ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ – ಆಯಾ ಭಾಗದ ಆಹಾರ ಪದ್ಧತಿಯಂತೆ ಊಟ ನೀಡಲು ಪ್ಲ್ಯಾನ್

ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ – ಆಯಾ ಭಾಗದ ಆಹಾರ ಪದ್ಧತಿಯಂತೆ ಊಟ ನೀಡಲು ಪ್ಲ್ಯಾನ್

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ಗಳಿಗೆ ಮತ್ತೆ ಮರುಜೀವ ಬಂದಂತಾಗಿದೆ. ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹಾಗೂ ಹೊಸ ಇಂದಿರಾ ಕ್ಯಾಂಟೀನ್‌ ಸ್ಥಾಪಿಸಲು ಸರ್ಕಾರ 100ಕೋಟಿ ರೂಪಾಯಿ ಅನುದಾನ ನೀಡಲು ಮುಂದಾಗಿದೆ. ಈ ಬೆನ್ನಲ್ಲೇ ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಹಾಗೂ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳಿಗೆ ಹೊಸ ಜಾಗ ಮತ್ತು ನಿರ್ದಿಷ್ಟ ಫುಡ್ ಮೆನುವನ್ನು ಪ್ರಸ್ತಾಪಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟೀನ್‌ ಸ್ಥಾಪನೆ?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಸರ್ಕಾರದ ನಿರ್ಧಾರದಂತೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನುಗಾಗಿ ಹೊಸ ಟೆಂಡರ್‌ಗಳನ್ನು ನೀಡಲಾಗುವುದು. ಪ್ರಸ್ತುತ, ಬಿಬಿಎಂಪಿ ಹೊರತುಪಡಿಸಿ ರಾಜ್ಯದಲ್ಲಿ 197 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ, 188 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು  ಎಂದು ಮಾಹಿತಿ ನೀಡಿದ್ದಾರೆ.

ಬಜ್ಪೆ, ಬೆಳ್ತಂಗಡಿ, ಕಿನ್ನಿಗೋಳಿ, ಮೂಡುಬಿದಿರೆ, ಕಡಬ, ಮುಲ್ಕಿ, ಕೋಟೆಕಾರ್, ವಿಟ್ಲ, ಮತ್ತು ಸೋಮೇಶ್ವರದಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುವುದು. ಪ್ರತಿಯೊಂದೂ ವಿವಿಧ ನಗರ ಸ್ಥಳೀಯ ಸಂಸ್ಥೆ ಮಿತಿಗಳ ಅಡಿಯಲ್ಲಿ ಬರುತ್ತದೆ. ಜನರಿಗೆ ಹೆಚ್ಚು ಅನುವಾಗುವ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು. ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಮತ್ತು ಸರ್ಕಾರಿ ಆಸ್ಪತ್ರೆಗಳಂತಹ ಪ್ರಮುಖ ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್​ಗಳನ್ನು ತೆರಯಲಾಗುವುದು. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಮಾನಿಟರಿಂಗ್ ವ್ಯವಸ್ಥೆಗಳನ್ನು ನವೀಕರಿಸಲಾಗುವುದು ಮತ್ತು ಆನ್‌ಲೈನ್ ಬಿಲ್ಲಿಂಗ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಹಿಂದೆ ರಾಜ್ಯದಲ್ಲಿ ಒಂದೇ ರೀತಿಯ ಆಹಾರದ ಮೆನು ಇತ್ತು. ಆದರೆ ಈಗ ಆಯಾಯ ಜಿಲ್ಲೆಗಳಿಗೆ ಸೂಕ್ತ ಎನಿಸುವ ಸ್ಥಳೀಯ ಆಹಾರ ಮೆನುವಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

suddiyaana