‘ಒನ್ ಮೋರ್ ಪೆಗ್’ ಅನ್ನಂಗಿಲ್ಲ – ‘ಬ್ಯಾಲೆನ್ಸ್’ ತಪ್ಪಿದ್ರೆ ವಿಮಾನದಿಂದ್ಲೇ ಕಿಕ್ ಔಟ್!
ವಿಮಾನದಲ್ಲಿ ಮದ್ಯಸೇವನೆಗೆ ಇನ್ಮೇಲೆ ಹೊಸ ರೂಲ್ಸ್..!

‘ಒನ್ ಮೋರ್ ಪೆಗ್’ ಅನ್ನಂಗಿಲ್ಲ – ‘ಬ್ಯಾಲೆನ್ಸ್’ ತಪ್ಪಿದ್ರೆ ವಿಮಾನದಿಂದ್ಲೇ ಕಿಕ್ ಔಟ್!ವಿಮಾನದಲ್ಲಿ ಮದ್ಯಸೇವನೆಗೆ ಇನ್ಮೇಲೆ ಹೊಸ ರೂಲ್ಸ್..!

ವಿಮಾನ ಪ್ರಯಾಣದ ವೇಳೆ ನಡೆದಿದ್ದ ಅದೆರಡು ಘಟನೆಗಳು ದೇಶದಲ್ಲಿ ಸಂಚಲನ ಮೂಡಿಸಿದ್ದವು. ಇದೇ ಕಾರಣಕ್ಕೆ ಎಚ್ಚೆತ್ತಿರೋ ಏರ್ ಇಂಡಿಯಾ ನಿಯಮಗಳಲ್ಲಿ ತಿದ್ದುಪಡಿ ತಂದಿದೆ. ಇತ್ತೀಚೆಗೆ ವಿಮಾನ ಪ್ರಯಾಣದ ವೇಳೆ ಮದ್ಯದ ಅಮಲಿನಲ್ಲಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಗಳು ಸದ್ದು ಮಾಡಿದ್ದವು. ಇದರಿಂದ ಎಚ್ಚೆತ್ತುಕೊಂಡಿರೋ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, ಮದ್ಯ ಪೂರೈಕೆ ನೀತಿಗೆ ತಿದ್ದುಪಡಿ ತಂದಿದೆ. ‘ಅಗತ್ಯಕ್ಕಿಂತಲೂ ಹೆಚ್ಚಿನ ಮದ್ಯವನ್ನ ಪ್ರಯಾಣಿಕರಿಗೆ ನೀಡುವಂತಿಲ್ಲ. ಅದನ್ನು ಪ್ರಯಾಣಿಕರಿಗೆ ಮನವರಿಕೆ ಮಾಡಿಸುವ ಜಾಣ್ಮೆಯಲ್ಲಿ ವಿಮಾನ ಸಿಬ್ಬಂದಿ ಹೊಂದಿರಬೇಕು’ ಎಂದು ತಿಳಿಸಿದೆ.

ಇದನ್ನೂ ಓದಿ :12 ಕಿಲೋಮೀಟರ್ ಯುವಕನನ್ನು ಎಳೆದೊಯ್ದ ಕಾರು – ರಸ್ತೆಯಲ್ಲೇ ಜೀವಬಿಟ್ಟ ಅಮಾಯಕ

ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ 2 ಪ್ರಕರಣಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಜುಗರ ಉಂಟು ಮಾಡಿತ್ತು. ಹೀಗಾಗಿ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಛೀಮಾರಿ ಹಾಕಿದ್ದಲ್ಲದೆ ದಂಡವನ್ನೂ ವಿಧಿಸಿತ್ತು. ಈ ಎಲ್ಲಾ ಕಾರಣಗಳಿಂದ ವಿಮಾನ ಸೇವಾ ಸಂಸ್ಥೆ ಮದ್ಯ ಪೂರೈಕೆ ನೀತಿಯನ್ನೇ ಬದಲಿಸಿದೆ.

