8.69 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟ – ರಾಮ-ಲಕ್ಷ್ಮಣ ಜೋಡು ಕರೆ ಕಂಬಳದಲ್ಲಿ ಹೊಸ ದಾಖಲೆ

8.69 ಸೆಕೆಂಡ್‌ಗಳಲ್ಲಿ 100 ಮೀಟರ್ ಓಟ – ರಾಮ-ಲಕ್ಷ್ಮಣ ಜೋಡು ಕರೆ ಕಂಬಳದಲ್ಲಿ ಹೊಸ ದಾಖಲೆ

ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.  ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡು ಕರೆ ಮಂಗಳೂರು ಕಂಬಳದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದ್ದು, ಶ್ರೀನಿವಾಸ ಗೌಡರ ದಾಖಲೆಯನ್ನು ಸ್ವರೂಪ್ ಮುರಿದಿದ್ದಾರೆ.  ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕಂಬಳ ಕರೆಯನ್ನು 10.87 ಸೆಕೆಂಡ್‌ನಲ್ಲೇ ತಲುಪಿ ನೂತನ ದಾಖಲೆ ನಿರ್ಮಿಸಿದವು. ಈ ದಾಖಲೆಯಯನ್ನು 100 ಮೀಟರ್‌ಗೆ ಪರಿಗಣಿಸಿದಾಗ 8.69 ಸೆಕೆಂಡ್‌ಗಳ ದಾಖಲೆ ಆಗುತ್ತದೆ. ‘ಗಾಂಧಿ ಮೈದಾನ ಸಂತು’ ಹಾಗೂ ‘ಸುರತ್ಕಲ್ ಪಾಂಚ’ ಕೋಣಗಳು ದಾಖಲೆ ನಿರ್ಮಿಸಿವೆ. ಈ ಕೋಣಗಳನ್ನು ಓಡಿಸಿದ ಮಾಸ್ತಿಕಟ್ಟೆ ಸ್ವರೂಪ್ ವಿಶೇಷ ಹಿರಿಮೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ವಾಹನ ಸವಾರರಿಗೆ ಬಿಗ್ ಶಾಕ್ – ಈ ರಸ್ತೆಗಳು ಕಂಪ್ಲೀಟ್ ಕ್ಲೋಸ್, ಈ ಸ್ಥಳದಲ್ಲಿ ನೋ ಪಾರ್ಕಿಂಗ್

ಕಕ್ಕೆಪದವಿನಲ್ಲಿ ವರ್ಷಗಳ ಹಿಂದೆ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 8.78 ಸೆಕೆಂಡ್‌ನಲ್ಲಿ 100 ಮೀ. ದೂರ ದಾಟಿ ದಾಖಲೆ ಮಾಡಿದ್ದರು. ಮಂಗಳೂರು ಕಂಬಳದ ಫೈನಲ್‌ನಲ್ಲಿ 100 ಮೀ. ದೂರವನ್ನು 8.69 ಸೆಕೆಂಡ್‌ನಲ್ಲಿ ದಾಟುವ ಮೂಲಕ ಈ ದಾಖಲೆಯನ್ನು ಮಾಸ್ತಿಕಟ್ಟೆ ಸ್ವರೂಪ್ ತನ್ನದಾಗಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ವರೂಪ್ ಅವರು, ”ಕಳೆದ ಮೂರು ವರ್ಷಗಳಿಂದ ಕಂಬಳ ಕೋಣ ಓಡಿಸುತ್ತಿದ್ದೇನೆ. ಈ ಹಿಂದೆ ಜ್ಯೂನಿಯರ್ ವಿಭಾಗದಲ್ಲಿ ಓಡಿಸುತ್ತಿದ್ದೆ. ಈ ವರ್ಷ ಮೊದಲ ಬಾರಿಗೆ ಸೀನಿಯರ್ ವಿಭಾಗದಲ್ಲಿ ಓಡಿಸಿದ್ದೇನೆ. ಸೀನಿಯರ್ ವಿಭಾಗದಲ್ಲಿ 3 ಕಂಬಳಗಳಲ್ಲಿ ಭಾಗವಹಿಸಿದ್ದೇನೆ. ಇದೀಗ ಈ ದಾಖಲೆ ಸಾಧ್ಯವಾಗಿದೆ. ಇದು ಅನಿರೀಕ್ಷಿತ ಸಾಧನೆ” ಎಂದು ಸಂತಸ ವ್ಯಕ್ತಪಡಿಸಿದರು.

ರೆಕಾರ್ಡ್ ಮಾಡಿದ ಕೋಣಗಳ ಮಾಲೀಕ ಸಂದೀಪ್ ಶೆಟ್ಟಿ ಮಾತನಾಡಿ, “ಈ ರೆಕಾರ್ಡ್ ಮಾಡಿದ ಕೋಣಗಳು ಕಳೆದ ಬಾರಿ ಇದೇ ಕಂಬಳದಲ್ಲಿ ಹಗ್ಗ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದವು. ಸ್ವರೂಪ್ ಕಳೆದ ವರ್ಷದವರೆಗೆ ಜ್ಯೂನಿಯರ್ ವಿಭಾಗದಲ್ಲಿ ಓಡಿಸುತ್ತಿದ್ದರು. ಈ ವರ್ಷ ಸೀನಿಯರ್ ವಿಭಾಗದಲ್ಲಿ ಓಡಿಸಿದ್ದಾರೆ. ತುಂಬಾ ಛಲದ ಯುವಕ. ಈ ಬಾರಿಯ ರೆಕಾರ್ಡ್‌ಗೆ ಕೋಣಗಳು ಮತ್ತು ಸ್ವರೂಪ್ ಅವರ ಕೊಡುಗೆ ಇದೆ. ಈ ರೆಕಾರ್ಡ್ ಅನಿರೀಕ್ಷಿತ” ಎಂದು ತಿಳಿಸಿದರು.

Kishor KV