ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್! – ಭಾರತ-ಪಾಕ್ ಗೆ ಹೊಸ ಸ್ಟೇಡಿಯಂ?

ಚಾಂಪಿಯನ್ಸ್ ಟ್ರೋಫಿ ಆಡಲು ಭಾರತ ಪಾಕಿಸ್ತಾನಕ್ಕೆ ಕಾಲಿಡಬೇಕಾದ ಅಗತ್ಯ ಇಲ್ಲ. ಹೈಬ್ರಿಡ್ ಮಾದರಿಯಲ್ಲೇ ಟೂರ್ನಿ ನಡೆಯಲಿದೆ ಅಂತಾ ಐಸಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಸೋ ಅಲ್ಲಿಗೆ ಎರಡೂ ರಾಷ್ಟ್ರಗಳ ನಡುವಿನ ಕನ್ಫ್ಯೂಷನ್ಸ್ಗೆ ತೆರೆ ಬಿದ್ದಿದೆ. ಬಟ್ ಇಷ್ಟಾದ್ರೂ ಪಾಕ್ನ ಹಾಲಿ ಮತ್ತು ಮಾಜಿ ಕ್ರಿಕೆಟಿಗರಿಗೆ ಸಮಾಧಾನ ಆಗ್ತಿಲ್ಲ. ಉಭಯ ರಾಷ್ಟ್ರಗಳ ಪಂದ್ಯಗಳಿಗೆ ಹೊಸ ಕ್ರೀಡಾಂಗಣವನ್ನೇ ನಿರ್ಮಾಣ ಮಾಡುವಂತೆ ಹೊಸ ತಗಾದೆ ತೆಗೆದಿದ್ದಾರೆ. ಅದೂ ಕೂಡ ಇಂಡೋ-ಪಾಕ್ ಬಾರ್ಡರ್ನಲ್ಲಿ. ಏನಿದು ಹೊಸ ವಿವಾದ? ಚಾಂಪಿಯನ್ಸ್ ಟ್ರೋಫಿ ಹಗ್ಗಾಜಗ್ಗಾಟ ಇನ್ನೂ ಮುಗಿದಿಲ್ವಾ? ಹೊಸ ಕ್ರೀಡಾಂಗಣ ಕಾಂಟ್ರೋ ಶುರುವಾಗಿದ್ದೇಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ UI ಅಬ್ಬರ – ಕರ್ನಾಟಕದಲ್ಲಿ ಮೊದಲ ದಿನದ ಕಲೆಕ್ಷನ್ ಎಷ್ಟು?
ಭಾರತ ಮತ್ತು ಪಾಕಿಸ್ತಾನ ನಡುವೆ ಸಾಕಷ್ಟು ವಿಚಾರಗಳಲ್ಲಿ ಮನಸ್ತಾಪ ಇದೆ. ಹೀಗಾಗೇ 2008ರ ಬಳಿಕ ಭಾರತ ಪಾಕಿಸ್ತಾನಕ್ಕೆ ತೆರಳಿ ಪಂದ್ಯಗಳನ್ನ ಆಡಲ್ಲ. ಬಟ್ ಪಾಕಿಸ್ತಾನ ಮಾತ್ರ ಭಾರತದಲ್ಲಿ ಪಂದ್ಯಗಳನ್ನ ಆಡ್ತಿತ್ತು. ಆದ್ರೀಗ 2025ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯದ ಹಕ್ಕು ಪಾಕಿಸ್ತಾನಕ್ಕೆ ಸಿಕ್ಕ ಮೇಲೆ ಎರಡು ರಾಷ್ಟ್ರಗಳ ನಡುವಿನ ಜಟಾಪಟಿ ನೆಕ್ಸ್ಟ್ ಲೆವೆಲ್ಗೆ ಹೋಗಿದೆ. ಭದ್ರತೆ ವೈಫಲ್ಯದ ಕಾರಣ ನೀಡಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳಿಸಲು ಭಾರತ ಸರ್ಕಾರ ಒಪ್ಪಿಗೆ ನೀಡಿಲ್ಲ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಐಸಿಸಿ ಸೂಚನೆ ನೀಡಿದೆ. ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಾಗುತ್ತದೆ. ಪಾಕಿಸ್ತಾನ ತಂಡ ಕೂಡ 2027ರವರೆಗೆ ಯಾವುದೇ ಟೂರ್ನಿಗಾಗಿ ಭಾರತಕ್ಕೆ ಬರುವುದಿಲ್ಲ. ಪಾಕ್ನ ಪಂದ್ಯಗಳೂ ತಟಸ್ಥ ಸ್ಥಳಗಳಲ್ಲಿಯೇ ನಡೆಯಲಿವೆ. ಬಟ್ ಈಗ ಈ ಜಟಾಪಟಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಸಲ್ಯೂಷನ್ ಹುಡುಕಿದ್ದಾರೆ.
