ಫ್ರೀ ಬಸ್‌ ಟಿಕೆಟ್‌ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ! – ವಾರಕ್ಕೆ ಮುಂಚೆ ಟಿಕೆಟ್‌ ಬುಕ್ಕಿಂಗ್‌ ಕಡ್ಡಾಯ?

ಫ್ರೀ ಬಸ್‌ ಟಿಕೆಟ್‌ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ! – ವಾರಕ್ಕೆ ಮುಂಚೆ ಟಿಕೆಟ್‌ ಬುಕ್ಕಿಂಗ್‌ ಕಡ್ಡಾಯ?

ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಬಸ್‌ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಈ ಯೋಜನೆ ಜಾರಿಗೆ ಬಂದು ಒಂದು ವಾರವಾಗಿದ್ದು,  ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೇವಲ ಒಂದು ವಾರದಲ್ಲಿ ಬರೋಬ್ಬರಿ 3,12,09,696 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಏಕಕಾಲಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ದಾಂಗುಡಿ ಇಡುತ್ತಿರುವುದರಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಿಗೆ ತೆರಳುವವರಿಗೆ ಮಾರ್ಗಸೂಚಿ ನಿಗದಿಪಡಿಸಲು ಸಾರಿಗೆ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ನಮ್ಮ ಬೆಂಗಳೂರು ಇನ್ನು ಮುಂದೆ ಸೇಫ್ ಸಿಟಿ – ಸಿಲಿಕಾನ್ ಸಿಟಿ ಜನರ ಸಹಾಯಕ್ಕೆ ಹೆಲ್ಪ್‌ಲೈನ್

ಶಕ್ತಿ ಯೋಜನೆ ಆರಂಭವಾದ ಬೆನ್ನಲ್ಲೇ ರಾಜ್ಯದ ಮಹಿಳೆಯರ ಓಡಾಟ ಹೆಚ್ಚಾಗಿದೆ. ಪ್ರವಾಸಿ ತಾಣಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಮಹಿಳೆಯರಿಗೆ ಏಕಕಾಲಕ್ಕೆ ಪ್ರಯಾಣ ಮಾಡುತ್ತಿರುವುದರಿಂದ ಬಸ್‌ ಕಿಟಕಿ, ಬಾಗಿಲುಗಳು ಮುರಿಯೋದು, ಡ್ರೈವರ್‌ ಸೀಟಿನಲ್ಲೇ ಹತ್ತೋದು ಕಂಡುಬರುತ್ತಿದೆ. ಕೆಲವು ಕಡೆಗಳಲ್ಲಿ ಸೀಟಿಗಾಗಿ ಜಗಳವಾಡುವುದು ಕಂಡುಬರುತ್ತಿದೆ. ಈ ಹಿನ್ನೆಲೆ ಮಾರ್ಗಸೂಚಿ ನಿಗದಿ ಮಾಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ನಿರ್ಧರಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ರಾಮಲಿಂಗಾ ರೆಡ್ಡಿ, ಜನರು ಪ್ರಯಾಣ ಮಾಡಲಿ, ಆದ್ರೆ ಎಲ್ಲರೂ ಒಂದೇ ಬಾರಿಗೆ ಹೋಗುವುದರಿಂದ ಜನದಟ್ಟಣೆ ಆಗುತ್ತಿದೆ. ಶಕ್ತಿ ಯೋಜನೆ 5 ವರ್ಷವೂ ಇರುತ್ತದೆ. ಅದರಲ್ಲಿ ಯಾರಿಗೂ ಆತಂಕ ಬೇಡ. ಆದ್ರೆ ಎಲ್ಲರೂ ಒಂದೇ ದಿನ ಪ್ರಯಾಣ ಮಾಡೋದ್ರಿಂದ ಸಮಸ್ಯೆಯಾಗುತ್ತಿದೆ. ಚಾಲಕರು, ನಿರ್ವಾಹಕರಿಗೂ ಕಷ್ಟವಾಗ್ತಿದೆ. ಹಾಗಾಗಿ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇನ್ನೆರಡೇ ದಿನದಲ್ಲಿ ಮಾರ್ಗಸೂಚಿ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಮಿತಿ ಮೀರಿದ ಜನ ಏಕಕಾಲಕ್ಕೆ ಬರುತ್ತಿರುವುದರಿಂದ ನಿಭಾಯಿಸೋದು ಕಷ್ಟವಾಗುತ್ತಿದೆ. ಬುಕಿಂಗ್ ಮಾಡಿಕೊಂಡೇ ಹೋದರೆ ದಟ್ಟಣೆ ನಿಯಂತ್ರಿಸಬಹುದು. ಒಂದೇ ವಾರಕ್ಕೆ ಹೋಗುವ ಜನ, 4 ವಾರದಲ್ಲಿ ಹೋದರೆ ಯಾರಿಗೂ ಸಮಸ್ಯೆ ಆಗೋದಿಲ್ಲ. ಹಾಗಾಗಿ ಹೊಸ ಮಾರ್ಗಸೂಚಿ ಮಾಡಲೇಬೇಕು ಇಲ್ಲದಿದ್ದರೆ ನಿಭಾಯಿಸೋದು ಕಷ್ಟವಾಗುತ್ತದೆ. ಕೆಲ ಬಿಜೆಪಿ ನಾಯಕರು ದೇವಸ್ಥಾನಕ್ಕೆ ಹೋಗಿ, ಪ್ರವಾಸಿ ತಾಣಗಳಿಗೆ ಹೋಗಿ ಅಂತಾ ಪ್ರಚೋದನೆ ಕೊಡ್ತಿದ್ದಾರೆ. ಒಮ್ಮೆಲೆ ಎಲ್ಲರೂ ಹೋಗೋದು ಬೇಡ ಅಂತಾ ಮಹಿಳಾ ಪ್ರಯಾಣಿಕರಿಗೆ ಮನವಿ ಮಾಡುತ್ತೇನೆ. ಪ್ರಾರಂಭದಲ್ಲಿ ಉತ್ಸಾಹದಿಂದ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಆಮೇಲೆ 6 ತಿಂಗಳ ನಂತರ ಪ್ರಯಾಣ ಮಾಡ್ತಾರೆ. 15 ದಿನಕ್ಕೆ ಕಾದು ನೋಡಿ ಅಂತಾ ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಪುರುಷರ ಜಾಗದಲ್ಲೂ ಅವರೇ ಕುಳಿಕೊಳ್ಳುತ್ತಿರುವುದರಿಂದ ಪುರುಷರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಪುರುಷರು, ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಮಾರ್ಗಸೂಚಿ ತರಲು ನಿರ್ಧರಿಸಿದ್ದೇವೆ. ಮಾರ್ಗಸೂಚಿ ಅಂದ್ರೆ ಟಿಕೆಟ್ ಶುಲ್ಕ ವಿಧಿಸುವುದಲ್ಲ. ಉಚಿತ, ಉಚಿತವೇ ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

suddiyaana