ಅಂದು ಬಾಲನಟಿ.. ಇಂದು ಸೀರಿಯಲ್ ನಾಯಕಿ! – ಬ್ರಹ್ಮಗಂಟು ಹಾಕಲು ಬಂದವಳು ಯಾರು?
ಝೀ ಕನ್ನಡದಲ್ಲೀಗ ಹಳೇ ಧಾರಾವಾಹಿಗಳ ಎರಾ ಮುಗಿಯುತ್ತಾ ಬಂದಿದೆ. ಹೊಸ ಸೀರಿಯಲ್ಗಳ ಪರ್ವ ಶುರುವಾಗಿದೆ. ಈಗಾಗಲೇ ಸಾವಿರಾರು ಏಪಿಸೋಡ್ಗಳನ್ನು ಕಂಡಿದ್ದ ಒಂದಷ್ಟು ಸೀರಿಯಲ್ಗಳು ಪ್ರಸಾರದ ಓಟವನ್ನು ಮುಗಿಸಿಕೊಂಡಿವೆ. ಇತ್ತೀಚೆಗಷ್ಟೇ ಪಾರು ಮತ್ತು ಹಿಟ್ಲರ್ ಕಲ್ಯಾಣ ಸೀರಿಯಲ್ ಅಂತ್ಯಕಂಡಿದ್ದವು. ಆ ಸ್ಥಾನಕ್ಕೆ ಹೊಸ ಬಗೆಯ, ಹೊಸ ತಲೆಮಾರಿನ, ಕಲರ್ಫುಲ್ ಕಥೆಗಳನ್ನು ಹಿಡಿದು ಬರುತ್ತಿದೆ ಝೀ ಕನ್ನಡ. ಇದೀಗ ಝೀ ಕನ್ನಡ ಬ್ರಹ್ಮಗಂಟು ಸೀರಿಯಲ್ ಪ್ರೋಮೋ ಬಿಡುಗಡೆ ಮಾಡಿದೆ. ಈ ಪ್ರೋಮೋ ಈಗ ಭಾರಿ ಸದ್ದು ಮಾಡ್ತಾ ಇದೆ. ಹೊಸ ಮುಖ ನೋಡಿ ವೀಕ್ಷಕರು ಖುಷಿ ಪಟ್ಟಿದ್ದಾರೆ. ಅಷ್ಟಕ್ಕೂ ಈ ಸೀರಿಯಲ್ ನಲ್ಲಿ ಆಕ್ಟ್ ಮಾಡ್ತಾ ಇರೋ ನಾಯಕಿ ಯಾರು ಗೊತ್ತಾ?
ಇದನ್ನೂ ಓದಿ: ಮಾಜಿ ಸಿಎಂ ಕುಟುಂಬಗಳ ನಡುವೆ ಫೈಟ್.. – ಅದೃಷ್ಟ ರಾಘವೇಂದ್ರಗೋ.. ಗೀತಾಗೋ?
ಝೀ ಕನ್ನಡದಲ್ಲೀಗ ಒಂದಾದ ಮೇಲೊಂದು ಹೊಸ ಸೀರಿಯಲ್ಗಳ ಆಗಮನವಾಗುತ್ತಿದೆ. ಹೊಸ ರಿಯಾಲಿಟಿ ಶೋ ಮಹಾನಟಿಯೂ ಇನ್ನೇನು ಶುರುವಾಗಲಿದೆ. ಈ ನಡುವೆ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸವನ್ನೂ ಮಾಡುತ್ತಿರುವ ಝೀ ಕನ್ನಡ, ಬ್ರೇಕ್ ಫ್ರೀ ಸಂಚಿಕೆಗಳನ್ನೂ ನೋಡುಗರ ಮುಂದಿಡ್ತಿದೆ. ಕಳೆದ ವಾರವಷ್ಟೇ ಝೀ ಕನ್ನಡ ಶ್ರಾವಣಿ ಸುಬ್ರಮಣ್ಯ ಅನ್ನೋ ಹೊಸ ಸೀರಿಯಲ್ಅನ್ನು ಪರಿಚಯಿಸಿತ್ತು. ಇದೀಗ ನೋಡುಗರ ಮಡಿಲಿಗೆ ಇನ್ನೊಂದು ಕಥೆಯನ್ನು ಹಾಕಲು ಸಿದ್ಧತೆ ಮಾಡಿಕೊಂಡಿದೆ. ಅದೇ ಬ್ರಹ್ಮಗಂಟು ಸೀರಿಯಲ್.. ಶೀಘ್ರದಲ್ಲೇ ಅಕ್ಕ ತಂಗಿಯರ ಕಥೆ ಕಿರುತೆರೆಯ ಪರದೆ ಮೇಲೆ ಮೂಡಿಬರಲಿದೆ. ಇದೀಗ ಹೊಸ ಸೀರಿಯಲ್ ಬ್ರಹ್ಮಗಂಟು ಪ್ರೋಮೋ ಸಖತ್ ಸದ್ದು ಮಾಡ್ತಾ ಇದೆ. ಹೊಸ ಮುಖ ನೋಡಿ ಇನ್ನಷ್ಟು ಖುಷಿ ಪಟ್ಟಿದ್ದಾರೆ. ಈ ಸೀರಿಯಲ್ನಲ್ಲಿ ಕೊನೆಗೂ ಹಳೆ ಮುಖ ಬಿಟ್ಟು ಹೊಸ ನಾಯಕಿಯರನ್ನು ಹಾಕಿದ್ರಲ್ಲಾ ವೀಕ್ಷಕರು ಹೇಳ್ತಾ ಇದ್ದಾರೆ. ಅಷ್ಟೇ ಅಲ್ಲದೇ ಯಾರಪ್ಪಾ ಈ ಹೊಸ ನಾಯಕಿ ಎಂದು ವೀಕ್ಷಕರು ಕೇಳ್ತಿದ್ದಾರೆ. ಅಕ್ಕನಿಗಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟ ತಂಗಿಯ ಪಾತ್ರದಲ್ಲಿ ನಟಿಸ್ತಿರೋ ನಾಯಕಿ ಬೇರೆ ಯಾರು ಅಲ್ಲ.. ದಿಯಾ ಪಾಲಕ್ಕಲ್. ಹೆಸರು ಕೇಳಿದ ತಕ್ಷಣ ಇವರೇನು ಮಲಯಾಳಂ ಇಂಡಷ್ಟ್ರಿಯಿಂದ ಬಂದವರಾ ಅಂತಾ ಪ್ರಶ್ನೆ ಮೂಡೋದು