ಕೋಚ್ ಗಂಭೀರ್​ಗೆ 3 ಸವಾಲು – ದ್ರಾವಿಡ್​ ರೀತಿ ಪ್ಲೇಯರ್ಸ್ ಮನ ಗೆಲ್ತಾರಾ?
ಕೊಹ್ಲಿ ಜೊತೆ ಹೇಗಿರ್ತಾರೆ ಗೌತಮ್?

ಕೋಚ್ ಗಂಭೀರ್​ಗೆ 3 ಸವಾಲು – ದ್ರಾವಿಡ್​ ರೀತಿ ಪ್ಲೇಯರ್ಸ್ ಮನ ಗೆಲ್ತಾರಾ?ಕೊಹ್ಲಿ ಜೊತೆ ಹೇಗಿರ್ತಾರೆ ಗೌತಮ್?

ಟೀಮ್ ಇಂಡಿಯಾ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಟೀಮ್ ಇಂಡಿಯಾದ ಮಾಜಿ ಎಡಗೈ ದಾಂಡಿಗ ಗೌತಮ್ ಗಂಭೀರ್ ಕೂಡಾ ರಾಹುಲ್ ದ್ರಾವಿಡ್ ರೀತಿ ಒಂದ್ ಟೈಮ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಕ್ರಿಕೆಟರ್ ಆಗಿದ್ದರು. ಜೊತೆಗೆ ಕೆಲ ದಿನಗಳಿಂದ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆಗೋದು ಗ್ಯಾರಂಟಿ ಅನ್ನೋ ಮಾತು ಕೂಡಾ ಕೇಳಿಬರ್ತಿತ್ತು. ಇದರ ಬೆನ್ನಲ್ಲೇ ಗಂಭೀರ್ ಮೊನ್ನೆ ಮೊನ್ನೆಯಷ್ಟೇ ಕೆಕೆಆರ್ ಟೀಮ್ ಮೆಂಟರ್ ಹುದ್ದೆಯನ್ನು ತ್ಯಜಿಸಿ, ವಿದಾಯದ ವಿಡಿಯೋ ಶೂಟಿಂಗ್‌ನಲ್ಲೂ ಭಾಗಿಯಾಗಿದ್ರು. ಕೊನೆಗೂ ಗಂಭೀರ್ ಅಂದುಕೊಂಡಂತೆ ಫ್ಯಾನ್ಸ್ ಗೆಸ್ ಕೂಡಾ ಸರಿ ಎಂಬಂತೆ ಟೀಮ್ ಇಂಡಿಯಾ ಮಹಾ ಗುರುವಾಗಿ ಗಂಭೀರ್ ಆಯ್ಕೆಯಾಗಿದ್ದಾರೆ. ಹಾಗಾದ್ರೆ ಸ್ನೇಹಿತರೆ, ಟೀಮ್ ಇಂಡಿಯಾ ಕೋಚ್ ಆಗಲೇಬೇಕು ಎಂದು ಗಂಭೀರ್ ಹಠ ತೊಟ್ಟಿದ್ಯಾಕೆ?, ಕೋಚ್ ಆಗುವ ಮಹಾದಾಸೆಯಿಂದ ಗಂಭೀರ್ ಮತ್ತೊಂದು ಚಾಲೆಂಜ್ ಸ್ವೀಕರಿಸಿದ್ರಾ?, ಗಂಭೀರ್ ಮುಂದಿರೋ ಮೂರು ಕಠಿಣ ಸವಾಲುಗಳೇನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  IND Vs ZIM ಫೈಟ್ ​ನಲ್ಲಿ ಟ್ವಿಸ್ಟ್ – 3 ಬದಲಾವಣೆ.. ಜೈಸ್ವಾಲ್ ಡ್ರಾಪ್?

