ವೃದ್ಧಾಶ್ರಮದಲ್ಲೇ ಮೂಡಿತು ಪ್ರೀತಿ! – ಎಪ್ಪತ್ತನೇ ವಯಸ್ಸಲ್ಲಿ ಮದುವೆಯಾದ ಜೋಡಿ..

ವೃದ್ಧಾಶ್ರಮದಲ್ಲೇ ಮೂಡಿತು ಪ್ರೀತಿ! – ಎಪ್ಪತ್ತನೇ ವಯಸ್ಸಲ್ಲಿ ಮದುವೆಯಾದ ಜೋಡಿ..

ಪ್ರೀತಿ ಕುರುಡು ಅನ್ನೋ ಮಾತಿದೆ. ಹಾಗಾಗಿ ಯಾವ ವಯಸ್ಸಿನಲ್ಲಿಯೂ, ಯಾರಿಗೆ ಬೇಕಾದರೂ ಪ್ರೀತಿ ಹುಟ್ಟಬಹುದು. ಈ ಮಾತಿಗೆ ನಿದರ್ಶನವೆಂಬಂತೆ ಅನೇಕ ಜೋಡಿಗಳು ನಮ್ಮ ಕಣ್ಣ ಮುಂದೆ ಇದ್ದಾರೆ. ದೆಹಲಿ ಲ್ಯಾಂಡ್ ಮತ್ತು ಫೈನಾನ್ಸ್ ಗ್ರೂಪ್‌ನ ಮಾಜಿ ಮುಖ್ಯಸ್ಥ ಮತ್ತು ಹಾಲಿ ಅಧ್ಯಕ್ಷ ಕುಶಾಲ್ ಪಾಲ್ ಸಿಂಗ್ ತಮ್ಮ 91 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಜೋಡಿ ಸುದ್ದಿಯಲ್ಲಿದೆ.

ಇದನ್ನೂ ಓದಿ:  91ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿಗೆ ಪ್ರೇಮಾಂಕುರ – ಕುಬೇರನ ಮನಗೆದ್ದ ಚೆಲುವೆ ಯಾರು ಗೊತ್ತಾ?

ಇದು ಮಹಾರಾಷ್ಟ್ರದ ʼಜಾನಕಿʼ ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ ಕಥೆ. ತನ್ನ ಪತ್ನಿಯನ್ನು ಕಳೆದುಕೊಂಡು  ಕಳೆದ ಕೆಲ ವರ್ಷಗಳಿಂದ ಜಾನಕಿ ವೃದ್ಧಾಶ್ರಮದಲ್ಲಿ ಬಾಬುರಾವ್ ಪಾಟೀಲ್ ಎಂಬುವವರು ವಾಸಿಸುತ್ತಿದ್ದಾರೆ. ಇತ್ತ ಪತಿ ನಿಧನದ ಬಳಿಕ ವೃದ್ಧಾಶ್ರಮವನ್ನೇ ಮನೆ ಮಾಡಿಕೊಂಡು ಅನುಸಯಾ ಶಿಂಧೆ ಕೂಡ ಅಲ್ಲೇ ನೆಲೆಸಿದ್ದರು. ಇದೀಗ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ತಮ್ಮ ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹೌದು, 75 ವರ್ಷದ ಬಾಬುರಾವ್‌ ಹಾಗೂ 70 ವರ್ಷದ ಅನುಸಯಾ ಶಿಂಧೆ ಅವರ ಬದುಕಿನ ಒಂಟಿತನಕ್ಕೆ ನೆರವಾದದ್ದು “ಜಾನಕಿʼ ವೃದ್ದಾಶ್ರಮ. ಪ್ರತಿನಿತ್ಯ ನಗುಮುಖದ ಮಾತಿನೊಂದಿಗೆ ಆರಂಭವಾಗುತ್ತಿದ್ದ ಬಾಬುರಾವ್‌, ಅನುಸಯಾ ಅವರ ದಿನಚರಿ, ದಿನಕಳೆದಂತೆ ಅವರಿಬ್ಬರು ಹೆಚ್ಚು ಹೆಚ್ಚು ಆತ್ಮೀಯರಾಗುತ್ತಾ ಹೋಗಿದ್ದಾರೆ. ಇದಾದ ಬಳಿಕ ಅವರ ಸ್ನೇಹ, ಪ್ರೀತಿಗೆ ತಿರುಗಿದೆ.

ವೃದ್ಧಾಶ್ರಮದಲ್ಲಿ ಇವರಿಬ್ಬರು ಅನ್ಯೋನ್ಯತೆಯಿಂದ ಇರುವುದನ್ನು ಕಂಡು ಆಶ್ರಮದಲ್ಲಿದ್ದವರು ನೀವಿಬ್ಬರು ಮದುವೆಯಾಗಿ ಎಂದು ಅನೇಕ ಬಾರಿ ಹೇಳಿದ್ದರಂತೆ. ಆದರೆ ಇದಕ್ಕೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲವಂತೆ. ಕೆಲ ದಿನಗಳ ಹಿಂದೆ ಬಾಬುರಾವ್, ಅನುಸಯಾ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದರಂತೆ. ಆದರೆ ಅನುಸಯಾ ಅವರು ಈ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರಂತೆ. ಎಂಟು ದಿನಗಳ ನಂತರ ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಇಬ್ಬರ ಮದುವೆಯನ್ನು ಆಶ್ರಮದಲ್ಲೇ ಎಲ್ಲರು ಸೇರಿಕೊಂಡು ನೆರವೇರಿಸಿದ್ದಾರೆ.

suddiyaana