ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ – ಮೆಟ್ರೋದಲ್ಲೂ ಮದ್ಯ ಕೊಂಡೊಯ್ಯಲು ಅನುಮತಿ!
ನವದೆಹಲಿ: ಮದ್ಯ ಪ್ರಿಯರಿಗೆ ಖುಷಿ ಸುದ್ದಿಯೊಂದಿದೆ. ಇನ್ನು ಮುಂದೆ ಮೆಟ್ರೋದಲ್ಲಿ ಸಂಚರಿಸುವಾಗ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಇನ್ನು ಮುಂದೆ ದೆಹಲಿಯ ಮೆಟ್ರೋಗಳಲ್ಲಿ ಸಂಚರಿಸುವಾಗ ಮದ್ಯದ ಬಾಟಲಿಗಳನ್ನು ಹೊತ್ತೊಯ್ಯಬಹುದು.
ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಹೊಸ ನಿಯಮಾವಳಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ದೆಹಲಿಯ ಮೆಟ್ರೋ ಒಳಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಸಾಗಿಸಲು ಅನುಮತಿ ನೀಡಲಾಗಿದೆ. ಆದರೆ ಈಗಲೂ ಮೆಟ್ರೋ ಒಳಗೆ ಕುಡಿಯುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಭಾನುವಾರ ನೇರಳೆ ಮಾರ್ಗ ಮೆಟ್ರೋ ಸಂಚಾರದಲ್ಲಿ 2 ಗಂಟೆ ವ್ಯತ್ಯಯ!
ಏರ್ಪೋರ್ಟ್ನ ಎಕ್ಸ್‌ಪ್ರೆಸ್ ಲೈನ್ಅನ್ನು ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಆದರೆ ನವೀಕರಿಸಿದ ನಿಯಮಾವಳಿಗಳ ಪ್ರಕಾರ ದೆಹಲಿ ಮೆಟ್ರೋನ ಯಾವುದೇ ಭಾಗದಲ್ಲಿ ಬೇಕಾದರೂ ಓರ್ವ ವ್ಯಕ್ತಿಗೆ ಎರಡು ಸೀಲ್ಡ್ ಬಾಟಲಿ ಮದ್ಯ ಸಾಗಿಸುವ ಅವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಎಂಆರ್‌ಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ದೆಹಲಿ ಮೆಟ್ರೋದಲ್ಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿನ ನಿಬಂಧನೆಗಳಿಗೆ ಸಮನಾಗಿ ಸಾಗಿಸಲು ಅನುಮತಿಸಲಾಗಿದೆ. CISF ಮತ್ತು DMRC ಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಹಿಂದಿನ ಆದೇಶವನ್ನು ಪರಿಶೀಲಿಸಿದೆ. ಹಿಂದಿನ ಆದೇಶದ ಪ್ರಕಾರ, ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಆದಾಗ್ಯೂ, ಮೆಟ್ರೋ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೆಟ್ರೋ ಪ್ರಯಾಣಿಕರು ಪ್ರಯಾಣಿಸುವಾಗ ಸರಿಯಾದ ವರ್ತನೆಯನ್ನು ಕಾಪಾಡಿಕೊಳ್ಳಲು ವಿನಂತಿಸಲಾಗಿದೆ. ಪ್ರಯಾಣಿಕರು ಎಲ್ಲಾದರೂ ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಿಎಂಆರ್‌ಸಿ, “ಯಾವುದೇ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ” ಎಂದಿದೆ.