ಟೀಂ ಇಂಡಿಯಾದ ಕೋಚ್ ಆಗಿ ಗೌತಮ್ ಗಂಭೀರ್ ಸೆಲೆಕ್ಟ್ ಆಗಿರೋದನ್ನ ಬಿಸಿಸಿಐ ಅಧಿಕೃತವಾಗಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಭಾರತವು ನನ್ನ ಗುರುತಾಗಿದೆ. ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ದೊಡ್ಡ ಅವಕಾಶ. ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತೆ ಮಾಡುತ್ತೇವೆ ಎಂಬ ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ. ಆದ್ರೆ, ಟೀಮ್ ಇಂಡಿಯಾ ಎಂಬ ವಿಶ್ವದ ನಂಬರ್ ಒನ್ ಟೀಮ್‌ನಲ್ಲಿ ಗೌತಮ್ ಗಂಭೀರ್ ಕೋಚ್ ಆಗಿ ಕಾರ್ಯನಿರ್ವಹಿಸಲು ಮೂರು ಸವಾಲುಗಳಿವೆ.

ಗಂಭೀರ್ ಮುಂದೆ 3 ಬಿಗ್‌ ಟಾಸ್ಕ್  

2025ರ ಫೆಬ್ರವರಿ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಕಣಕ್ಕಿಯಲಿವೆ. ಇದುವೇ ಗಂಭೀರ್ ಮುಂದಿರುವ ಮೊದಲ ದೊಡ್ಡ ಸವಾಲು. ಈಗಾಗಲೇ ಟಿ20 ವಿಶ್ವಕಪ್ ಗೆದ್ದಿರುವ ಟೀಮ್ ಇಂಡಿಯಾ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಏಕೆಂದರೆ 2013 ರ ಬಳಿಕ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಈ ಟೂರ್ನಿಯಲ್ಲಿನ ಭಾರತ ತಂಡದ ಪ್ರದರ್ಶನ ಗೌತಮ್ ಗಂಭೀರ್ ಅವರ ಕೋಚಿಂಗ್ ಚಾಕಚಕ್ಯತೆಯನ್ನು ತೆರೆದಿಡಲಿದೆ. ಇದರ ಬೆನ್ನಲ್ಲೇ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ಸ್ ಶಿಪ್ ಕೂಡ ನಡೆಯಲಿದೆ. ಜೂನ್ 2025 ರಲ್ಲಿ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ಸ್‌ನಲ್ಲಿ ಭಾರತ ತಂಡ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಅತ್ತ ಕಳೆದ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಆಡಿರುವ ಟೀಮ್ ಇಂಡಿಯಾಗೆ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಗಂಭೀರ್ ಮುಂದಾಳತ್ವದಲ್ಲಿ ಈ ಬರ ನೀಗಿಸಿಕೊಳ್ಳುವುದನ್ನು ಬಿಸಿಸಿಐ ಎದುರು ನೋಡುತ್ತಿದೆ.