ಭಾರತ-ಪಾಕ್ ಪಂದ್ಯಗಳಿಗಾಗೇ ಪತ್ಯೇಕ ಸ್ಟೇಡಿಯಂ ನಿರ್ಮಾಣ!
ಚಾಂಪಿಯನ್ಸ್ ಟ್ರೋಫಿ ಪಂದ್ಯವಳಿಗಾಗಿಯೇ ಐಸಿಸಿ ಅಧ್ಯಕ್ಷ ಜಯ್ ಶಾ ಅವರ ಸಮ್ಮುಖದಲ್ಲಿ ಎಲ್ಲಾ ಮಂಡಳಿಗಳ ಸದಸ್ಯರ ಸಭೆ ನಡೆದಿತ್ತು. ಸಭೆಯಲ್ಲಿ, ಎಲ್ಲಾ 15 ಮಂಡಳಿಯ ಸದಸ್ಯರು ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿದ್ದು, ಸಭೆಯಲ್ಲಿ ಈ ನಿರ್ಧಾರಕ್ಕೆ ಪಾಕಿಸ್ತಾನವೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಬಟ್ ಈಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಹೊಸ ಪರಿಹಾರವನ್ನ ಹೇಳಿದ್ದು ವಿಡಿಯೋ ಸಾಕಷ್ಟು ವೈರಲ್ ಆಗ್ತಿದೆ. ವಿಡಿಯೋದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳಿಗೆ ಎರಡು ದೇಶಗಳ ಗಡಿಯಲ್ಲಿ ಹೊಸದಾಗಿ ಸ್ಟೇಡಿಯಂ ನಿರ್ಮಾಣ ಮಾಡಬೇಕು ಎಂದು ಸೂಚಿಸಿದ್ದಾರೆ.
ಒಂದು ಗೇಟ್ ಭಾರತದಲ್ಲಿ.. ಮತ್ತೊಂದು ಗೇಟ್ ಪಾಕಿಸ್ತಾನದಲ್ಲಿ!
ಹೊಸ ಸ್ಟೇಡಿಯಂ ನಿರ್ಮಾಣಕ್ಕೆ ಐಡಿಯಾ ಕೊಟ್ಟಿರೋ ಅಹ್ಮದ್ ಇಷ್ಟಕ್ಕೇ ಸುಮ್ಮನಾಗಿಲ್ಲ. ಆ ಸ್ಟೇಡಿಯಂ ಹೇಗಿರಬೇಕು ಅನ್ನೋದನ್ನೂ ಹೇಳಿದ್ದಾರೆ. ಕ್ರಿಕೆಟ್ ಸ್ಟೇಡಿಯಂ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿರಬೇಕು. ಒಂದು ಗೇಟ್ ಭಾರತದಲ್ಲಿ ಮತ್ತು ಇನ್ನೊಂದು ಪಾಕಿಸ್ತಾನದಲ್ಲಿ ತೆರೆಯಬೇಕು. ಟೀಂ ಇಂಡಿಯಾ ಆಟಗಾರರು ಭಾರತದ ಗೇಟ್ ಮೂಲಕ ಕ್ರೀಡಾಂಗಣಕ್ಕೆ ಎಂಟ್ರಿ ಕೊಡ್ಬೇಕು. ಹಾಗೇ ಪಾಕ್ನ ಆಟಗಾರರು ಅವ್ರ ದೇಶದ ಕಡೆಗಿನ ಗೇಟ್ನಿಂದ ಒಳಬರಬೇಕು. ಅಭಿಮಾನಿಗಳಿಗೂ ಕೂಡ ಎರಡೂ ಬದಿಯಲ್ಲಿ ಆಯಾ ರಾಷ್ಟ್ರದ ಫ್ಯಾನ್ಸ್ ಒಳಗೆ ಬರಲು ಅವಕಾಶ ಕೊಡಬೇಕು. ಮೈದಾನದಲ್ಲಿ ಯಾವುದೇ ಗಲಾಟೆ, ಗದ್ಧಲಗಳು ನಡೆಯದಂತೆ ಸ್ಟೇಡಿಯಂ ನಿರ್ಮಾಣವಾಗಬೇಕು. ಪಂದ್ಯ ಮುಗಿದ ಮೇಲೆ ತಮ್ಮ ತಮ್ಮ ರಾಷ್ಟ್ರದಲ್ಲಿರೋ ಗೇಟ್ಗಳ ಮೂಲಕ ಮರಳಬೇಕು ಎಂದಿದ್ದಾರೆ.