಂತ ಹೊಸ ವರ್ಷಾಚರಣೆಗೆ ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೊಸ ವರ್ಷಾಚರಣೆ ವೇಳೆ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಮದ್ಯದ ಅಮಲಿನಲ್ಲಿ ತೇಲಾಡುವ ಜನರ ಸುರಕ್ಷತೆಗಾಗಿ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ.
ಡಿ. 31 ರ ರಾತ್ರಿ ಹೊಸ ವರ್ಷಾಚರಣೆ ವೇಳೆ ಮದ್ಯದ ಅಮಲಿನ ತೆಲಾಡುವ ಯುವಕ ಯುವತಿಯರಿಗೆ ವಿಶೇಷ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಡಿ. 31ರ ರಾತ್ರಿ ಮಾತ್ರ ಈ ಸೇವೆ ಲಭ್ಯವಿರಲಿದೆ. ಈ ಮೂಲಕ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ಅವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮಹಾ ನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕಕ್ಕೆ ಅನುಮೋದನೆ
ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್ಗಳಿವೆ. ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಮದ್ಯ ಸೇವನೆ ಬಳಿಕ ಮದ್ಯದ ಅಮಲಿನಲ್ಲಿ ಪ್ರಜ್ಞೆ ತಪ್ಪಿ ಬೀಳುವವರಿಗೆ, ಕುಣಿದು ಕುಪ್ಪಳಿಸಿ ಗಾಯ ಮಾಡಿಕೊಳ್ಳುವವರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಆರೋಗ್ಯ ಇಲಾಖೆಗೆ ಆ್ಯಂಬುಲೆನ್ಸ್ ವ್ಯವಸ್ಥೆಗೆ ಪತ್ರ ಬರೆಯಲಾಗಿದೆ. ಪಬ್, ರೆಸ್ಟೋರೆಂಟ್ಗಳಿಗೆ ಸಿಸಿ ಟಿವಿ ಅಳವಡಿಸಲಾಗಿದೆ. ಅಲ್ಲದೇ ಪೊಲೀಸರಿಗೆ ಮಾಸ್ಕ್ ತೆಗೆದು ಮುಖ ತೋರಿಸಬೇಕು. ಪಬ್, ರೆಸ್ಟೋರೆಂಟ್ಗಳಿಗೆ ಪ್ರತಿಯೊಬ್ಬರ ಫೋಟೋ, ವಿವರಗಳನ್ನು ಪೊಲೀಸರು ಪಡೆದುಕೊಳ್ಳಲಿದ್ದಾರೆ. ಪ್ರತಿಯೊಂದು ಪಬ್ಗೂ ಇಬ್ಬರು ಮಹಿಳಾ ಬಾಡಿಗಾರ್ಡ್, ಇಬ್ಬರು ಪುರುಷ ಬಾಡಿಗಾರ್ಡ್ ಇರಬೇಕು ಪಬ್ ಒಳಗೆ ಮತ್ತು ಎಂಟ್ರಿ ಬಳಿ ಇಬ್ಬರು ಬಾಡಿಗಾರ್ಡ್ಸ್ ಇರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.