ಮತ್ತೊಂದು ಎರಡನೇ ಸವಾಲ್. ಟೀಮ್ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಮಾಡಿರೋದು ಕಡಿಮೆ ಸಾಧನೆಯೇನಲ್ಲ. ಈ ಬಾರಿಯ ಒನ್ ಡೇ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಪ್ರತಿ ಪಂದ್ಯ ಗೆದ್ದು ಫೈನಲ್‌ ಗೇರಿತ್ತು. ಆದ್ರೆ, ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋತು ಹೋಗಿತ್ತು. ಅದೊಂದು ಮಹಾ ಸೋಲು ಬಿಟ್ರೆ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಭರ್ಜರಿ ಫರ್ಪಾಮೆನ್ಸ್ ಹಿಂದಿರೋ ಮಹಾಗುರುವೇ ರಾಹುಲ್ ದ್ರಾವಿಡ್. ಈ ಒಂದು ಸೋಲನ್ನು ಟೀಮ್ ಇಂಡಿಯಾ ದ್ರೋಣಾಚಾರ್ಯ ರಾಹುಲ್ ದ್ರಾವಿಡ್ ಮರೆಯಲೇ ಇಲ್ಲ. ಇದೇ ಹಠವೇ ಈಗ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಎತ್ತಿಹಿಡಿಯಲು ಕಾರಣವಾಯ್ತು. ಅಂದರೆ, ರಾಹುಲ್ ದ್ರಾವಿಡ್ ಕೋಚ್ ಆಗಿ ಟೀಮ್ ಇಂಡಿಯಾವನ್ನು ಜಗತ್ತಿನ ನಂಬರ್ ಒನ್ ಟೀಮ್ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಆಟಗಾರರು ಕೂಡಾ ಕೋಚ್ ದ್ರಾವಿಡ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ದ್ರಾವಿಡ್ ಗರಡಿಯಲ್ಲಿ ಯಂಗ್ ಸ್ಟರ್ಸ್ ಕೂಡಾ ಪಳಗಿದ್ದಾರೆ. ಯಾಕೆಂದ್ರೆ ಟೀಮ್ ಇಂಡಿಯಾ ಏ ಟೀಮ್ ಇರಲಿ, ಟೀಮ್ ಇಂಡಿಯಾದ ಅಂಡರ್ ನೈಂಟೀನ್ ಟೀಮ್ ಇರಲಿ, ಈ ಎಲ್ಲಾ ಟೀಮ್ ನಲ್ಲೂ ಕರ್ತವ್ಯ ನಿರ್ವಹಿಸಿದವರು ರಾಹುಲ್ ದ್ರಾವಿಡ್. ಅಷ್ಟೇ ಅಲ್ಲ. ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್ ನಂತಹ ಪ್ರತಿಭೆಗಳನ್ನ ಬೆಳಿಸಿದ್ದು ಕೂಡಾ ದ್ರಾವಿಡ್. ಈಗ ಗಂಭೀರ್‌ ಮುಂದಿರೋ ಸವಾಲ್ ಕೂಡಾ ಇದೇ. ರಾಹುಲ್ ದ್ರಾವಿಡ್ ಆಟಗಾರರನ್ನ ಬರೀ ಟೀಮ್ ಆಗಿ ಟ್ರೀಟ್ ಮಾಡಿಲ್ಲ. ಅವರನ್ನ ಭಾರತವೇ ಹೆಮ್ಮೆ ಪಡುವಂತಾ ಸಾಧನೆ ಮಾಡೋ ಸಾಧಕರನ್ನಾಗಿ ಮಾಡಿದ್ದಾರೆ. ಪ್ರತಿಯೊಬ್ಬ ಕ್ರಿಕೆಟರ್ ಕೂಡಾ ರಾಹುಲ್ ಗೆ ರೆಸ್ಪೆಕ್ಟ್ ಕೊಡ್ತಾರೆ. ಪ್ರತಿಯೊಬ್ಬ ಆಟಗಾರ ಕೂಡಾ ರಾಹುಲ್ ದ್ರಾವಿಡ್ ಜೊತೆ ನಿಲ್ತಾರೆ. ರಾಹುಲ್ ದ್ರಾವಿಡ್ ಕೋಚ್ ಆಗಿ ಸೆಲೆಕ್ಟ್ ಆಗಿ ಅವರ ಕಾರ್ಯಾವಧಿ ಮುಗಿಯೋ ತನಕ ಒಂದೇ ಒಂದು ಕಾಂಟ್ರವರ್ಸಿಯಾಗಿಲ್ಲ. ಇದೇ ಬದ್ಧತೆಯನ್ನ ಗೌತಮ್ ಗಂಭೀರ್ ಮುಂದುವರೆಸಿಕೊಂಡು ಹೋಗ್ತಾರಾ ಅನ್ನೋದೇ ಎರಡನೇ ಪ್ರಮುಖ ಸವಾಲು.

