ಸೆಮೀಸ್ ಫೈಟ್ ಗೆ ICC ಹೊಸ ರೂಲ್ಸ್ – IND Vs ENG ಪಂದ್ಯ ವಿವಾದವಾಗಿದ್ದೇಕೆ?
1 ಪಂದ್ಯಕ್ಕೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆನಾ?

ಟಿ-20 ವಿಶ್ವಕಪ್ ಮಹಾಯುದ್ಧದಲ್ಲಿ ಸೆಮಿಫೈನಲ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಗುರುವಾರ ನಡೆಯಲಿರುವ ಎರಡು ಪಂದ್ಯಗಳ ಮೇಲೆ ಇಡೀ ಕ್ರಿಕೆಟ್ ಜಗತ್ತಿನ ಚಿತ್ತ ನೆಟ್ಟಿದೆ. ಭಾರತದಲ್ಲಿ ಮುಂಜಾನೆ ಸೂರ್ಯೋದಯದ ಹೊತ್ತಿಗೆ ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಅಖಾಡದಲ್ಲಿ ಸೆಣಸಾಟ ನಡೆಸಲಿವೆ. ಹಾಗೇ ಸೂರ್ಯ ಮುಳುಗುತ್ತಿದ್ದಂತೆ ಅಂದ್ರೆ ರಾತ್ರಿ 8 ಗಂಟೆಯಿಂದ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬಟ್ ಈ ಸೆಮೀಸ್ ಕದನಕ್ಕೂ ಮುನ್ನವೇ ಐಸಿಸಿ ಹೊಸ ನಿಯಮಗಳನ್ನ ಜಾರಿಗೊಳಿಸಿದೆ. ಈ ಹೊಸ ರೂಲ್ಸ್ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತೆ ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ENG ಲೆಕ್ಕ ಚುಕ್ತಾ ಮಾಡುತ್ತಾ IND? – ಮಳೆಗೆ ಪಂದ್ಯ ರದ್ದಾದ್ರೆ ಯಾರಿಗೆ ಲಾಭ?
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈ ಬಾರಿಯ ಚುಟುಕು ವಿಶ್ವಕಪ್ನಲ್ಲಿ ಸೋಲೇ ಇಲ್ಲದ ಸರದಾರನಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ಇಂಗ್ಲೆಂಡ್ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಫಿನಾಲೆಗೆ ಗ್ರ್ಯಾಂಡ್ ಆಗಿ ಎಂಟ್ರಿ ನೀಡೋ ಲೆಕ್ಕಾಚಾರದಲ್ಲಿದೆ. ಮತ್ತೊಂದ್ಕಡೆ ದಕ್ಷಿಣಾ ಆಫ್ರಿಕಾ ಮತ್ತು ಅಫ್ಘಾನಿಸ್ತಾದ ನಡುವೆಯೂ ರಣರೋಚಕ ಕಾದಾಟ ನಡೆಯಲಿದೆ. ಆದ್ರೆ ಸೆಮಿಫೈನಲ್‌ಗಾಗಿ ಐಸಿಸಿ ರೂಪಿಸಿರೋ ನಿಯಮಗಳೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಲ್ಲಿಯವರೆಗೆ ಆಡಿದ ಪಂದ್ಯಗಳಲ್ಲಿ ನಿಯಮಗಳು ಸ್ವಲ್ಪ ಭಿನ್ನವಾಗಿತ್ತು. ಇದೀಗ ಸಂಪೂರ್ಣ ಬದಲಾಗಿದೆ. ಅದ್ರಲ್ಲೂ ಹೊಸ ನಿಯಮಗಳು ಭಾರತ ಹಾಗೂ ಇಂಗ್ಲೆಂಡ್ ತಂಡಕ್ಕೆ ಸಕರಾತ್ಮಕವಾಗಿಲ್ಲ ಎಂಬ ಟೀಕೆಗಳು ಶುರುವಾಗಿವೆ.
ಐಸಿಸಿ ರೂಲ್ಸ್ ವಿವಾದ!
