ಜಂಬೂಸವಾರಿಗೆ ಕರೆತಂದಿದ್ದ ಆನೆಗೆ ಹೆರಿಗೆ! – ಹೆಣ್ಣು ಮರಿಗೆ ಜನ್ಮ ನೀಡಿದ ನೇತ್ರಾವತಿ!
ನಾಡಿನೆಲ್ಲೆಡೆ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ರಾಜ್ಯದ ಎರಡನೇ ಅತಿದೊಡ್ಡ ದಸರಾ ಎಂದು ಖ್ಯಾತಿ ಪಡೆದಿರುವ ಶಿವಮೊಗ್ಗ ದಸರಾ ಜಂಬೂ ಸವಾರಿಗೆ ಬಂದಿದ್ದ ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದೆ.
ವಿಜಯದಶಮಿ ಅದ್ದೂರಿ ದಸರಾ ಆಚರಣೆಗೆ ಸಕ್ರೆಬೈಲ್ ಆನೆ ಬಿಡಾರದ ಮೂರು ಆನೆಗಳು ಶಿವಮೊಗ್ಗಕ್ಕೆ ಬಂದಿದ್ದವು. ಅಂಬಾರಿ ಹೊರಲು ಆಗಮಿಸಿದ್ದ ಸಾಗರ್ ಜೊತೆಯಲ್ಲಿ ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಕೂಡ ಆಗಮಿಸಿದ್ದವು. ಸೋಮವಾರ ಶಿವಮೊಗ್ಗ ನಗರದ ಎಲ್ಲೆಡೆ ತಾಲೀಮು ನಡೆಸಿದ್ದವು. ಆದರೆ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಇದನ್ನೂ ಓದಿ: ನಾಡಿನಾದ್ಯಂತ ಕಳೆಗಟ್ಟಿದ ವಿಜಯದಶಮಿಯ ವೈಭವ – ನವರಾತ್ರಿಯ 10ನೇ ದಿನದಂದು ಆಚರಿಸುವ ಹಬ್ಬದ ಹಿನ್ನೆಲೆಯೇನು?
ಸಕ್ರೆಬೈಲ್ ಬಿಡಾರದ ಹೆಣ್ಣಾನೆಗಳ ಪೈಕಿ ಬಾನುಮತಿ ಪ್ರೆಗ್ನೆಂಟ್ ಆಗಿದ್ದಳು.ಇನ್ನು ಕುಂತಿ ಎಂಬ ಆನೆ ಕೂಡ ಈಗಷ್ಟೆ ಮರಿ ಹಾಕಿದ್ದಳು. ನೇತ್ರಾವತಿ ಸಹ ಗರ್ಭಿಣಿ ಎನ್ನಲಾಗಿತ್ತು. ಹಾಗಾಗಿ ಯಾವ ಆನೆಗಳನ್ನು ಕರೆತರಬೇಕು ಎಂಬ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಕೊನೆಗೆ ನೇತ್ರಾವತಿಯನ್ನು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕರೆತರಲಾಗಿತ್ತು. ಇದೀಗ ದಸರಾಕ್ಕೆ ಕರೆತಂದಿದ್ದ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ನೇತ್ರಾವತಿ ವಾಸವಿ ಶಾಲೆ ಆವರಣದಲ್ಲಿ ಮರಿ ಹಾಕಿದ್ದಾಳೆ. ಹೆಣ್ಣು ಮರಿ ಜನನವಾಗಿದ್ದು, ಆನೆ ಬಿಡಾರದ ಸಿಬ್ಬಂದಿಯಲ್ಲಿ ಹರ್ಷ ಮೂಡಿದೆ. ಇನ್ನೊಂದೆಡೆ ನೇತ್ರಾವತಿ ಮರಿ ಹಾಕಿರುವುದರಿಂದ ಜಂಬೂಸವಾರಿಯಲ್ಲಿ ಸಾಗರ್ ಆನೆ ಜೊತೆ ಹೇಮಾವತಿ ಆನೆಯನ್ನು ಸಹ ಬಳಸಿಕೊಳ್ಳಲು ಕಷ್ಟವಾಗಿದೆ. ಹೆಣ್ಣಾನೆ ಮರಿ ಹಾಕಿದ ನಂತರ ಅದರ ಜೊತೆಗಿನ ಸಂಬಂಧಿ ಆನೆ ಆರೈಕೆ ನೋಡಿಕೊಳ್ಳುತ್ತದೆ. ಸದ್ಯ ಜೊತೆಯಲ್ಲಿರುವ ಹೇಮಾವತಿ ಆನೆಯೇ ನೇತ್ರಾವತಿಯನ್ನ ಹಾಗೂ ಅದರ ಮರಿಯನ್ನು ನೋಡಿಕೊಳ್ಳುತ್ತಿದೆ.