ಮೂರನೇ ಸವಾಲ್ ಅಂದ್ರೆ ಎಲ್ಲಾ ಫ್ಯಾನ್ಸ್ ತಲೆಯಲ್ಲೂ ಓಡುತ್ತಿರೋ ಅದೊಂದು ಪ್ರಶ್ನೆ. ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಸಂಬಂಧ ಟೀಮ್ ಇಂಡಿಯಾದಲ್ಲಿ ಹೇಗಿರುತ್ತೆ ಅನ್ನೋದು. ಒಂದ್ ಟೈಮ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಗೌತಿ ಭಾಯ್ ಕಚ್ಚಾಡಿದ ರೀತಿಗೆ ಕ್ರಿಕೆಟ್ ಲೋಕವೇ ನಾಚಿತ್ತು. ಕ್ರಿಕೆಟ್ ದಿಗ್ಗಜರ ಬೀದಿ ಕಾಳಗ ಕ್ರಿಕೆಟ್ ಲೋಕದಲ್ಲಿ ಮುಜುಗರ ತಂದಿತ್ತು. ಆದರೆ, ಕಾಲ ಎಲ್ಲವೂ ಮರೆಸುತ್ತೆ ಎಂಬಂತೆ ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಸೀನೇ ಚೇಂಜ್ ಆಗಿತ್ತು. ಗೌತಮ್ ಗಂಭೀರ್ ಚಾನ್ಸ್ ಸಿಕ್ಕಲೆಲ್ಲಾ ಕಿಂಗ್ ಕೊಹ್ಲಿಯ ಗುಣಗಾನ ಮಾಡುತ್ತಿದ್ದರು. ಜೊತೆಗೆ ಆರ್‌ಸಿಬಿ ಜೊತೆ ಕೆಕೆಆರ್ ಮ್ಯಾಚ್ ಇದ್ದಾಗಲೆಲ್ಲಾ ಕೊಹ್ಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ರು. ಕೊಹ್ಲಿ ಜೊತೆ ನಗ್ತಾ ನಗ್ತಾ ಮಾತಾಡಿದ್ರು. ಕೊಹ್ಲಿ ಕೂಡಾ ಅಷ್ಟೇ. ಗೌತಮ್ ಜೊತೆ ಉತ್ತಮ ಬಾಂಧವ್ಯ ಇರೋದಾಗಿ ಫ್ಯಾನ್ಸ್ ಗೆ ತಿಳಿಸಿದ್ರು. ಆದ್ರೆ, ಈ ಗೌತಮ್ ಗಂಭೀರ್ ಈ ದಿಢೀರ್ ಬದಲಾವಣೆ ಕೋಚ್ ಆಗೋದಕ್ಕಾಗಿಯೇ ಎಂಬ ಅನುಮಾನ ವ್ಯಕ್ತವಾಗಿತ್ತು. ನೋಡಿದ್ರೆ ಫ್ಯಾನ್ಸ್ ಗೆಸ್ ಕರೆಕ್ಟ್ ಆಗಿಯೇ ಇತ್ತು. ಮಹಾಗುರುವಿನ ಸ್ಥಾನ ಅಂದ್ರೆ ಅದಕ್ಕೊಂದು ಗೌರವ ಇರುತ್ತದೆ. ಇಲ್ಲಿ ಆ ಆಟಗಾರ, ಈ ಆಟಗಾರ ಎಂಬ ಡಿಫರೆನ್ಸ್ ಇರೋದಿಲ್ಲ. ಜೊತೆಗೆ ಟೀಮ್ ಯಾವಾಗ್ಲೂ ಒನ್ ಫ್ಯಾಮಿಲಿ ಥರಾ ಇರ್ಬೇಕು. ಹೀಗಾಗಿಯೇ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಜೊತೆ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದ್ದರು. ಅದು ಸಕ್ಸಸ್ ಆಗಿದೆ ಕೂಡಾ. ಇನ್ನು ಹೇಳಿ ಕೇಳಿ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಆಟಗಾರ. ಗಂಭೀರ್ ಸ್ವಭಾವ ಕೂಡಾ ಅಗ್ರೆಸ್ಸಿವ್. ಇವರಿಬ್ಬರ ಈ ಸ್ವಭಾವ ಮುಂದೆ ಟೀಮ್ ಇಂಡಿಯಾದ ಮೇಲೆ ಯಾವ ಪ್ರಭಾವ ಬೀರಲಿದೆ ಅನ್ನೋದೇ ಗಂಭೀರ್ ಮುಂದಿರೋ ಕಠಿಣ ಸವಾಲು. ಈ ಸವಾಲುಗಳನ್ನೆಲ್ಲಾ ಹೊರತುಪಡಿಸಿ ಗೌತಮ್ ಗಂಭೀರ್ ಬಗ್ಗೆ ಇನ್ನೊಂದು ವಿಚಾರ ಹೇಳಲೇಬೇಕು.

ಗಂಭೀರ್ ಮೆಂಟರ್ ಆಗಿದ್ದು ಯಾಕೆ ಗೊತ್ತಾ?   