ಜನವರಿ 19ರಂದು ಹೊರಡಿಸಿರುವ ಈ ಪರಿಷ್ಕೃತ ನೀತಿಯ ಪ್ರಕಾರ ಪ್ರಯಾಣಿಕರು ಕ್ಯಾಬಿನ್ ಸಿಬ್ಬಂದಿ ನೀಡದ ಹೊರತು ಮದ್ಯ ಸೇವನೆ ಮಾಡುವಂತಿಲ್ಲ. ಹಾಗೂ ತಾವೇ ಮದ್ಯವನ್ನ ತಂದಿದ್ದರೂ ಸಹ ವಿಮಾನದಲ್ಲಿ ಸೇವಿಸುವಂತಿಲ್ಲ. ಇಷ್ಟಾದ ಮೇಲೂ ಮದ್ಯ ಸೇವನೆ ಮಾಡುತ್ತಿದ್ದರೆ ಅದನ್ನ ಕ್ಯಾಬಿನ್ ಸಿಬ್ಬಂದಿ ಗಮನಿಸಿ ನಿಗದಿತ ಪ್ರಮಾಣದಲ್ಲಿ ಮಾತ್ರ ಸೇವನೆ ಮಾಡಲು ಅನುಮತಿ ನೀಡಬೇಕು. ಹಾಗೇನಾದ್ರೂ ಪ್ರಯಾಣಿಕರು ಹೆಚ್ಚು ಮದ್ಯವನ್ನ ಕೇಳಿದ್ರೆ ನಿರಾಕರಿಸಿ ಮನವರಿಕೆ ಮಾಡಿಕೊಡಬೇಕೆಂದು ಹೊಸ ರೂಲ್ಸ್​ನಲ್ಲಿದೆ.

ಇದೇ ವೇಳೆ ಏರ್ ಇಂಡಿಯಾ ವಿಮಾನ ಸಿಬ್ಬಂದಿಯೂ ಏನು ಮಾಡಬೇಕು, ಏನು ಮಾಡಬಾರದು ಅನ್ನೋ ಬಗ್ಗೆಯೂ ನಿಯಮ ರೂಪಿಸಲಾಗಿದೆ. ಪ್ರಯಾಣಿಕರೊಂದಿಗೆ ಸಭ್ಯವಾಗಿ ವರ್ತಿಸಬೇಕು. ಉತ್ತಮ ನಿರ್ಣಯಗಳನ್ನ ತಿಳಿದುಕೊಳ್ಳಬೇಕು. ಹೆಚ್ಚಿನ ಮದ್ಯ ನೀಡುವುದಿಲ್ಲ ಎಂದು ಪ್ರಯಾಣಿಕರಿಗೆ ಮನವರಿಕೆ ಮಾಡಿಸುವ ನೈಪುಣ್ಯತೆ ಹೊಂದಿರಬೇಕು. ಹಾಗೂ ವಿನಯದಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದೆ. ಪ್ರಯಾಣಿಕರಿಗೆ ವಿಮಾನದಲ್ಲಿ ಮದ್ಯ ನೀಡುವ ಪದ್ದತಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.  ಸಂತೋಷಕ್ಕಾಗಿ ಮದ್ಯ ಸೇವನೆ ಹಾಗೂ ಅತಿಯಾಗಿ ಮದ್ಯಸೇವನೆ ಮಾಡುವುದರ ನಡುವೆ ವ್ಯತ್ಯಾಸವಿದೆ ಎಂದು ಹೇಳಿದೆ.

ನಿಯಮ ತಿದ್ದುಪಡಿಯಲ್ಲಿ ಕ್ಯಾಬಿನ್ ಸಿಬ್ಬಂದಿಗೆ ಏರ್ ಇಂಡಿಯಾ ಸಂಸ್ಥೆ ಹೆಚ್ಚಿನ ಅಧಿಕಾರ ನೀಡಿದೆ. ಅಶಿಸ್ತಿನಿಂದ ನಡೆದುಕೊಳ್ಳುವ ಮತ್ತು ಅತಿಯಾಗಿ ಮದ್ಯ ಸೇವಿಸುವವರ ಮೇಲೆ ನಿಯಂತ್ರಣಕ್ಕೆ ಸೂಚಿಸಿದೆ. ಅಂತಹ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಣೆ, ಮದ್ಯ ಪೂರೈಕೆ ಸ್ಥಗಿತ ಹಾಗೂ  ಅಂತವರನ್ನ ವಿಮಾನದಿಂದಲೇ ಕೆಳಗಿಳಿಸುವ ಅಧಿಕಾರವನ್ನೂ ನೀಡಿದೆ.

suddiyaana