ಕ್ಯಾಂಪಸ್ ನಲ್ಲಿ ಪ್ರತಿಭಟಿಸಿದ್ರೆ ₹20 ಸಾವಿರ ದಂಡ – ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಾಕಿಂಥಾ ಶಿಕ್ಷೆ?
ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಈಗ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಕಾಲೇಜಿನ ಕ್ಯಾಂಪಸ್ನಲ್ಲಿ ವಿದ್ಯಾರ್ಥಿ ಧರಣಿ ಮಾಡಿದರೆ 20 ಸಾವಿರ ಅಥವಾ 30 ಸಾವಿರ ರೂಪಾಯಿ ದಂಡ ಕಟ್ಟಬೇಕಂತೆ. ಜೊತೆಗೆ ಹಿಂಸಾಚಾರದಲ್ಲಿ ಭಾಗಿಯಾದ್ರೆ ಪ್ರವೇಶವನ್ನೇ ರದ್ದುಪಡಿಸಲಾಗುತ್ತೆ ಎಂದು ಸೂಚನೆ ನೀಡಿದೆ.
ಇದನ್ನೂ ಓದಿ : ಮೆಸ್ಸಿಯಿಂದ ‘ಗೋಲ್ಡನ್’ ಗಿಫ್ಟ್ – ವಿಶ್ವಕಪ್ ಗೆದ್ದ ತನ್ನ ತಂಡದ ಸದಸ್ಯರಿಗೆ ವಿಶೇಷ ಉಡುಗೊರೆ
ಜೆಎನ್‌ಯುನಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸರಿಯಾದ ನಡವಳಿಕೆಯ ಬಗ್ಗೆ 10 ಪುಟಗಳ ರೂಲ್ಸ್ ಬಿಡುಗಡೆ ಮಾಡಲಾಗಿದೆ. ಹೊಸ ರೂಲ್ಸ್ ಫೆಬ್ರವರಿ 3 ರಿಂದಲೇ ಜಾರಿಗೆ ಬಂದಿದ್ದು, ಶಿಸ್ತು ಮತ್ತು ನಡವಳಿಕೆಯ ನಿಯಮಗಳು ಎಂದು ಹೇಳಲಾಗಿದೆ. ಈ ನಿಯಮಗಳು ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ. 10 ಪುಟಗಳ ನಿಯಮದಲ್ಲಿ 17 ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಹಾಗೇ ಜೂಜು, ಹಾಸ್ಟೆಲ್ ಕೊಠಡಿಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಳ್ಳುವುದು, ನಿಂದನೀಯ ಭಾಷೆಗಳ ಬಳಕೆ, ಫೋರ್ಜರಿ ಪ್ರಕರಣಗಳು ಕೂಡ ಸೇರಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಬ್ಬರನ್ನೂ ಒಳಗೊಂಡಿರುವ ವಿಷಯಗಳನ್ನು ವಿಶ್ವವಿದ್ಯಾಲಯಕ್ಕೆ ಹಾಗೂ ಕೇಂದ್ರ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿಗೆ ತಿಳಿಸಬಹುದು. ಲೈಂಗಿಕ ಕಿರುಕುಳ, ರಾಗಿಂಗ್ ಹಾಗೂ ಕೋಮುಸೌಹಾರ್ದತೆಗೆ ಧಕ್ಕೆ ತರುವ ವಿಚಾರಗಳು ವಿವಿ ಕಚೇರಿಯ ವ್ಯಾಪ್ತಿಗೆ ಬರಲಿವೆ. ವಾಸ್ತವವಾಗಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ಹಲವು ಪ್ರತಿಭಟನೆಗಳು ನಡೆದವು. ಈ ಕಾರಣಗಳಿಂದಾಗಿ ವಿಶ್ವವಿದ್ಯಾಲಯ ಹೊಸ ರೂಲ್ಸ್ನೇ ಜಾರಿಗೆ ತಂದಿದೆ.