ಗೌತಮ್ ಗಂಭೀರ್ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟಿದ್ದು ಇಂದು ನಿನ್ನೆಯಿಂದಲ್ಲ. ಯಾವಾಗ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಮುಕ್ತಾಯವಾಗಿತ್ತೋ ಅಲ್ಲಿಂದಲೇ ಕೋಚ್ ಆಗಲು ಹಠ ತೊಟ್ಟಂತೆ ಕಂಡಿದ್ದರು. ಹೀಗಾಗಿಯೇ ಐಪಿಎಲ್ ಪಂದ್ಯಾವಳಿಯಲ್ಲಿ ಗೌತಮ್ ಗಂಭೀರ್ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಕೋಚ್ ಆಯ್ಕೆಗೆ ಪರಿಗಣಿಸಲಾದ ಮುಖ್ಯ ಮಾನದಂಡವೇ ಮೆಂಟರ್. ಕಳೆದ ಮೂರು ಸೀಸನ್ ಐಪಿಎಲ್​ನಲ್ಲಿ ಗಂಭೀರ್ ಮೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ. 2022-23 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗಂಭೀರ್, ಕಳೆದ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾಗಿದ್ದರು. 4ಈ ಅನುಭವಗಳೊಂದಿಗೆ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಬೇಕಾದ ಕನಿಷ್ಠ ಮಾನದಂಡಗಳನ್ನು ಪೂರ್ಣಗೊಳಿಸಿದ್ದರು. ಈ ಮಾನದಂಡಗಳ ಪೂರ್ಣತೆಯೊಂದಿಗೆ ಭಾರತ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ 2024 ಕ್ಕೆ ಪೂರ್ಣಗೊಳ್ಳುವುದನ್ನು ಮನಗಂಡಿರುವ ಗೌತಮ್ ಗಂಭೀರ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಅರ್ಹತೆಯ ದಾರಿಯನ್ನು ಹುಡುಕಿಕೊಂಡಿದ್ದರು. ಇದೇ ಕಾರಣಕ್ಕಾಗಿಯೇ ಐಪಿಎಲ್ ತಂಡಗಳ ಮೆಂಟರ್ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ವಿಚಾರವೆಂದ್ರೆ, ಗೌತಮ್ ಗಂಭೀರ್ ಮೆಂಟರ್ ಆಗಿದ್ದ ವೇಳೆ ಪೂರ್ವ ದೆಹಲಿಯ ಬಿಜೆಪಿ ಸಂಸದರಾಗಿದ್ದರು ಎಂಬುದು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಪೂರ್ವಭಾವಿಯಾಗಿ ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಸಿದ್ಧತೆ ಮಾಡಿಕೊಳ್ಳಲು ಸಂಸದ ಸ್ಥಾನವನ್ನು ಕೂಡಾ ತ್ಯಾಗ ಮಾಡಿದ್ದರು ಎಂದೇ ಹೇಳಲಾಗ್ತಿದೆ. ಹೀಗಾಗಿ 2022ರಿಂದಲೇ ಗೌತಮ್ ಗಂಭೀರ್ ಕೋಚ್ ಆಗಬೇಕಾದ ಎಲ್ಲಾ ಮಾನದಂಡಗಳ ಪ್ರಕಾರ ನಡೆದುಕೊಂಡಿದ್ದರು. ಇದಕ್ಕಾಗಿ ಕಠಿಣ ಪ್ರಯತ್ನ ಪಟ್ಟಿದ್ದಾರೆ ಅನ್ನೋದು ಕೂಡಾ ಅಷ್ಟೇ ಸತ್ಯ. ಈ ಮೂಲಕ ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಹೊಸ ಇನಿಂಗ್ಸ್​ ಆರಂಭಿಸಿದ್ದಾರೆ. ಆದರೆ ಈ ಹೊಸ ಇನಿಂಗ್ಸ್​ನಲ್ಲಿ 4 ಐಸಿಸಿ ಟೂರ್ನಿಗಳು ಮುಂದಿದೆ. ಅಂದರೆ ಮುಂದಿನ ಮೂರು ವರ್ಷಗಳಲ್ಲಿ ಗಂಭೀರ್ ಸಾರಥ್ಯದಲ್ಲಿ ಭಾರತ ತಂಡವು 4 ಐಸಿಸಿ ಟೂರ್ನಿಗಳನ್ನು ಆಡಲಿದೆ. ಈ ಟೂರ್ನಿಗಳಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಹೇಗಿರಲಿದೆ ಎಂಬುದರ ಮೇಲೆ ಗಂಭೀರ್ ಅವರ ಕೋಚಿಂಗ್ ಭವಿಷ್ಯ ನಿಂತಿದೆ.

Shwetha M