ನಾಯಿ ಇಷ್ಟ ಅಂತಾ ಇನ್ನುಮುಂದೆ ಬೇಕಾಬಿಟ್ಟಿ ಸಾಕುವಂತಿಲ್ಲ! – ಶ್ವಾನ ಮಾಲೀಕರಿಗೆ ಹೊಸ ರೂಲ್ಸ್‌!

ನಾಯಿ ಇಷ್ಟ ಅಂತಾ ಇನ್ನುಮುಂದೆ ಬೇಕಾಬಿಟ್ಟಿ ಸಾಕುವಂತಿಲ್ಲ! – ಶ್ವಾನ ಮಾಲೀಕರಿಗೆ ಹೊಸ ರೂಲ್ಸ್‌!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಮಹತ್ವದ ಸುದ್ದಿಯೊಂದಿದೆ. ನಾಯಿ ಇಷ್ಟ ಅಂತಾ ಇನ್ನಮುಂದೆ ಬೇಕಾಬಿಟ್ಟಿ ನಾಯಿ ಸಾಕುವಂತಿಲ್ಲ. ಶ್ವಾನ ಸಾಕುವವರಿಗಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಪಶು ಸಂಗೋಪನೆ ವಿಭಾಗವು ಪ್ರತ್ಯೇಕ ಮಾರ್ಗಸೂಚಿ ಜಾರಿಯೊಂದನ್ನು ಸದ್ಯದಲ್ಲೇ ಜಾರಿಗೊಳಿಸಲಿದೆ.

ನಗರದಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಸಾವಿರಾರು ರೂ.ನಿಂದ ಹಿಡಿದು ಲಕ್ಷಾಂತರ ರೂಪಾಯಿ ಕೊಟ್ಟು ನಾಯಿ ಕೊಳ್ಳುವವರೂ ಇದ್ದಾರೆ. ನಾಯಿ ಬೊಗಳುವುದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುವುದು ಸಾಮಾನ್ಯವಾಗಿದೆ. ಹಲವರು ರಸ್ತೆ ಬದಿಯಲ್ಲಿ ನಾಯಿಗಳ ಮಲ-ಮೂತ್ರ ಮಾಡಿಸುವುದು ಸಮಸ್ಯೆ ಸೃಷ್ಟಿಸುತ್ತಿದೆ. ಇದರಿಂದ ನಗರದ ಸೌಂದರ್ಯವೂ ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿಶ್ವಾನ ಸಾಕಣೆಗೆ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ – ಕೆಎಸ್‌ಆರ್‌ಟಿಸಿ 2,000 ವಿಶೇಷ ಬಸ್‌!

ಪಶು ಸಂಗೋಪನೆ ವಿಭಾಗವು ಜಾರಿಗೆ ತರಲು ಮುಂದಾಗಿರುವ ಮಾರ್ಗಸೂಚಿಯಲ್ಲಿ ಒಂದು ಕುಟುಂಬ ಗರಿಷ್ಠ ಎಷ್ಟು ಶ್ವಾನಗಳನ್ನು ಸಾಕಬಹುದು? ಮಲ-ಮೂತ್ರ ವಿಸರ್ಜನೆಗೆ ಶ್ವಾನವನ್ನು ಎಷ್ಟು ಗಂಟೆಗೆ ಮನೆಯಿಂದ ಹೊರಗೆ ಕರೆದೊಯ್ಯಬೇಕು? ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಆಗದಂತೆ ಯಾವ್ಯಾವ ಕ್ರಮ ಕೈಗೊಳ್ಳಬೇಕು ಇತ್ಯಾದಿ ಮಾಹಿತಿಗಳನ್ನು ನೀಡಲಿದೆ. ಈ ಹೊಸ ನಿಯಮಗಳೂ ವರ್ಷಾಂತ್ಯದೊಳಗೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಪಶು ಇಲಾಖೆ ಜಂಟಿ ನಿರ್ದೇಶಕ ಡಾ. ರವಿಕುಮಾರ್‌ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಬೆಂಗಳೂರು 3.10 ಲಕ್ಷ ಬೀದಿ ನಾಯಿಗಳಿದ್ದವು. ಈಗ ಬೀದಿನಾಯಿಗಳ ಸಂಖ್ಯೆ ಇಳಿಕೆಯಾಗಿದ್ದು, ಸದ್ಯ 2,79,335 ಶ್ವಾನಗಳಿವೆ. ಈ ಪೈಕಿ 1,65,341 ಗಂಡು ನಾಯಿಗಳು ಹಾಗೂ 82,757 ಹೆಣ್ಣು ನಾಯಿಗಳಿವೆ. ಪಾಲಿಕೆಯು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 77,555 ಶ್ವಾನಗಳಿಗೆ ಆ್ಯಂಟಿ ರೇಬಿಸ್‌ ವ್ಯಾಕ್ಸಿನೇಷನ್‌ (ಎಆರ್‌ವಿ) ಹಾಕಿದೆ.ಈ ಪೈಕಿ ಶೇ.70ರಷ್ಟು ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದರು.

ಬೆಂಗಳೂರು ಪೂರ್ವ ವಿಭಾಗದಲ್ಲಿ 9341, ಬೆಂಗಳೂರು ಪಶ್ಚಿಮ 8927, ಬೆಂಗಳೂರು ದಕ್ಷಿಣ 8191, ಆರ್‌ಆರ್‌ ನಗರ 12,795, ದಾಸರಹಳ್ಳಿ 8665, ಬೊಮ್ಮನಹಳ್ಳಿ 11,402, ಯಲಹಂಕ 7097, ಮಹದೇವಪುರ 11,137 ಶ್ವಾನಗಳಿಗೆ ವ್ಯಾಕ್ಸಿನೇಷನ್‌ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

Shwetha M