ಸೆಮಿಫೈನಲ್ನ ಮೊದಲ ಪಂದ್ಯ ಸೌತ್ ಆಫ್ರಿಕಾ ಮತ್ತು ಅಫ್ಘಾನಿಸ್ತಾನದ ವಿರುದ್ಧ ನಡೆಯಲಿದೆ. ಹಾಗೇ 2ನೇ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡ ಗಯಾನಾದಲ್ಲಿ ಸೆಣಸಾಟ ನಡೆಸಲಿವೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಈ ಪಂದ್ಯ ಆರಂಭ ಆಗಲಿದೆ. ಅರ್ಧ ಗಂಟೆ ಮೊದಲು ಅಂದರೆ 7:30ಕ್ಕೆ ಟಾಸ್ ನಡೆಯಲಿದೆ. ಕುತೂಹಲಕಾರಿ ಸಂಗತಿಯೆಂದರೆ ಎರಡೂ ಸೆಮಿಫೈನಲ್‌ಗಳಿಗೆ ವಿಭಿನ್ನ ನಿಯಮಗಳಿವೆ. ICC ಮೊದಲ ಸೆಮಿಫೈನಲ್‌ಗೆ ಮೀಸಲು ದಿನವನ್ನು ನಿಗದಿಪಡಿಸಿದೆ. ಅಂದರೆ ಪಂದ್ಯದಲ್ಲಿ ಮಳೆ ಬಂದರೆ ಮರುದಿನ ನಡೆಸಲಾಗುತ್ತದೆ. ಆದರೆ ಭಾರತ ಮತ್ತು ಇಂಗ್ಲೆಂಡ್ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಇಟ್ಟಿಲ್ಲ. ಎರಡೂ ಸೆಮಿಫೈನಲ್‌ಗಳಿಗೆ 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಇರಿಸಲಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಸುಮಾರು 4 ಗಂಟೆ ಕಾಲ ಕಾಯಬೇಕಾಗುತ್ತದೆ. ಮೊದಲ ಸೆಮಿಫೈನಲ್‌ಗೆ ಇನ್ನೂ 60 ನಿಮಿಷಗಳ ಕಾಲ ವಿಸ್ತರಿಸುವ ನಿಯಮವನ್ನೂ ನೀಡಿದೆ. ಒಂದು ವೇಳೆ ಮೊದಲ ಸೆಮಿ ಫೈನಲ್‌ಗೆ ಮಳೆ ಅಡ್ಡಿಪಡಿಸಿದರೆ ಮೀಸಲು ದಿನದಂದು ನಡೆಯಲಿದೆ. ಅಂದು ಕೂಡ ಹೆಚ್ಚುವರಿಯಾಗಿ 190 ನಿಮಿಷಗಳನ್ನು ನೀಡಲಾಗಿದೆ. ಎರಡನೇ ಸೆಮಿಫೈನಲ್‌ನಲ್ಲಿ 250 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾದರೆ ಕನಿಷ್ಠ 5 ಓವರ್‌ಗಳ ಪಂದ್ಯವನ್ನು ನಡೆಸಲಾಗುತ್ತದೆ. ಅದೂ ಸಾಧ್ಯವಾಗದಿದ್ದಾಗ ಪಂದ್ಯ ರದ್ದು ಮಾಡಲಾಗುತ್ತದೆ. ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡಿದ್ದರೆ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಪಂದ್ಯ ರದ್ದಾದ್ರೆ ಗುಂಪಿನಲ್ಲಿರುವ ಅಗ್ರ ತಂಡವು ಫೈನಲ್ ಪ್ರವೇಶ ಮಾಡುತ್ತದೆ. ಹೀಗೇನಾದ್ರೂ ಆದ್ರೆ ಟೀಂ ಇಂಡಿಯಾ ಪಂದ್ಯ ಆಡದೇ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ. ಎರಡನೇ ಗುಂಪಿನಿಂದ ದಕ್ಷಿಣ ಆಫ್ರಿಕಾ ತಂಡ ಫೈನಲ್‌ಗೆ ಹೋಗಲಿದೆ. ಒಂದು ವೇಳೆ ಫೈನಲ್ನಲ್ಲೂ ಪಂದ್ಯ ನಡೆಯದಿದ್ದರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಒಟ್ನಲ್ಲಿ 20 ತಂಡಗಳೊಂದಿಗೆ ಆರಂಭವಾದ ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಯಲ್ಲಿ ಬರೋಬ್ಬರಿ 52 ಪಂದ್ಯಗಳ ಬಳಿಕ ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳು ಅಂತಿಮವಾಗಿವೆ. 8 ತಂಡಗಳ ಸೂಪರ್ 8 ಹಂತದಲ್ಲಿ ನಾಲ್ಕು ತಂಡಗಳು ಹೊರಬಿದ್ದಿವೆ. ಮೊದಲ ಗುಂಪಿನಿಂದ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳು ಹೊರಬಿದ್ದರೆ, ಎರಡನೇ ಗುಂಪಿನಿಂದ ವೆಸ್ಟ್ ಇಂಡೀಸ್ ಹಾಗೂ ಯುಎಸ್‌ಎ ತಂಡ ಹೊರ ಬಿದ್ದಿದೆ. ಇದರೊಂದಿಗೆ ನಾಲ್ಕು ತಂಡಗಳ ನಡುವಿನ ಸೆಮಿಫೈನಲ್ ಹಣಾಹಣಿಗೆ ಅಖಾಡ ಸಿದ್ಧವಾಗಿದೆ. ಇದ್ರ ನಡುವೆ ಉಭಯ ತಂಗಳಿಗೂ ಮಳೆ ಭೀತಿ ಕಾಡ್ತಿದೆ. ಬಟ್ ಮಳೆ ಬಂದ್ರೂ ಅದು ಭಾರತಕ್ಕೆ ಪ್ಲಸ್ ಆಗಲಿದೆ. ಸೆಮಿ ಫೈನಲ್ ಪಂದ್ಯ ನಡೆಯದೇ ಫೈನಲ್ ಪ್ರವೇಶ ಮಾಡಲಿದೆ. ಬಟ್ ಈ ನಿಯಮಕ್ಕೆ ಇಂಗ್ಲೆಂಡ್ ಕ್ರಿಕೆಟ್ ಫ್ಯಾನ್ಸ್ ಬೇಸರ ಹೊರ ಹಾಕಿದ್ದಾರೆ. ಮಳೆಯಿಂದ ಪಂದ್ಯ ರದ್ದಾದ್ರೆ ಮೀಸಲು ದಿನ ನಿಗದಿ ಮಾಡಿಲ್ಲ. ಇದ್ರಿಂದ ಇಂಗ್ಲೆಂಡ್ ಗೆ ಅನ್ಯಾಯ ಆಗುತ್ತೆ ಎಂದಿದ್ದಾರೆ. ಅದೆಲ್ಲಾ ಏನೇ ಇದ್ರೂ ಇದೀಗ ಕ್ರಿಕೆಟ್ ಅಭಿಮಾನಿಗಳಂತೂ ಸೆಮೀಸ್ ಮ್ಯಾಚ್ಗಳನ್ನ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ದಾರೆ.