ಸಹಜ. ಆದ್ರೆ ಈಕೆ ಅಚ್ಚ ಕನ್ನಡದ ಕುವರಿ. ದಿಯಾ ಪಾಲಕ್ಕಲ್ ಬೆಂಗಳೂರಿನ ಬೆಡಗಿ. ಈಕೆ ಬೆಂಗಳೂರು ನಮ್ಮಿಸ್ ಎಜುಕೇಶನಲ್ ಸೆಂಟರ್ನಲ್ಲಿ ಹೈಸ್ಕೂಲ್ನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಈಕೆ ನಟನೆ ಮಾತ್ರವಲ್ಲದೇ ಭರತನಾಟ್ಯ ಕಲಾವಿದೆಯು ಹೌದು. ಕೆಲವು ನಾಟಕಗಳಲ್ಲಿ ಕೂಡ ಈಕೆ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡು, ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ.
ಹೌದು ದಿಯಾ ಪಾಲಕ್ಕಲ್ ಈ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿದ್ರು. ಈ ಸೀರಿಯಲ್ನಲ್ಲಿ ಐಶ್ವರ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಬಳಿಕ ತಮಿಳು ಸೀರಿಯಲ್ನತ್ತ ಮುಖಮಾಡಿದ್ರು. ತಮಿಳಿನ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ದಿಯಾ ನಟಿಸಿದ್ರು. ಅಷ್ಟೇ ಅಲ್ಲ, ಬಳಿಕ ಆಕೆ ಸಿನಿಮಾಕ್ಕೂ ಪಾದಾರ್ಪಣೆ ಮಾಡಿದ್ರು. ಕನ್ನಡದಲ್ಲಿ ಬಿಡುಗಡೆಯಾಗಿದ್ದ ಕುಂದ ಕನ್ನಡದ ಅಮ್ಮಚ್ಚಿಯೆಂಬ ನೆನಪು ಸಿನಿಮಾದಲ್ಲಿ ದಿಯಾ ನಟಿಸಿದ್ರು. ದಿಯಾ ಪಾಲಿಗೆ ಅಮ್ಮಚ್ಚಿಯೆಂಬ ನೆನಪು ನಾಲ್ಕನೇ ಚಿತ್ರ. ದಿಯಾ ಸೀತಾ ಎಂಬ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು . ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. ಇವಿಷ್ಟೇ ಅಲ್ಲದೇ ದಿಯಾ, ಜಾನ್ ಜಾನಿ ಜನಾರ್ದನ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಹುಡುಗಿ, ಬಳಿಕ ‘ಜಾನಿ ಜಾನಿ ಎಸ್ ಪಪ್ಪಾ’ ಮತ್ತು ‘ಭರ್ಜರಿ’ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾಳೆ. ಅಲ್ಲದೆ ’50’ ಎನ್ನುವ ಹೆಸರಿನ 30ನಿಮಿಷಗಳ ಕಿರುಚಿತ್ರವೊಂದರಲ್ಲಿ ಮುಖ್ಯ ಪಾತ್ರದಲ್ಲಿ ದಿಯಾ ಕಾಣಿಸಿಕೊಂಡಿದ್ದಾಳೆ.
ದಿಯಾ ಈಗಷ್ಟೇ ಪಿಯುಸಿ ಶಿಕ್ಷಣ ಮುಗಿಸಿದ್ದಾರೆ. ದಿಯಾ ತಾಯಿ ರಮ್ಯಾ ಕೂಡಾ ಕಿರುತೆರೆ ನಟಿಯಾಗಿದ್ದಾರೆ. ಕಿರಿ ವಯಸ್ಸಿನಲ್ಲೇ ಮಗಳೂ ತಾಯಿಯ ಜಾಡು ಹಿಡಿದಿರುವುದು ವಿಶೇಷ. ಇದೀಗ ಮೊದಲ ಬಾರಿಗೆ ದಿಯಾ ಪಾಲಕ್ಕಲ್ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗಮಾಡುವ ಕರುಣಾಮಯಿ ತಂಗಿಯ ಪಾತ್ರದಲ್ಲಿ ದಿಯಾ ನಟಿಸಿದ್ದಾರೆ. ದಿಯಾ ನಟನೆ ಹೇಗಿದೆ? ಸೀರಿಯಲ್ ಕಥೆ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕು.